ಕರ್ನಾಟಕ

‘ಲೋಕಾ’ ಭ್ರಷ್ಟಾಚಾರ ಪ್ರಕರಣ: ಪ್ರಮುಖ ನಾಲ್ವರು ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ಜಾಮೀನು

Pinterest LinkedIn Tumblr

Karnataka High Court_PTI_0_0

ಬೆಂಗಳೂರು, ಸೆ.8: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ಪ್ರಮುಖ ನಾಲ್ವರು ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ಇಂದು ಕಠಿಣಬದ್ಧ ಷರತ್ತುಗಳ ಮೇಲೆ ಜಾಮೀನು ನೀ‌ಡಿದೆ.

ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಲೋಕಾಯುಕ್ತ ಜಂಟಿ ಆಯುಕ್ತ (ಪಿಆರ್ಒ) ಸೈಯದ್ ರಿಯಾಜ್, ಸಹಚರರಾದ ಶಂಕರೇಗೌಡ, ಅಶೋಕ್ ಕುಮಾರ್ ಹಾಗೂ ಶ್ರೀನಿವಾಸ್ ಗೌಡ ಸಲ್ಲಿಸಿದ ಜಾಮೀನು ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್ ಇಂದು ಜಾಮೀನು ನೀಡಿದೆ.

ಆದರೆ ಈ ಜಾಮೀನು ಸೆ. 16 ರಿಂದ ಅನ್ವಯವಾಗಲಿದ್ದು, ಇನ್ನೂ 9 ದಿನಗಳ ಕಾಲ ಬಿಡುಗಡೆ ಭಾಗ್ಯ ಇಲ್ಲದಂತಾಗಿದೆ.

ಬಂಧಿತರ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿದ್ದು, ಈ ಆರೋಪವನ್ನು ಪರಿಣಾಮಕಾರಿಯಾಗಿ ಸಾಬೀತುಪಡಿಸಲು ಬಲವಾದ ಚಾರ್ಜ್‌ಶೀಟ್ ದಾಖಲಿಸುವ ಅಗತ್ಯವಿದೆ. ಅದಕ್ಕಾಗಿ ಕನಿಷ್ಠ ಒಂದು ವಾರಗಳ ಕಾಲಾವಕಾಶ ನೀಡಬೇಕೆಂದು ಕೋರಿ ಸರಕಾರಿ ವಿಶೇಷ ಅಭಿಯೋಜಕರು ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಈ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಸೆ. 16ರ ವರೆಗೂ ಕಾಲಾವಕಾಶ ನೀಡಿದ್ದು, ಈ ಅವಧಿಯೊಳಗಾಗಿ ತನಿಖೆಯನ್ನು ಪೂರ್ಣಗೊಳಿಸಿ, ಚಾರ್ಜ್‌ಶೀಟ್ ದಾಖಲಿಸಬೇಕೆಂದು ಸರಕಾರಿ ವಕೀಲರಿಗೆ ಸೂಚಿಸಿತ್ತು.

ಆರೋಪಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಪಡಿಸುವುದಾಗಲಿ, ಸಾಕ್ಷಿಗಳ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಒತ್ತಡ ತರುವುದಾಗಲಿ ಹಾಗೂ ನಗರ ಬಿಟ್ಟು ಪಲಾಯನ ಮಾಡುವುದಾಗಲಿ ಮಾಡಬಾರದು. ಅಲ್ಲದೇ ಪೊಲೀಸರು ಹೇಳಿದಾಗ ಹಾಜರಾಗಿ ತನಿಖೆಗೆ ಸಹಕಾರ ನೀಡಬೇಕು ಎಂದೂ ಸೂಚಿಸಿದರು.

ಒಂದು ವೇಳೆ ಈ ಷರತ್ತುಗಳ ಉಲ್ಲಂಘನೆಯಾಗಿದ್ದಲ್ಲಿ ಜಾಮೀನು ತಕ್ಷಣ ರದ್ದಾಗುವುದು ಎಂದು ಸಹ ಹೈಕೋರ್ಟ್ ಎಚ್ಚರಿಕೆ ನೀಡಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್‌ರಾವ್ ಪುತ್ರ ಅಶ್ವಿನ್ ರಾವ್ ಸೇರಿದಂತೆ ಒಟ್ಟು 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈಗ ನಾಲ್ವರಿಗೆ ಮಾತ್ರ ಜಾಮೀನು ಸಿಕ್ಕಿದೆ. ತನಿಖೆ ಇನ್ನೂ ಮುಂದುವರಿದಿದ್ದು, ಇನ್ನೂ ಚಾರ್ಜ್‌ಶೀಟ್ ದಾಖಲಾಗಿಲ್ಲ.

Write A Comment