ಕರ್ನಾಟಕ

ಇಂದು ಮುಷ್ಕರ: ಹೊಸ ಕಾರ್ಮಿಕ ನೀತಿ, ರಸ್ತೆ ಸುರಕ್ಷತಾ ಮಸೂದೆಗೆ ವಿರೋಧ

Pinterest LinkedIn Tumblr

cituಬೆಂಗಳೂರು: ಹೊಸ ಕಾರ್ಮಿಕ ನೀತಿ, ರಸ್ತೆ ಸುರಕ್ಷತಾ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ  ಸಂಘಟನೆಗಳು ಬುಧವಾರ ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದ ಪರಿಣಾಮ ರಾಜ್ಯಕ್ಕೂ ತಟ್ಟಲಿದೆ. ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ದಟ್ಟವಾಗಿದೆ.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಈಶಾನ್ಯ ಸಾರಿಗೆ ನಿಗಮಗಳ ಲಕ್ಷಕ್ಕೂ ಅಧಿಕ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು, ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಬಸ್‌ ಸೇವೆ ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ‘ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌’ ಪ್ರಕಟಿಸಿದೆ.

ಖಾಸಗಿ ಬಸ್‌ಗಳ ಸೇವೆಯೂ ಲಭ್ಯ ಇರುವುದಿಲ್ಲ. ಆಟೊ ರಿಕ್ಷಾಗಳ ಸೇವೆ ಬಹುತೇಕ ಸ್ಥಗಿತಗೊಳ್ಳಲಿದೆ. ಬ್ಯಾಂಕ್ ಕಚೇರಿಗಳು ತೆರೆದಿದ್ದರೂ ಸೇವೆ ದೊರಕುವುದು ಅನುಮಾನ. ಅಂಚೆ ಕಚೇರಿಗಳು, ವಿಮಾ ಕಚೇರಿಗಳು, ಬಿಸಿಯೂಟ ಸೇವೆ ಬಂದ್‌ ಆಗಲಿದೆ. ಉಳಿದ ಸೇವೆಗಳು ಯಥಾಸ್ಥಿತಿಯಲ್ಲಿ ಇರಲಿವೆ.

ಖಾಸಗಿ ಬಸ್‌ ಬಂದ್‌:  ‘ಕಾರ್ಮಿಕರ ಬೇಡಿಕೆಗಳಿಗೆ ನಮ್ಮ ಬೆಂಬಲ  ಇಲ್ಲ. ಆದರೆ, ಖಾಸಗಿ ಬಸ್‌ಗಳಿಗೆ ಸರ್ಕಾರ ಭದ್ರತೆಯ ಭರವಸೆ ನೀಡಿಲ್ಲ. ಹೀಗಾಗಿ ಸ್ಟೇಟ್‌ ಕ್ಯಾರೇಜ್‌ನ 8 ಸಾವಿರ ಬಸ್‌ಗಳು ಸಂಚಾರ ಸ್ಥಗಿತಗೊಳಿಸಲಿವೆ’ ಎಂದು ಖಾಸಗಿ ಬಸ್‌ ಮಾಲೀಕರ ಒಕ್ಕೂಟದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ತಿಳಿಸಿದರು.

ಖಾಸಗಿ ಶಾಲೆಗಳಿಗೆ ರಜೆ: ‘ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘದ (ಕುಸ್ಮಾ) ವ್ಯಾಪ್ತಿಯ 1,800 ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬದಲಾಗಿ ಶನಿವಾರ ಸಂಜೆಯವರೆಗೂ ತರಗತಿಗಳನ್ನು ನಡೆಸಲಾಗುವುದು’ ಎಂದು ಕುಸ್ಮಾ ಕಾರ್ಯದರ್ಶಿ ಎ. ಮರಿಯಪ್ಪ ತಿಳಿಸಿದರು.
‘ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಆಯಾ ಆಡಳಿತ ಮಂಡಳಿಗಳಿಗೆ ಬಿಟ್ಟಿದ್ದೇವೆ. ಹೆಚ್ಚಿನ ಶಾಲೆಗಳು ರಜೆ ಘೋಷಿಸಿವೆ’ ಎಂದು ಖಾಸಗಿ ಶಾಲೆಗಳ ಸಂಘಟನೆಗಳ ಮುಖಂಡರು ತಿಳಿಸಿದರು.

‘ಬ್ಯಾಂಕ್‌ ನೌಕರರು ಕಚೇರಿಗಳಿಗೆ ಗೈರುಹಾಜರಾಗಲಿದ್ದಾರೆ. ಹೀಗಾಗಿ   ಬ್ಯಾಂಕ್‌ಗಳಲ್ಲಿ ಸೇವೆ ಲಭ್ಯ ಇರುವುದಿಲ್ಲ. ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಾಗೂ ಬ್ಯಾಂಕ್‌ ಆಫ್‌ ಬರೋಡಾದ ಕಚೇರಿಗಳು ತೆರೆದಿರಲಿವೆ’ ಎಂದು ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವಸಂತ ರೈ ತಿಳಿಸಿದರು. ಗ್ರಾಹಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಬಂದ್‌ಗೆ ಬೆಂಬಲ ನೀಡುತ್ತಿಲ್ಲ ಎಂದು ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್‌ ತಿಳಿಸಿದರು.

ಚಿತ್ರೋದ್ಯಮದ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ. ಸಿನಿಮಾಗಳ ಚಿತ್ರೀಕರಣ ನಡೆಯಲಿದ್ದು, ಚಿತ್ರಮಂದಿರಗಳು  ತೆರೆದಿರುತ್ತವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಥಾಮಸ್‌ ಡಿಸೋಜ ತಿಳಿಸಿದರು. ಮುಷ್ಕರ ವಾಪಸಿಗೆ

ಕೇಂದ್ರದ ಮನವಿ, (ನವದೆಹಲಿ ವರದಿ):  ದೇಶದ ಜನರ ಹಿತಾಸಕ್ತಿಗಾಗಿ ಮುಷ್ಕರ ಕೈಬಿಡುವಂತೆ ಕೇಂದ್ರ ಸರ್ಕಾರ ಕಾರ್ಮಿಕ ಸಂಘಟನೆಗಳಿಗೆ ಮನವಿ ಮಾಡಿಕೊಂಡಿದೆ. ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡರೂ ಮಾತುಕತೆ ಮುಂದುವರಿಯಲಿದೆ ಎಂದು ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ವರದಿಗಾರರಿಗೆ ತಿಳಿಸಿದ್ದಾರೆ.

ಹತ್ತು ಕೇಂದ್ರ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಭಾಗಿಯಾಗುತ್ತಿದ್ದು, ದೇಶದಾದ್ಯಂತ ಸರ್ಕಾರಿ ಹಾಗೂ ಖಾಸಗಿ ವಲಯದ 15 ಕೋಟಿ ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.  ಈ ನಡುವೆ ಬಿಜೆಪಿ ಬೆಂಬಲಿತ ಭಾರತೀಯ ಮಜ್ದೂರ್‌ ಸಂಘ ಹಾಗೂ ನ್ಯಾಷನಲ್‌ ಫ್ರಂಟ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ ಮುಷ್ಕರದಿಂದ ಹಿಂದೆ ಸರಿದಿವೆ.

ಲಭ್ಯ
ಎಟಿಎಂ ಸೇವೆ, ಆಸ್ಪತ್ರೆ, ಮೆಡಿಕಲ್‌ ಶಾಪ್‌ , ಅಂಗಡಿ ಮುಂಗಟ್ಟು
ಅಂಬುಲೆನ್ಸ್‌ ಸೇರಿದಂತೆ ತುರ್ತು ಸೇವೆ.
ಹಾಲು, ಟ್ಯಾಕ್ಸಿಗಳು, ಹೋಟೆಲ್, ರೆಸ್ಟೋರೆಂಟ್‌ಗಳು,ಲಾರಿಗಳು
ಚಿತ್ರಮಂದಿರಗಳು, ಮಾರುಕಟ್ಟೆಗಳು, ಮೆಟ್ರೊ ಸೇವೆ

ಅಲಭ್ಯ
ನಾಲ್ಕು ನಿಗಮಗಳ ಬಸ್‌ಗಳು ಖಾಸಗಿ ಬಸ್‌ಗಳು,ಖಾಸಗಿ ಶಾಲೆಗಳು
ಆಟೊ ರಿಕ್ಷಾಗಳು, ಅಂಗನವಾಡಿಗಳು, ಅಂಚೆ ಕಚೇರಿಗಳು, ಎಲ್‌ಐಸಿ ಕಚೇರಿಗಳು
ಬಿಸಿಯೂಟ, ಆಶಾ ಕಾರ್ಯಕರ್ತೆಯರ ಸೇವೆ ಸಾರ್ವಜನಿಕ ರಂಗದ ಕಾರ್ಖಾನೆಗಳು

ಅನುಮಾನ
ಬ್ಯಾಂಕ್‌ ಸೇವೆ ಸರ್ಕಾರಿ ಶಾಲೆಗಳು ಕಾಲೇಜುಗಳು ಪೆಟ್ರೋಲ್‌ ಬಂಕ್‌

Write A Comment