ರಾಷ್ಟ್ರೀಯ

ಪುಣೆ ಎಫ್‌ಟಿಐಐ ವಿವಾದ: ಮಧ್ಯಪ್ರವೇಶಕ್ಕೆ ಸುಪ್ರೀಂಕೋರ್ಟ್ ನಕಾರ

Pinterest LinkedIn Tumblr

Suprim-courtಹೊಸದಿಲ್ಲಿ, ಸೆ.7: ಪುಣೆಯ ಚಲನಚಿತ್ರ ಮತ್ತು ಟೆಲಿವಿಝನ್‌ನ ಭಾರತೀಯ ಸಂಸ್ಥೆಗೆ ಅಧ್ಯಕ್ಷರಾಗಿ ಗಜೇಂದ್ರ ಚೌಹಾಣ್‌ರ ನೇಮಕಾತಿಯ ವಿಚಾರದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಬಗ್ಗೆ ಮಧ್ಯಪ್ರವೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ಅರ್ಜಿದಾರರ ಪರ ವಕೀಲ ವಿನೀತ್ ಥಂಡಾ, ವಿದ್ಯಾರ್ಥಿಗಳ ಮುಷ್ಕರದಿಂದಾಗಿ ಪ್ರತಿಷ್ಠಿತ ಸಂಸ್ಥೆ ಹದಗೆಟ್ಟಿದೆ. ಸರಕಾರವೂ ಪರಿಹಾರ ಹುಡುಕಲು ಏನೂ ಮಾಡುತ್ತಿಲ್ಲ. ಮಹಾರಾಷ್ಟ್ರ ಸರಕಾರವು ತರಗತಿಗಳಿಗೆ ಹಾಜರಾಗಬಯಸುವ ವಿದ್ಯಾರ್ಥಿಗಳಿಗೆ ಭದ್ರತೆಯನ್ನು ಒದಗಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಬೇಕೆಂದು ವಾದಿಸಿದರು.
ಆದರೆ, ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು. ಅಲ್ಪಕಾಲಿಕ ಟಿವಿ ನಟ ಹಾಗೂ ಬಿಜೆಪಿ ಸದಸ್ಯ ಗಜೇಂದ್ರ ಚೌಹಾಣ್‌ರನ್ನು ಅಧ್ಯಕ್ಷರನ್ನಾಗಿ ನೇಮಿಸಿದುದನ್ನು ವಿದ್ಯಾರ್ಥಿಗಳು ಪ್ರತಿಭಟಿಸುತ್ತಿರುವುದರಿಂದ. ಅಗ್ರ ಚಿತ್ರ ಸಂಸ್ಥೆಯಲ್ಲಿ ಮೂರು ತಿಂಗಳುಗಳಿಂದ ತರಗತಿಗಳು ಅಮಾನತುಗೊಂಡಿವೆ.
ಕಳೆದ ತಿಂಗಳಂತ್ಯದಲ್ಲಿ ಸರಕಾರವು, ಮೂವರು ಸದಸ್ಯರ ನಿಯೋಗವೊಂದನ್ನು ಕಳುಹಿಸಿದ್ದು, ಅದು ಮುಷ್ಕರವನ್ನು ಕೊನೆಗೊಳಿಸುವುದಕ್ಕಾಗಿ ವಿದ್ಯಾರ್ಥಿಗಳು ಸಹಿತ ಸಂಬಂಧಿಸಿದ ಅನೇಕರಲ್ಲಿ ಮಾತುಕತೆ ನಡೆಸಿತ್ತು. ಸರಕಾರವು ವಿವಿಧ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳನ್ನು ‘ಕೇಸರೀಕರಿಸುತ್ತಿದೆ’ ಹಾಗೂ ಅವುಗಳ ಸ್ವಾಯತ್ತೆಗೆ ಧಕ್ಕೆ ತರುತ್ತಿದೆಯೆಂದು ಆರೋಪಿಸಿ ಸುದೀರ್ಘ ಕಾಲದಿಂದ ನಡೆಸುತ್ತಿರುವ ಚಳವಳಿಗೆ ಪರಿಹಾರದ ಭರವಸೆಯನ್ನು ಮೂಡಿಸಿದ್ದ ಎಸ್.ಎಂ.ಖಾನ್ ನೇತೃತ್ವದ ನಿಯೋಗ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿತ್ತು. ಬಳಿಕ, ಭಾಗವಹಿಸಿದ್ದವರೆಲ್ಲರೂ ಚರ್ಚೆ ‘ತೃಪ್ತಿಕರವಾಗಿತ್ತೆಂದು’ ವಿವರಿಸಿದ್ದರು.
ಚೌಹಾಣ್ ಹಾಗೂ ಎಫ್‌ಟಿಐಐ ಆಡಳಿತ ಮಂಡಳಿಯ ನಾಲ್ವರು ಸದಸ್ಯರನ್ನು ವಜಾಗೊಳಿಸಬೇಕು. ಅವರಿಗೆ ಅರ್ಹತೆಯಾಗಲಿ ಸ್ಥಾನಮಾನವಾಗಲಿ ಇಲ್ಲ ಎಂಬುದು ಸಹಿತ ವಿದ್ಯಾರ್ಥಿಗಳ ಬೇಡಿಕೆಯ ಬಗ್ಗೆ ಹಾಗೂ ಪ್ರದರ್ಶನವೊಂದರ ವೇಳೆ ಐವರು ವಿದ್ಯಾರ್ಥಿಗಳ ಬಂಧನಕ್ಕೆ ಕಾರಣವಾದ, ಎಫ್‌ಟಿಐಐ ನಿರ್ದೇಶಕರ ವಿವಾದಿತ ಪೊಲೀಸ್ ದೂರಿನ ಕುರಿತು ಸರಕಾರಿ ನಿಯೋಗವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ನಿರೀಕ್ಷಿಸಲಾಗಿದೆ.

Write A Comment