ಕರ್ನಾಟಕ

ಹಣ ಪಾವತಿ ವಿಳಂಬ: ಓಲಾ, ಉಬರ್ ಚಾಲಕರ ಪ್ರತಿಭಟನೆ

Pinterest LinkedIn Tumblr

Uberಬೆಂಗಳೂರು, ಸೆ. 3: ಸ್ವಲ್ಪ ಸಮಯದ ಹಿಂದೆ ಓಲಾ ಮತ್ತು ಉಬರ್ ಕ್ಯಾಬ್ ಸೇವೆ ಆರಂಭಗೊಂಡಾಗ ಅದಕ್ಕೆ ಸೇರಲು ಚಾಲಕರು ತುದಿಗಾಲಲ್ಲಿ ನಿಂತಿದ್ದರು. ಈಗ ಈ ಕ್ಯಾಬ್ ಕಂಪೆನಿಗಳಲ್ಲಿ ಚಾಲಕರಾಗಿ ದುಡಿಯುತ್ತಿರುವವರಲ್ಲಿ ಅಸಹನೆ ಹೆಪ್ಪುಗಟ್ಟಿದೆ. ಸೋಮವಾರ ಓಲಾ ಕ್ಯಾಬ್ ಕಚೇರಿಯ ಎದುರು ಅದರ ಚಾಲಕರು ಬೃಹತ್ ಪ್ರತಿಭಟನೆ ನಡೆಸಿದರು. ಉಬರ್ ಚಾಲಕರು ತಮ್ಮ ಕಂಪೆನಿಯ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ಎರಡೂ ಪ್ರತಿಭಟನೆಗಳಿಗೆ ಕಾರಣ ಹಣ ಪಾವತಿ ವಿಳಂಬ. ವಿವಾದವನ್ನು ಸ್ಥಳದಲ್ಲೇ ಸೌಹಾರ್ದಯುತವಾಗಿ ಬಗೆಹರಿಸಲಾಗಿದೆ ಎಂದು ಕಂಪೆನಿಗಳು ಹೇಳಿಕೊಂಡಿವೆ.
‘‘ಹೆಚ್ಚಿನ ಬಾಡಿಗೆಯ ಕಾರಣದಿಂದ ಜನರು ನಮ್ಮ ಕ್ಯಾಬ್‌ಗಳನ್ನು ಬಾಡಿಗೆಗೆ ಪಡೆದುಕೊಳ್ಳುತ್ತಿಲ್ಲ. ತಮ್ಮನ್ನು ವಂಚಿಸಲಾಗಿದೆ ಎಂಬುದಾಗಿ ಅವರು ನಮ್ಮ ಮೇಲೆ ಆರೋಪ ಹೊರಿಸುತ್ತಾರೆ. ಆದರೆ ಅವರಿಗೆ ವಾಸ್ತವ ಗೊತ್ತಿಲ್ಲ. ಆಡಳಿತವು ಮೂಲ ದರಕ್ಕಿಂತ ತುಂಬಾ ಹೆಚ್ಚಿನದನ್ನು ಅವರಿಂದ ವಸೂಲು ಮಾಡುತ್ತದೆ ಹಾಗೂ ಅವರು ನಗದು ರೂಪದಲ್ಲಿ ಹಣ ಕೊಡದಂತೆ, ಬದಲಿಗೆ ‘ವರ್ಚುವಲ್ ವ್ಯಾಲೆಟ್’ (ಹಣಕಾಸು ಕಂಪೆನಿ) ಮೂಲಕ ಪಾವತಿಸುವಂತೆ ಮಾಡುತ್ತದೆ. ಕಂಪೆನಿಯು ದೊಡ್ಡ ಪ್ರಮಾಣದಲ್ಲಿ ಬಾಡಿಗೆ ಪಡೆಯುತ್ತದಾದರೂ, ನಮಗೆ ಜುಜುಬಿ 150 ರೂಪಾಯಿ ಕೊಡುತ್ತದೆ’’ ಎಂದು ಓಲಾ ಕ್ಯಾಬೀ ಸ್ವಾಮಿ ಗೌಡ ಹೇಳುತ್ತಾರೆ.
ಇನ್ನೋರ್ವ ಓಲಾ ಚಾಲಕ ಖಲಂದರ್ ಅನಿಯಮಿತ ಭತ್ತೆ ಪಾವತಿಯ ಬಗ್ಗೆ ದೂರುತ್ತಾರೆ. ‘‘ಆಡಳಿತವು ನಮಗೆ 12 ಟ್ರಿಪ್‌ಗಳ ಬಳಿಕ 500 ರೂ. ಮತ್ತು 14 ಟ್ರಿಪ್‌ಗಳನ್ನು ಪೂರೈಸಿದ ಬಳಿಕ 750 ರೂಪಾಯಿ ನೀಡುತ್ತದೆ. ಶನಿವಾರ ಮತ್ತು ರವಿವಾರಗಳಂದು 14 ಟ್ರಿಪ್‌ಗಳಿಗೆ ನಮಗೆ 1,000 ರೂಪಾಯಿ ಸಿಗುತ್ತದೆ. ಕಳೆದ ರವಿವಾರ ನಾನು ಇಡೀ ದಿನ ಕಾರು ಚಲಾಯಿಸುತ್ತಿದ್ದೆ. ಬೆಳಗ್ಗಿನಿಂದ ಮಧ್ಯ ರಾತ್ರಿವರೆಗೆ 13 ಟ್ರಿಪ್‌ಗಳನ್ನು ನಾನು ಮಾಡಿದೆ. ಕೊನೆಯ ಕ್ಷಣದಲ್ಲಿ ಗ್ರಾಹಕರೊಬ್ಬರು ಒಂದು ಟ್ರಿಪ್ಪನ್ನು ರದ್ದುಗೊಳಿಸಿದುದಕ್ಕಾಗಿ ನನ್ನ ಸಂಪೂರ್ಣ ಭತ್ತೆಯನ್ನು ಕಂಪೆನಿ ರದ್ದುಪಡಿಸಿತು. ಇಡೀ ದಿನ ಕೆಲಸ ಮಾಡಿದ ಬಳಿಕ ಪ್ರಯಾಣಿಕರಿಂದ ನಿಂದನೆಗೊಳಗಾದದ್ದು ಮತ್ತು ಕಂಪೆನಿಯಿಂದ ವಂಚಿಸಲ್ಪಟ್ಟಿದ್ದೇ ಬಂತು’’ ಎಂದು ಖಲಂದರ್ ಬೇಸರಿಸುತ್ತಾರೆ.
‘‘ನಿಗದಿತ ದರಕ್ಕಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚು ಬಾಡಿಗೆ ಪಡೆಯುವ ಮೂಲಕ ಕಂಪೆನಿಯು ಗ್ರಾಹಕ ರನ್ನು ವಂಚಿಸುತ್ತದೆ. ಆ ಹಣ ನಮಗ ಸಿಗುವುದಿಲ್ಲ. ಅದೆಲ್ಲವೂ ಕಂಪೆನಿಯ ಕಿಸೆಗೆ ಹೋಗುತ್ತದೆ. ಕಾನೂನಿನ ಪ್ರಕಾರ, ‘ಪೀಕ್ ಅವರ್ ಸರ್ಚಾರ್ಜ್’ (ನಿಬಿಡ ಅವಧಿಯ ಶುಲ್ಕ) ಎಂಬುದಿಲ್ಲ. ನಾಲ್ಕು ತಿಂಗಳ ಹಿಂದೆ ನಮಗೆ ಪ್ರತಿ ಬಾಡಿಗೆಗೆ 150 ರೂ. ಭತ್ತೆ ಸಿಗುತ್ತಿತ್ತು. ಈಗ ಆಡಳಿತವು ಅದನ್ನೂ ನಿಲ್ಲಿಸಿದೆ’’ ಎಂದು ಉಬರ್ ಚಾಲಕರೊಬ್ಬರು ಹೇಳಿದರು.
ಹೀಗೆ ಹೆಚ್ಚಿನವರು ವಿವಿಧ ಕಂಪೆನಿಗಳ ಉದ್ಯೋಗಿಗಳನ್ನು ಮತ್ತು ಪ್ರವಾಸಿಗರನ್ನು ಸಾಗಿಸುವ ಕಾಯಕಕ್ಕೆ ಮರಳಿದ್ದಾರೆ ಎಂದು ಇನ್ನೊಬ್ಬ ಉಬರ್ ಚಾಲಕರು ನುಡಿದರು.

Write A Comment