ಮೈಸೂರು: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸ್ಥಾನ ಪಡೆದಿರುವ ಧಾರವಾಡಕ್ಕೆ ಇದೀಗ ಐಐಟಿಯೂ ದಕ್ಕುವ ಸಾಧ್ಯತೆ ಇದೆ. ಐಐಟಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದ ಮೈಸೂರು ಸ್ಪರ್ಧೆಯಿಂದ ಹೊರ ಬೀಳುವ ಸಾಧ್ಯತೆ ಇದ್ದು, ರಾಜ್ಯದ ಮೊದಲ ಐಐಟಿ ಧಾರವಾಡದಲ್ಲಿ ಸ್ಥಾಪನೆಯಾಗುವುದು ಬಹುತೇಕ ಖಚಿತವಾಗಿದ್ದು, ಘೋಷಣೆಯಷ್ಟೇ ಬಾಕಿ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೇಂದ್ರ ಸಚಿವ ಅನಂತ್‌ಕುಮಾರ್, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ಪ್ರಭಾವದಿಂದ ಐಐಟಿ ಧಾರವಾಡಕ್ಕೆ ದಕ್ಕುವ ಸಾಧ್ಯತೆ ಇದೆ ಎನ್ನಲಾಗಿದೆ.
ಐಐಟಿಯನ್ನು ಮೈಸೂರಿಗೆ ತರಲು ಸಂಸದ ಪ್ರತಾಪ್ ಸಿಂಹ ಅವರು ಸಾಕಷ್ಟು ಯತ್ನ ಮಾಡಿದ್ದಾರೆ. ಆದರೆ ಧಾರವಾಡದ ಪ್ರಭಾವಿ ನಾಯಕರಿಗೆ ಅವರು ಸಾಟಿಯಲ್ಲ ಎಂದು ಅವರು ಹೇಳಿದ್ದಾರೆ.
ಐಐಟಿಯ ಸ್ಥಳ ಆಯ್ಕೆ ಸಮಿತಿಯ ಸದಸ್ಯರು ಔಪಚಾರಿಕವಾಗಿ ಮೈಸೂರು, ಧಾರವಾಡ ಹಾಗೂ ರಾಯಚೂರಿಗೆ ಭೇಟಿ ನೀಡಿದ್ದಾರೆ. ಅಲ್ಲದೆ ಇದೊಂದು ಕಣ್ಣೋರೆಸುವ ತಂತ್ರ ಅಷ್ಟೇ. ಐಐಟಿಯನ್ನು ಧಾರವಾಡದಲ್ಲೇ ಸ್ಥಾಪಿಸಬೇಕು ಎಂದು ಈಗಾಗಲೇ ನಿರ್ಧರಿಸಲಾಗಿದೆ ಮತ್ತು ಈ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಸೃತಿ ಇರಾನಿ ಅವರು ಆಯ್ಕೆ ತಂಡಕ್ಕೆ ಸ್ಪಷ್ಟವಾಗಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರವಷ್ಟೇ ಧಾರವಾಡಕ್ಕೆ ಆಗಮಿಸಿದ್ದ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ತಾಂತ್ರಿಕ ಶಿಕ್ಷಣ ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ಆರ್.ಸುಬ್ರಮಣಿಯನ್ ನೇತೃತ್ವದ ಅಧಿಕಾರಿಗಳ ತಂಡ, ಜಿಲ್ಲಾಡಳಿತ ಐಐಟಿ ಸ್ಥಾಪನೆಗೆ ಗುರುತಿಸಿರುವ ಮುಮ್ಮಿಗಟ್ಟಿ ಗ್ರಾಮದ ಬಳಿಯ ಕೆಐಡಿಬಿ ವ್ಯಾಪ್ತಿಯಲ್ಲಿರುವ 960 ಎಕರೆ ಜಾಗವನ್ನು ವೀಕ್ಷಿಸಿತು. ಬಳಿಕ, ತುರ್ತು ಆರಂಭಕ್ಕೆ ಬೇಕಿರುವ ಆಡಳಿತ ಕಚೇರಿ, ಅಲ್ಲಿನ ವಸತಿ ನಿಲಯ, ಕೃಷಿ ವಿಶ್ವವಿದ್ಯಾಲಯದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಸಾವಯವ ಕೃಷಿ ಸಂಸ್ಥೆಯ ಕಟ್ಟಡ ಹಾಗೂ ಪೊಲೀಸ್ ತರಬೇತಿ ಕೇಂದ್ರದ ವಸತಿ ನಿಲಯದ ಕಟ್ಟಡಕ್ಕೂ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
ಈ ವೇಳೆ ಸಂಸದ ಪ್ರಹ್ಲಾದ ಜೋಶಿ, ಜಿಲ್ಲಾಧಿಕಾರಿ ಪಿ.ರಾಜೇಂದ್ರ ಚೋಳನ್ ನೇತೃತ್ವದ ಅಧಿಕಾರಿಗಳ ತಂಡ ಹಾಗೂ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ| ಡಿ.ಪಿ.ಬಿರಾದಾರ ಅವರು ಕೇಂದ್ರದ ತಂಡಕ್ಕೆ ಈ ಭಾಗದಲ್ಲಿ ಐಐಟಿ ಸ್ಥಾಪನೆಗೆ ಇರುವ ಪೂರಕ ವಾತಾವರಣ, ಸೌಲಭ್ಯಗಳ ಕುರಿತಂತೆ ಅಗತ್ಯ ಮಾಹಿತಿ ನೀಡಿದ್ದರು.