ಕರ್ನಾಟಕ

ಅಹಿಂದವೂ ನಮ್ಮಿಂದ ದೂರ: ಡಾ.ಜಿ.ಪರಮೇಶ್ವರ್ ಹೊಸ ‘ಬಾಂಬ್‌

Pinterest LinkedIn Tumblr

parameshಬೆಂಗಳೂರು: ‘ಅಹಿಂದ’ ವರ್ಗಗಳ ಮತದಾರರನ್ನೂ ಕಾಂಗ್ರೆಸ್‌ ಕಳೆದುಕೊಳ್ಳುತ್ತಿದೆ ಎಂಬುದು ಬಿಬಿಎಂಪಿ ಚುನಾವಣೆ ಫಲಿತಾಂಶದಿಂದ ಗೊತ್ತಾಗುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೊಸ ‘ಬಾಂಬ್‌’ ಸಿಡಿಸಿದ್ದಾರೆ.

ಪಾಲಿಕೆ ಚುನಾವಣೆಯ ಫಲಿತಾಂಶದ ಬಗ್ಗೆ ಪಕ್ಷದ ಹೈಕಮಾಂಡ್‌ ಯಾವುದೇ ವರದಿ ಕೇಳಿಲ್ಲ. ಆದರೂ, ಫಲಿತಾಂಶವನ್ನು ವಿಶ್ಲೇಷಿಸಿ, ವರಿಷ್ಠರಿಗೆ ವರದಿ ಕಳುಹಿಸುವ ಸಿದ್ಧತೆಯಲ್ಲಿ ಪರಮೇಶ್ವರ್ ಇದ್ದಾರೆ. ಈ ಸಂದರ್ಭದಲ್ಲೇ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದರು.

‘ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ (ಅಹಿಂದ) ವರ್ಗಗಳು ಕಾಂಗ್ರೆಸ್ ಜೊತೆ ಗುರುತಿಸಿಕೊಳ್ಳುತ್ತವೆ ಎಂಬ ಸಾಮಾನ್ಯ ನಂಬಿಕೆ ಇದೆ. ಆದರೆ, ಈ ಚುನಾವಣೆಯಲ್ಲಿ ಅಹಿಂದ ವರ್ಗಗಳೂ ನಮ್ಮಿಂದ ದೂರವಾಗಿವೆ. ಇದು ನಮ್ಮ ಪಾಲಿಗೆ ಗಂಭೀರ ವಿಚಾರ’ ಎಂದರು.

‘ಈ ವರ್ಗ ಕಾಂಗ್ರೆಸ್ಸಿನಿಂದ ದೂರವಾಗಲು ಕಾರಣ ಏನು’ ಎಂದು ಪ್ರಶ್ನಿಸಿದಾಗ, ‘ಪಕ್ಷದ ಸಾಂಪ್ರದಾಯಿಕ ಮತಗಳನ್ನೂ ಕಳೆದುಕೊಂಡಿದ್ದೇಕೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಉತ್ತರಿಸಿದರು.

‘ಅಹಿಂದ ವರ್ಗಗಳ ದೊಡ್ಡ ಪ್ರಮಾಣದ ಮತ ನಮ್ಮ ಪಕ್ಷಕ್ಕೆ ಲಭಿಸಿಲ್ಲ. ಇದು ತಲೆಬಿಸಿಯ ವಿಚಾರ. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದ ಸಮಯ ಇದು. ಪಕ್ಷದ ಹಳೆಯ ನಿಲುವುಗಳನ್ನೇ ಮುಂದುವರಿಸಲಾಗದು. ಅಹಿಂದ ವರ್ಗಗಳ ಜೊತೆ ನಾವು ಪ್ರಬಲ ಸಮುದಾಯಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.

‘ಹಲವು ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕೇವಲ 500 ಮತಗಳ ಅಂತರದಿಂದ ಸೋತರು. 100ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಪಕ್ಷಕ್ಕೆ ಇತ್ತು. ಇಷ್ಟು ಸ್ಥಾನ ಪಡೆಯುವ ಅವಕಾಶ ಇತ್ತು. ಆದರೆ, ದುರದೃಷ್ಟದ ಕಾರಣ ಅದು ಸಾಧ್ಯವಾಗಲಿಲ್ಲ’ ಎಂದರು.

‘ಮತದಾನದ ದಿನ ಮಧ್ಯಾಹ್ನದವರೆಗೆ ಜನ ಮತಗಟ್ಟೆಗೆ ದೊಡ್ಡ ಸಂಖ್ಯೆಯಲ್ಲಿ ಬರಲಿಲ್ಲ. ಪ್ರಬಲ ಸಮುದಾಯಗಳಿಗೆ ಸೇರಿದವರು, ಐ.ಟಿ ಕಂಪೆನಿಗಳ ನೌಕರರು ಮತ ಹಾಕಲು ಬಂದಿಲ್ಲ ಎನ್ನಲಾಯಿತು. ಆದರೆ ಕೊನೆಯ ಹಂತದಲ್ಲಿ ಮತದಾನದ ಸಂಖ್ಯೆ ಹೆಚ್ಚಾಯಿತು. ತಳಮಟ್ಟದಲ್ಲಿ ಏನಾಯಿತು ಎಂಬುದು ಗೊತ್ತಿಲ್ಲ’ ಎಂದು ಹೇಳಿದರು.

‘ಪಾಲಿಕೆಯನ್ನು ಮೂರು ಭಾಗಗಳನ್ನಾಗಿ ವಿಭಜಿಸುವ ಸರ್ಕಾರದ ನಿಲುವನ್ನು ಜನ ಒಪ್ಪಲಿಲ್ಲ ಎಂದು ನಮ್ಮ ಕೆಲವು ಮುಖಂಡರು ಹೇಳುತ್ತಿದ್ದಾರೆ. ಆದರೆ, ಪಕ್ಷದ ಪ್ರಚಾರ ತಂತ್ರಗಾರಿಕೆಯಲ್ಲಿ ಯಾವುದೇ ತಪ್ಪು ಆಗಿಲ್ಲ. ಬಂಡಾಯದ ಸಮಸ್ಯೆ ಕೂಡ ಇರಲಿಲ್ಲ. ಕೇವಲ 10 ಜನ ಬಂಡಾಯ ಅಭ್ಯರ್ಥಿಗಳು ಕಣದಲ್ಲಿದ್ದರು’ ಎಂದು ಹೇಳಿದರು.

ಸಚಿವ ಸಂಪುಟದ ಪುನರ್‌ ರಚನೆ ಮತ್ತು ಖಾತೆಗಳ ಮರು ಹಂಚಿಕೆಗೆ ಇದು ಸೂಕ್ತ ಸಮಯ. ಇದರಿಂದ ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು ಎಂದು ಪರಮೇಶ್ವರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Write A Comment