ಕರ್ನಾಟಕ

ಸ್ಥಳೀಯರಿಗೆ ಉದ್ಯೋಗ ಕೊಡಿ: ಕೈಗಾರಿಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

Pinterest LinkedIn Tumblr

150908kpn65ಬೆಂಗಳೂರು, ಸೆ.8: ರಾಜ್ಯದಲ್ಲಿ ಹೊಸ ಕೈಗಾರಿಕಾ ನೀತಿ ಅನ್ವಯ 2019ರ ವೇಳೆಗೆ ಒಟ್ಟು 5 ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆ ಹಾಗೂ 15ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸುವ ಮಹತ್ವಾಕಾಂಕ್ಷೆ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ಕೋಲಾರ ಜಿಲ್ಲೆ ವೇಮಗಲ್‌ನಲ್ಲಿ ಟಾಟಾ ಪವರ್ ಕಂಪೆನಿ ಲಿ., ಸ್ಟ್ರಾಟಜಿಕ್ ಎಂಜಿನಿಯರಿಂಗ್ ವಿಭಾಗ(ಟಾಟಾ ಪವರ್ ಎಸ್‌ಇಡಿ)ದ ಗ್ರೀನ್ ಫೀಲ್ಡ್ ರಕ್ಷಣಾ ಉತ್ಪಾದನಾ ಘಟಕದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕೋಲಾರದ ನರಸಾಪುರದಲ್ಲಿ 1,329 ಎಕರೆ, ವೇಮಗಲ್‌ನಲ್ಲಿ 666.41 ಎಕರೆ ಪ್ರದೇಶದಲ್ಲಿ ನೂತನ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿದ್ದು, ಈ ಕೀರ್ತಿ ನಮ್ಮ ರೈತರಿಗೆ ಸಲ್ಲಬೇಕು ಎಂದರು.
ಈ ಕೈಗಾರಿಕಾ ಪ್ರದೇಶದಲ್ಲಿ ಪ್ರತಿಷ್ಠಿತ ಕಂಪೆನಿಗಳಾದ ಹೋಂಡಾ ಮೋಟಾರ್ ಸೈಕಲ್ಸ್ ಆ್ಯಂಡ್ ಸ್ಕೂಟರ್ಸ್‌ ಇಂಡಿಯಾ ಲಿ., ಮಹೀಂದ್ರ ಏರೊಸ್ಪೇಸ್, ಸ್ಕ್ಯಾನಿಯಾ, ಎಕ್ಸಿಡಿ ಕ್ಲಚ್ ಮುಂತಾದ ಕಂಪೆನಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಸಿದ್ದರಾಮಯ್ಯ ಬಣ್ಣಿಸಿದರು.
ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಪವರ್ ಕಂಪೆನಿ ಲಿ., ಸ್ಟ್ರಾಟಜಿಕ್ ಎಂಜಿನಿಯರಿಂಗ್ ವಿಭಾಗ(ಟಾಟಾ ಪವರ್ ಎಸ್‌ಇಡಿ)ದ ಗ್ರೀನ್ ಫೀಲ್ಡ್ ರಕ್ಷಣಾ ಉತ್ಪಾದನಾ ಘಟಕ, ಶಿವಂ ಆಟೋಟೆಕ್ ಹಾಗೂ ಜಪಾನಿನ ಕಂಪೆನಿ ಮಿತ್ಸುಬಿ ಎಲಿವೇಟರ್ಸ್‌ ಘಟಕಗಳ ಸ್ಥಾಪನೆ ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ನಾಂದಿಯಾಗಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.
ಮೇಲ್ಕಂಡ ಕೈಗಾರಿಕೆಗಳಿಂದ ಸುಮಾರು 1,970ಕೋಟಿ ರೂ.ಬಂಡವಾಳ ಹೂಡಿಕೆ ನಿರೀಕ್ಷೆ ಇದೆ. ಅಲ್ಲದೆ, 2,300 ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದ ಅವರು, ನೂತನ ಕೈಗಾರಿಕಾ ನೀತಿಯನ್ವಯ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ನಾನು ಈ ಕೈಗಾರಿಕೆಗಳಲ್ಲಿ ಮನವಿ ಮಾಡುತ್ತೇನೆ. ಕೈಗಾರೀಕರಣದ ಮೂಲಕ ಸ್ಥಳೀಯ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ನಮ್ಮ ಸರಕಾರದ ಮುಖ್ಯ ಗುರಿ ಎಂದರು.
ಬೆಂಗಳೂರನ್ನು ಬಿಟ್ಟು ರಾಜ್ಯದ ಇತರೆ ಭಾಗಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯ ಕೈಗಾರಿಕಾಭಿವೃದ್ಧಿಯ ಮೇಲೆ ನಮ್ಮ ಪ್ರಯತ್ನವನ್ನು ಕೇಂದ್ರೀಕರಿಸಿದ್ದೇವೆ ಎಂದ ಅವರು, ಕೋಲಾರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರಕಾರ ಶ್ರಮಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಟಾಟಾ ಪವರ್ ಎಸ್‌ಇಡಿನ ಮುಖ್ಯಸ್ಥ ರಾಹುಲ್ ಚೌಧರಿ ಮಾತನಾಡಿ, ನಾಲ್ಕು ದಶಕಗಳಲ್ಲಿ ಟಾಟಾ ಪವರ್ ಎಸ್‌ಇಡಿ ಸ್ವದೇಶಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಉತ್ಪಾದನೆಯತ್ತ ಗಮನವನ್ನು ಕೇಂದ್ರೀಕರಿಸಿದೆ. ಈ ತಿಂಗಳು ನಾವು 64ನೆ ಆಕಾಶ್ ಏರ್ ಫೋರ್ಸ್ ಲಾಂಚರ್‌ನ್ನು ಪೂರೈಸಿದ್ದೇವೆ. ಇದೊಂದು ಸ್ವದೇಶಿ ಶಸ್ತ್ರಾಸ್ತ್ರ ವ್ಯವಸ್ಥೆಯ ಅತಿದೊಡ್ಡ ಸರಣಿಯಲ್ಲೊಂದಾಗಿದೆ ಎಂದರು.
ವೇಮಗಲ್ ಹೂಡಿಕೆ ‘ಮೇಕ್ ಇನ್ ಇಂಡಿಯಾ’ ಉಪಕ್ರಮದಡಿ ಕಂಪೆನಿಯ ಬದ್ಧತೆಯ ನಿಟ್ಟಿನಲ್ಲಿ ನಡೆಯಲಿದೆ ಮತ್ತು ಈ ಘಟಕವು ಸ್ಟ್ರಾಟಜಿಕ್ ರಕ್ಷಣಾ ವಿಭಾಗದಲ್ಲಿ ಸ್ವಾವಲಂಬನೆ ಸಾಧಿಸುವ ರಾಷ್ಟ್ರೀಯ ಪ್ರಯತ್ನಕ್ಕೆ ಮುಡಿಪಾಗಿರಲಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ 80ರ ದಶಕದಲ್ಲಿ ನಮ್ಮ ಘಟಕ ಆರಂಭದಿಂದಲೂ ರಾಜ್ಯ ಸರಕಾರ ನೀಡುತ್ತಿರುವ ಪ್ರೋತ್ಸಾಹಕ್ಕೆ ನಾವು ಆಭಾರಿಗಳಾಗಿದ್ದೇವೆ ಎಂದು ಹೇಳಿದರು.
ಕೋಲಾರ ಉಸ್ತುವಾರಿ ಸಚಿವ ಯು.ಟಿ.ಖಾದರ್, ಬೃಹತ್ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ವರ್ತೂರು ಪ್ರಕಾಶ್, ವಿವಿಧ ಕಂಪೆನಿಗಳ ಮುಖ್ಯಸ್ಥರು, ಅಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದರು.

ಕೋಲಾರದಲ್ಲಿ ಉದ್ಘಾಟನೆಗೊಂಡ ಕೈಗಾರಿಕೆಗಳಿಂದ ಸುಮಾರು 1,970ಕೋಟಿ ರೂ.ಬಂಡವಾಳ ಹೂಡಿಕೆ ನಿರೀಕ್ಷೆ ಇದೆ. ಅಲ್ಲದೆ, 2,300 ಜನರಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ನೂತನ ಕೈಗಾರಿಕಾ ನೀತಿಯನ್ವಯ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ನಾನು ಈ ಕೈಗಾರಿಕೆಗಳಲ್ಲಿ ಮನವಿ ಮಾಡುತ್ತೇನೆ. ಕೈಗಾರೀಕರಣದ ಮೂಲಕ ಸ್ಥಳೀಯ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ನಮ್ಮ ಸರಕಾರದ ಮುಖ್ಯ ಗುರಿ.
ಸಿದ್ದರಾಮಯ್ಯ, ಮುಖ್ಯಮಂತ್ರಿ

Write A Comment