ಕರ್ನಾಟಕ

ರಾಜ್ಯದಲ್ಲಿ ಮಳೆ ಬೀಳದಿದ್ದರೆ ವಿದ್ಯುತ್ ಕಡಿತ ಮುಂದುವರಿಕೆ: ಪರಿಸ್ಥಿತಿ ನಿಭಾಯಿಸಲು ವಿದ್ಯುತ್ ಖರೀದಿ; ಲೋಡ್‌ಶೆಡ್ಡಿಂಗ್ ವೇಳಾಪಟ್ಟಿ ಪ್ರಕಟ

Pinterest LinkedIn Tumblr

powerಬೆಂಗಳೂರು, ಸೆ.7: ರಾಜ್ಯದಲ್ಲಿ ಪ್ರತಿನಿತ್ಯ 3,400 ಮೆಗಾವ್ಯಾಟ್‌ನಷ್ಟು ವಿದ್ಯುತ್ ಕೊರತೆಯಿದ್ದು, ಮಳೆ ಬಿದ್ದರೆ ಮಾತ್ರ ಪರಿಸ್ಥಿತಿ ಸುಧಾರಿಸಲಿದೆ. ಇಲ್ಲವಾದರೆ ಮುಂದಿನ ಮುಂಗಾರಿನವರೆಗೂ ವಿದ್ಯುತ್ ಅಭಾವ ಸ್ಥಿತಿ ಮುಂದುವರಿಯಲಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಧಾನಸೌಧದ ತನ್ನ ಕೊಠಡಿಯಲ್ಲಿ ಇಂಧನ ಇಲಾಖೆ ಉನ್ನತ ಮಟ್ಟದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿನಿತ್ಯ 9 ಸಾವಿರ ಮೆ.ವ್ಯಾ. ವಿದ್ಯುತ್ ಬೇಡಿಕೆಯಿದ್ದು, 5,600 ಮೆ.ವ್ಯಾ ವಿದ್ಯುತ್ ಲಭ್ಯವಿದೆ. ಉಳಿದ 3,400 ಮೆ.ವ್ಯಾ.ನಷ್ಟು ವಿದ್ಯುತ್ ಕೊರತೆಯಿದೆ ಎಂದರು.
ವಿದ್ಯುತ್ ಅಭಾವ ಸ್ಥಿತಿ ನಿಭಾಯಿಸಲು ಸರಕಾರ ಹಾಗೂ ಇಂಧನ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಆದರೂ ಮಳೆ ಬಾರದಿದ್ದರೆ ವಿದ್ಯುತ್ ಪರಿಸ್ಥಿತಿ ಸುಧಾರಿಸುವುದು ಕಷ್ಟ ಸಾಧ್ಯ. ಹೀಗಾಗಿ ಮುಂದಿನ ದಿನಗಳಲ್ಲಿ ವಿದ್ಯುತ್ ಅಭಾವ ಸ್ಥಿತಿ ಮತ್ತಷ್ಟು ಕಠಿಣ ಆಗುವ ಸಾಧ್ಯತೆಗಳಿವೆ ಎಂದು ಶಿವಕುಮಾರ್ ಸ್ಪಷ್ಟಣೆ ನೀಡಿದರು. ರಾಜ್ಯದ ಜಲಾಶಯಗಳಲ್ಲಿ ಶೇ.50ರಷ್ಟು ನೀರಿನ ಸಂಗ್ರಹ ಕಡಿಮೆಯಾಗಿದ್ದು, ಆ ಹಿನ್ನೆಲೆಯಲ್ಲಿ 1 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆಯಲ್ಲಿ ಕೊರತೆ ಉಂಟಾಗಿದೆ. ಅಲ್ಲದೆ, ಪವನ ವಿದ್ಯುತ್ ಉತ್ಪಾದನೆಯಲ್ಲಿಯೂ ತೀವ್ರ ಕೊರತೆಯಾಗಿದೆ ಎಂದು ಶಿವಕುಮಾರ್ ತಮ್ಮ ಅಸಹಾಯಕತೆಯನ್ನು ಬಹಿರಂಗಪಡಿಸಿದರು.
ಲೋಡ್ ಶೆಡ್ಡಿಂಗ್ ಅಧಿಕೃತ ಪ್ರಕಟ: ಅನಿಯಮಿತ ಲೋಡ್ ಶೆಡ್ಡಿಂಗ್ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ನಗರ-ಗ್ರಾಮೀಣ ಪ್ರದೇಶದಲ್ಲಿ ಲೋಡ್ ಶೆಡ್ಡಿಂಗ್ ವೇಳಾಪಟ್ಟಿಯನ್ನು ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ತೀವ್ರ ಸ್ವರೂಪದ ವಿದ್ಯುತ್ ಕೊರತೆ ಹಿನ್ನೆಲೆಯಲ್ಲಿ ರೈತರು ತಮ್ಮ ಬೆಳೆ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದ ಶಿವಕುಮಾರ್, ಗ್ರಾಮೀಣ ಪ್ರದೇಶಕ್ಕೆ ಎಷ್ಟು ಗಂಟೆ ವಿದ್ಯುತ್ ಪೊರೈಕೆ ಮಾಡಲಾಗುತ್ತದೆಂಬ ನಿಖರ ಮಾಹಿತಿಯನ್ನು ಮೊಬೈಲ್ ಮೂಲಕವೂ ತಲುಪಿಸಲಾಗುವುದು ಎಂದು ಹೇಳಿದರು.
ವಿದ್ಯುತ್ ಕೊರತೆ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಈಗಾಗಲೇ 700 ಮೆ.ವ್ಯಾ. ವಿದ್ಯುತ್ ಖರೀದಿಗೆ ವಿವಿಧ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 400 ಮೆ.ವ್ಯಾ. ವಿದ್ಯುತ್ ಖರೀದಿಸಲಾಗುತ್ತಿದೆ. ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ 350 ಮೆ.ವ್ಯಾ. ವಿದ್ಯುತ್ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯುತ್ ದೊರೆಯಲಿದೆ ಎಂದು ಹೇಳಿದರು. ತೆಲಂಗಾಣ ರಾಜ್ಯಕ್ಕೆ ಕೇಂದ್ರದಿಂದ ಪೂರೈಕೆ ಆಗುತ್ತಿರುವ ವಿದ್ಯುತ್ ಖರೀದಿಗೂ ತೀರ್ಮಾನಿಸಿದ್ದು, ಈ ತಿಂಗಳ ಅಂತ್ಯಕ್ಕೆ ಕೂಡಂಕುಳಂನಿಂದ ವಿದ್ಯುತ್ ಬರಲಿದ್ದು, ದಾಮೋದರ ಕಣಿವೆಯಿಂದ 400 ವೆ.ವ್ಯಾ. ವಿದ್ಯುತ್ ಸಿಗಲಿದೆ ಎಂದ ಅವರು, ಬಳ್ಳಾರಿ ಯರಮರಸ್‌ನಿಂದ ಚಿಕ್ಕನಾಯಕನಹಳ್ಳಿಗೆ 1ಸಾವಿರ ಕಿ.ಮೀ. ಉದ್ದದ 400ಕೆ.ವಿ ಹೊಸ ವಿದ್ಯುತ್ ಮಾರ್ಗ ಅಳವಡಿಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
3 ಸಾವಿರ ಕೋಟಿ ರೂ.ಬಾಕಿ ಗ್ರಾಪಂ, ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆ, ಮಹಾನಗರ ಪಾಲಿಕೆಗಳು ಸೇರಿ ಸ್ಥಳೀಯ ಸಂಸ್ಥೆಗಳಿಂದ ಇಲಾಖೆಗೆ 3 ಸಾವಿರ ಕೋಟಿ ರೂ.ವಿದ್ಯುತ್ ಬಿಲ್ ಬಾಕಿ ಇದೆ. ಆದರೂ, ಇಂಧನ ಇಲಾಖೆ ವಿದ್ಯುತ್ ಕಡಿತ ಮಾಡಿಲ್ಲ. ಗ್ರಾಮೀಣ ಪ್ರದೇಶ ಸೇರಿ ಕುಡಿಯುವ ನೀರಿನ ಪಂಪ್ ಸೆಟ್‌ಗಳಿಗೆ ವಿದ್ಯುತ್ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಬಾಕಿ ಪಾವತಿಸುವ ಷರತ್ತಿನ ಮೇಲೆ ಸ್ಥಳೀಯ ಸಂಸ್ಥೆಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

Write A Comment