ಹೊಸದಿಲ್ಲಿ, ಸೆ. 8: ಭಾರತದಲ್ಲಿ ಪ್ರವೇಶ ಹಂತದ (ಆರಂಭಿಕ) ವೇತನಗಳು ಏಶ್ಯ ಪೆಸಿಫಿಕ್ ವಲಯದಲ್ಲೇ ಅತ್ಯಂತ ಕಡಿಮೆಯೆಂದು ವೃತ್ತಿಪರ ಸೇವಾ ಸಂಸ್ಥೆಯಾಗಿರುವ ‘ಟವರ್ಸ್ ವಾಟ್ಸನ್’ ನಡೆಸಿರುವ ಅಧ್ಯಯನವೊಂದು ತಿಳಿಸಿದೆ.
ಭಾರತದಲ್ಲಿ ಸರಾಸರಿ ಮಾಸಿಕ ಆರಂಭಿಕ ವೇತನವು ಸುಮಾರು 400ಡಾಲರ್ (ರೂ.24ಸಾವಿರ) ಆಗಿದ್ದು, ದಕ್ಷಿಣಕೊರಿಯ ಮತ್ತು ಸಿಂಗಾಪುರಗಳಲ್ಲಿ ನೀಡಲಾಗುವ ಆರಂಭಿಕ ವೇತನದ ಐದನೆ ಒಂದರಷ್ಟು ಮಾತ್ರವಾಗಿದೆಯೆಂದು ಟವರ್ಸ್ ಡಾಟಾ ಸರ್ವಿಸಸ್ನ ಅಧ್ಯಯನ ಹೇಳಿದೆ.
ಭಾರತದ ಪದವೀಧರ ನೌಕರರು ಆರಂಭಿಕ ವೇತನದ ವಿಚಾರದಲ್ಲಿ ಏಶ್ಯ ಪೆಸಿಫಿಕ್ ದೇಶಗಳಲ್ಲಿ ಅತ್ಯಂತ ಕೆಳಗಿನ ಸ್ಥಾನದಲ್ಲಿದ್ದಾರೆ. ಇದು ಬಹುರಾಷ್ಟ್ರೀಯ ಕಂಪೆನಿಗಳಿಗೆ ಇತರ ಏಶ್ಯ-ಪೆಸಿಫಿಕ್ ರಾಷ್ಟ್ರಗಳಿಗಿಂತ ಸ್ಪರ್ಧಾತ್ಮಕ ಅನುಕೂಲವನ್ನು ಕಲ್ಪಿಸಲಿರುವುದರಿಂದ, ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಉತ್ತಮ ಭವಿಷ್ಯವನ್ನು ಸೂಚಿಸುತ್ತದೆಯೆಂದು ಅದು ತಿಳಿಸಿದೆ.
ಹಾಲಿ ವಿನಿಮಯ ದರವನ್ನು ಅವಲಂಬಿಸಿದ್ದರೂ, ಅಧ್ಯಯನವು ಸ್ಪರ್ಧಾತ್ಮಕ ಹಾಗೂ ಆಕರ್ಷಕ ಕಾರ್ಮಿಕ ಶಕ್ತಿ ಹಾಗೂ ಕೌಶಲ ಮಾರುಕಟ್ಟೆಯಾಗಿ ಭಾರತದ ಸ್ಥಾನದ ಬಗ್ಗೆ ಸ್ಪಷ್ಟವಾಗಿ ಬೆಳಕು ಚೆಲ್ಲಿದೆಯೆಂದು ಟವರ್ಸ್ ವಾಟ್ಸನ್ನಲ್ಲಿ ಏಶ್ಯ-ಪೆಸಿಫಿಕ್ ವಲಯದ ದತ್ತಾಂಶ ಸೇವೆಗಳ ಪದ್ಧತಿಯ ಮುಖ್ಯಸ್ಥ ಸಂಭವ ರಕ್ಷಣ್ ಹೇಳಿದ್ದಾರೆ.
ಏಶ್ಯ ಪೆಸಿಫಿಕ್ನ ಅಗ್ರ 11 ಆರ್ಥಿಕತೆಗಳಲ್ಲಿ, ಭಾರತವು ಸರಾಸರಿ ಆರಂಭಿಕ ಮಾಸಿಕ ವೇತನದ ವಿಷಯದಲ್ಲಿ 9ನೆ ಸ್ಥಾನದಲ್ಲಿದೆ.
ವೇತನಗಳಲ್ಲಿನ ಈ ಅಸಮತೆಯು, ಹೇಗೆ ಒಂದು ವಿಶಾಲ ಜ್ಞಾನದ ರಾಶಿ ಹಾಗೂ ಒಂದು ಗಮನಾರ್ಹ ವೆಚ್ಚ ಚೌಕಾಶಿಯು ಭಾರತವನ್ನು ಹೊರಗುತ್ತಿಗೆ ಸೇವೆಗಳನ್ನು ಒದಗಿಸುವಲ್ಲಿ ಪ್ರಥಮ ಸ್ಥಾನಿಯನ್ನಾಗಿಸಿವೆಯೆಂಬುದನ್ನು ಸಹ ವಿವರಿಸುತ್ತದೆಯೆಂದು ರಕ್ಷಣ್ ಹೇಳಿದ್ದಾರೆ.
ಐಟಿ/ಬಿಪಿಒದಲ್ಲಿ ಭಾರೀ ಯಶಸ್ಸು ಸಾಧಿಸಿದ ಬಳಿಕ ಭಾರತವೀಗ, ಉತ್ಪಾದನೆಯಂತಹ ಇತರ ವಲಯಗಳಿಗೆ ಸ್ವಾಭಾವಿಕ ಆಯ್ಕೆಯಾಗಬಲ್ಲುದೆಂದು ಅವರು ಅಭಿಪ್ರಾಯಿಸಿದ್ದಾರೆ.
ಭಾರತದಲ್ಲಿ, ಮಧ್ಯಮ ಆಡಳಿತ ಹಂತದಲ್ಲಿ ಅನುಭವಿ ವೃತ್ತಿಪರರ ವೇತನಗಳು ಸ್ವಲ್ಪ ಹೆಚ್ಚು ಸ್ಪರ್ಧಾತ್ಮಕವಾಗಿವೆ ಆದರೂ, ಅದು ಅದರ ಏಶ್ಯ-ಪೆಸಿಫಿಕ್ ಸೋದ್ಯೋಗಿಗಳಿಗಿಂತ ಕಡಿಮೆಯೇ ಇದೆ.
ಉತ್ಪಾದನಾ ವಲಯದಲ್ಲಿ ಇತ್ತೀಚಿನ ಪ್ರಗತಿ ಹಾಗೂ ಐಟಿ ವಲಯದ ಜನಪ್ರಿಯತೆಯ ಹೊರತಾಗಿಯೂ, ಭಾರತದಲ್ಲಿ ಎಂಜಿನಿಯರ್ ಮ್ಯಾನೇಜರ್ ಒಬ್ಬ ಸರಾಸರಿ 56,530 ಡಾಲರ್ ಸಂಬಳ ಪಡೆಯುತ್ತಾನೆ. ಆದರೆ, ಅದು ಆತನ ಚೀನಿ ಸೋದ್ಯೋಗಿಯ ಸಂಬಳದ ಅರ್ಧದಷ್ಟು (1,12070ಡಾ.) ಹಾಗೂ ಸಿಂಗಾಪುರದ ಸೋದ್ಯೋಗಿಯ ವೇತನದ ಮೂರನೆ ಒಂದರಷ್ಟು (1,51,168ಡಾ.) ಆಗಿರುತ್ತದೆಂದು ವರದಿ ಹೇಳಿದೆ.
ವಲಯದಲ್ಲಿ ಸಾಮಾನ್ಯ ಕಾರ್ಮಿಕ ಮಾರುಕಟ್ಟೆಯೊಂದರ ಹೊರತಾಗಿಯೂ, ಅಗ್ರ ಆರ್ಥಿಕತೆಗಳಲ್ಲಿ ಖಾತ್ರಿ ನಗದು ಮಟ್ಟಗಳು ಹೇಗೆ ಬೇರೆಬೇರೆಯಾಗಿದೆಯೆಂಬುದು ಕಣ್ಣಿಗೆ ರಾಚುವಂತಿದೆಯೆಂದು ರಕ್ಷಣ್ ತಿಳಿಸಿದ್ದಾರೆ.
ರಾಷ್ಟ್ರೀಯ