ಕರ್ನಾಟಕ

ಮುಂಡರಗಿ, ಚನ್ನಮ್ಮನಕಿತ್ತೂರು, ರಾಮದುರ್ಗ ಬಂದ್ ಆಚರಣೆ: ಮಹಾದಾಯಿ ಹೋರಾಟ ಮತ್ತೆ ರೈತಸೇನಾ ತೆಕ್ಕೆಗೆ

Pinterest LinkedIn Tumblr

mahadayiಹುಬ್ಬಳ್ಳಿ: ಮಹಾದಾಯಿ ಯೋಜನೆ ಅನುಷ್ಠಾನಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಅಂಗಳಕ್ಕೆ ರೈತಸೇನಾ ಸಂಘಟನೆ ಮತ್ತೆ ಇಳಿದಿದೆ. ನರಗುಂದದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ರೈತಸೇನಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ, ಕಾರ್ಯದರ್ಶಿ ಶಂಕರಣ್ಣ ಅಂಬಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಮತ್ತೆ ಹೋರಾಟದ ಮುಖ್ಯ ವೇದಿಕೆ ಏರಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಸಾವಿರಾರು ರೈತರು ಹಾಗೂ ವಿವಿಧ ಮಠಾಧೀಶರು ಇದಕ್ಕೆ ಸಾಕ್ಷಿಯಾದರು. ಆಗಸ್ಟ್‌ 27ರಂದು ಗುಂಪೊಂದು ನಡೆಸಿದ ದಾಂದಲೆ ಹಾಗೂ ಹಲ್ಲೆ ಯತ್ನದ ನಂತರ ವೇದಿಕೆಯಿಂದ ದೂರ ಉಳಿದಿದ್ದ ರೈತಸೇನಾ ಮುಖಂಡರು ಐದು ದಿನಗಳ ನಂತರ ಮತ್ತೆ ನರಗುಂದ ಪಟ್ಟಣಕ್ಕೆ ಬಂದರು. ವೇದಿಕೆಗೆ ಬಂದವರನ್ನು ಹಸಿರು ಶಾಲು ಬೀಸುತ್ತಾ, ಚಪ್ಪಾಳೆ ತಟ್ಟಿ ನೆರೆದವರು ಸ್ವಾಗತಿಸಿದರು.

ರೈತರನ್ನುದ್ದೇಶಿಸಿ ಮಾತನಾಡಿದ ವೀರೇಶ ಸೊಬರದಮಠ, ಸರ್ಕಾರದಿಂದ ಹಣ ಪಡೆದಿರುವುದು ಸಾಬೀತಾದಲ್ಲಿ ವೇದಿಕೆ ಎದುರಿನ ಬೇವಿನ ಮರಕ್ಕೆ ನೇಣು ಹಾಕಿಕೊಳ್ಳುವುದಾಗಿ ಪುನರುಚ್ಚರಿಸಿದರು. ಮಹಾದಾಯಿ ನೀರು ಹರಿಯುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದರು.

ವೇದಿಕೆಯಿಂದ ತೆರಳಿದರು: ಐದು ದಿನಗಳಿಂದ ಹೋರಾಟವನ್ನು ಮುನ್ನಡೆಸಿದ್ದ ವಿಜಯ ಕುಲಕರ್ಣಿ ನೇತೃತ್ವದ ಕಳಸಾ–ಬಂಡೂರಿ ಹೋರಾಟ ಸಮಿತಿ ಸದಸ್ಯರು, ರೈತ ಸೇನಾ ಮುಖಂಡರು ವೇದಿಕೆಗೆ ಬರುವ ಮುನ್ನವೇ ವೇದಿಕೆ ಬಿಟ್ಟು ತೆರಳಿದರು. ಬೆಳಿಗ್ಗೆ ಹೋರಾಟದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ವಿಜಯ ಕುಲಕರ್ಣಿ ಮಧ್ಯಾಹ್ನದ ನಂತರ ಬರಲಿಲ್ಲ.

ಜೋಶಿ ಮನೆಗೆ ಮುತ್ತಿಗೆ ಯತ್ನ: ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಹುಬ್ಬಳ್ಳಿಯ ಮಯೂರಿ ಎಸ್ಟೇಟ್‌ನಲ್ಲಿರುವ ಸಂಸದ ಪ್ರಹ್ಲಾದ ಜೋಶಿ ಅವರ ಮನೆಗೆ ರೈತರು ಮುತ್ತಿಗೆ ಹಾಕಲು ಯತ್ನಿಸಿದರು.

ಮಧ್ಯಾಹ್ನ 12ರಿಂದ ಸಂಜೆ 4ರ ವರೆಗೂ ಹುಬ್ಬಳ್ಳಿ ಸುತ್ತಮುತ್ತಲಿನ ಹಲವು ಗ್ರಾಮಗಳ ರೈತರು ಟ್ರ್ಯಾಕ್ಟರ್‌, ಎತ್ತಿನಗಾಡಿಗಳೊಂದಿಗೆ ಬೆಳಿಗ್ಗೆಯೇ ಬಂದು ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ನಾಲ್ಕು ಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದರು. ನಂತರ ಜೋಶಿ ಅವರ ಮನೆಯತ್ತ ಹೊರಟ ರೈತರನ್ನು ಇಲ್ಲಿನ ರಮೇಶ ಭವನದ ಬಳಿಯೇ  ಪೊಲೀಸರು ತಡೆದರು.

ಮುಂದುವರಿದ ಹೋರಾಟ: ಯೋಜನೆ ಅನುಷ್ಠಾನಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಮುಂಬೈ ಕರ್ನಾಟಕ ಭಾಗದ ಗದಗ, ಧಾರವಾಡ, ಬಾಗಲಕೋಟೆ ಮತ್ತು ಬೆಳಗಾವಿ ಈನಾಲ್ಕು ಜಿಲ್ಲೆಗಳಲ್ಲಿ ತೀವ್ರಗೊಂಡಿದೆ. ಗದಗ ಜಿಲ್ಲೆಯ ಮುಂಡರಗಿ ಪಟ್ಟಣ, ರೋಣ ತಾಲ್ಲೂಕಿನ ಸೂಡಿ, ಕೊಡಗಾನೂರ, ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ಮತ್ತು ರಾಮದುರ್ಗದಲ್ಲಿ ಬಂದ್ ಆಚರಿಸಲಾಯಿತು.

*
ಟ್ರ್ಯಾಕ್ಟರ್‌ ಹಾಯಿಸಲು ಯತ್ನ…
ಹುಬ್ಬಳ್ಳಿಯಲ್ಲಿ ಸಂಸದ ಪ್ರಹ್ಲಾದ ಜೋಶಿ ಅವರ ಮನೆಯತ್ತ ತೆರಳುತ್ತಿದ್ದ ರೈತರನ್ನು ತಡೆಯಲು ಮುಂದಾದ ಎಸಿಪಿ ಸೋಮಲಿಂಗಪ್ಪ ಛಬ್ಬಿ ಅವರ ಮೇಲೆ ಉದ್ರಿಕ್ತರ ಗುಂಪೊಂದು ಟ್ರ್ಯಾಕ್ಟರ್‌ ಹಾಯಿಸಲು ಯತ್ನಿಸಿದ ಘಟನೆಯೂ ನಡೆಯಿತು. ಮೂರು ಬಾರಿ ಇಂತಹ ಪ್ರಯತ್ನ ಗಳು ನಡೆದವು. ಈ ಸಂದರ್ಭದಲ್ಲಿ ಪೊಲೀಸ್‌ ಜೀಪ್‌ ವೊಂದರ ಚಾಲಕ ಟ್ರ್ಯಾಕ್ಟರ್‌ಗೆ ಅಡ್ಡವಾಗಿ ಜೀಪ್‌ ನಿಲ್ಲಿಸಿದ್ದರಿಂದ ಅನಾಹುತ ತಪ್ಪಿತು.

Write A Comment