ಕರ್ನಾಟಕ

ಬಿಬಿಎಂಪಿ ಗದ್ದುಗೆಗೇರಲು ಪಕ್ಷಗಳ ರಣತಂತ್ರ ಅಧಿಕಾರಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಕಾರ್ಯಾಚರಣೆ : ರೆಸಾರ್ಟ್ ರಾಜಕಾರಣ ಶುರು

Pinterest LinkedIn Tumblr

bbmpಬೆಂಗಳೂರು, ಆ.29: ಬಿಬಿಎಂಪಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಹಾಗೂ ಜೆಡಿಎಸ್ ರಣತಂತ್ರ ರೂಪಿಸಿರುವ ಬೆನ್ನಲ್ಲೇ ಕಾರ್ಯಾಚರಣೆ ಯಶಸ್ವಿಗೊಳಿಸಲು ಜೆಡಿಎಸ್ ಕಾರ್ಯಪ್ರವೃತ್ತವಾಗಿದೆ. ಬಿಬಿಎಂಪಿಗೆ ಆಯ್ಕೆಯಾಗಿರುವ ಜೆಡಿಎಸ್ ಸದಸ್ಯರನ್ನು ಕೇರಳದ ಕೊಚ್ಚಿಗೆ ಕರೆದೊಯ್ಯಲಾಗಿದೆ. ಜೆಡಿಎಸ್ ಶಾಸಕರಾದ ಗೋಪಾಲಯ್ಯ, ಅಖಂಡ ಶ್ರೀನಿವಾಸ ಮೂರ್ತಿ ಸಾರಥ್ಯದಲ್ಲಿ ಜೆಡಿಎಸ್ ಪಾಲಿಕೆ ಸದಸ್ಯರು ರೆಸಾರ್ಟ್ಸ್‌ನಲ್ಲಿ ಮೋಜು ಅನುಭವಿಸುತ್ತಿದ್ದಾರೆ. ಈ ಮೂಲಕ ರೆಸಾರ್ಟ್ಸ್ ರಾಜಕಾರಣ ಇದೀಗ ಬಿಬಿಎಂಪಿಗೂ ವ್ಯಾಪಿಸಿದೆ. ಜೆಡಿಎಸ್ ಶಾಸಕ ಝಮೀರ್ ಅಹ್ಮದ್ ಖಾನ್ ತಮ್ಮ ಪಕ್ಷದ ಕಾರ್ಪೋರೇಟರ್‌ಗಳನ್ನು ವಿಮಾನದ ಮೂಲಕ ಕೇರಳಕ್ಕೆ ರವಾನಿಸಿದರು. ಯು.ಬಿ.ಸಿಟಿಯಲ್ಲಿರುವ ಅವರ ವಸತಿಗೃಹದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್‌ನಲ್ಲಿ ಕರೆದೊಯ್ಯಲಾಯಿತು. ಈ ಬಸ್‌ನ್ನು ಸ್ವತಃ ಝಮೀರ್ ಅಹ್ಮದ್ ಖಾನ್ ಅವರೇ ಚಲಾಯಿಸಿಕೊಂಡು ಹೋದರು. ಬಿಜೆಪಿ ಆಪರೇಷನ್ ಕಮಲ ಕಾರ್ಯಾಚರಣೆ ನಡೆಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ನಾವು ನಮ್ಮ ಪಕ್ಷದ ಪಾಲಿಕೆ ಸದಸ್ಯರನ್ನು ರಕ್ಷಿಸಿಕೊಳ್ಳುತ್ತಿದ್ದೇವೆ ಎಂದು ಅವರು ಇದಕ್ಕೆ ಕಾರಣವನ್ನೂ ನೀಡಿದರು.

ಝಮೀರ್ ಅಹ್ಮದ್ ಖಾನ್ ನಗರದಲ್ಲೇ ಬಿಡಾರ ಹೂಡಿ ಮೈತ್ರೀ ಮಾತುಕತೆ, ಮತ್ತಿತರ ಪ್ರಕ್ರಿಯೆಗಳಲ್ಲಿ ತೊಡಗಲಿದ್ದಾರೆ. ಕಾಂಗ್ರೆಸ್ ಪಾಳಯದಲ್ಲಿ ಈ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದರೂ, ಪಕ್ಷೇತರ ಬಿಬಿಎಂಪಿ ಸದಸ್ಯರನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಪೋಷಿಸುತ್ತಿದೆ. ಕೊಚ್ಚಿಯಲ್ಲಿ ಆರು ಮಂದಿ ಪಕ್ಷೇತರರನ್ನು ಇರಿಸಿರುವುದಾಗಿ ತಿಳಿದು ಬಂದಿದೆ. ಬಹುತೇಕ ಇನ್ನೊಂದು ವಾರ ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರು ಪ್ರವಾಸದಲ್ಲಿ ನಿರತರಾಗಲಿದ್ದಾರೆ. ಮೇಯರ್ ಚುನಾವಣೆ ವೇಳೆಗೆ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ.

ರಾಜಧಾನಿ ಪಾರುಪತ್ಯದ ವಿಚಾರದಲ್ಲಿ ಮೂರೂ ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಒಂದೆಡೆ ತಮ್ಮ ಪ್ರಯತ್ನದಲ್ಲಿ ನಿರತವಾಗಿದ್ದರೆ, ಬಿಜೆಪಿ ಸಹ ಜೆಡಿಎಸ್ ಮತ್ತು ಪಕ್ಷೇತರರ ಮನವೊಲಿಕೆಯಲ್ಲಿ ನಿರತವಾಗಿದೆ. ಈ ಬೆಳವಣಿಗೆಗಳ ನಡುವೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಅವರು ನಗರದ ಪದ್ಮನಾಭ ನಗರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿ, ಬಿಜೆಪಿಗೆ ಬೆಂಬಲ ನೀಡುವಂತೆ ಕೋರಿದರು. ಈ ಸಂದರ್ಭದಲ್ಲಿ ದೇವೇಗೌಡರು ಒಂದೆರಡು ದಿನಗಳಲ್ಲಿ ತನ್ನ ನಿರ್ಧಾರ ಪ್ರಕಟಿಸಿವುದಾಗಿ ತಿಳಿಸಿದರು ಎನ್ನಲಾಗಿದೆ. ಮತ್ತೊಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ನಿವಾಸದಲ್ಲಿ ನಿಗದಿಪಡಿಸಿದ್ದ ಬಹುತೇಕ ಸಭೆಗಳನ್ನು ರದ್ದುಗೊಳಿಸಿ ಬಿಬಿಎಂಪಿ ರಾಜಕಾರಣದಲ್ಲಿ ತೊಡಗಿಕೊಂಡರು. ಪಕ್ಷದ ಪ್ರಮುಖರ ಜತೆ ಈ ಬಗ್ಗೆ ಚರ್ಚೆ ನಡೆಸಿದರು. ಕೆಪಿಸಿಸಿ ಕಚೇರಿಯಲ್ಲಿ ಬಿಬಿಎಂಪಿ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ, ರಾಜಕೀಯ ಬೆಳವಣಿಗೆಗಳಿಗೆ ತಕ್ಕಂತೆ ಕೈಗೊಳ್ಳುವ ನಿರ್ಧಾರಗಳಿಗೆ ಎಲ್ಲರೂ ಸಜ್ಜಾಗಬೇಕು ಎಂದು ಸೂಚ್ಯವಾಗಿ ಹೇಳಿದರು. ಇದಾದ ನಂತರ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ: ಜಿ. ಪರಮೇಶ್ವರ್ ಬಿಬಿಎಂಪಿ ಅಧಿಕಾರ ಹಿಡಿಯುವ ಕುರಿತಂತೆ ಮಹತ್ವದ ಸಮಾಲೋಚನೆ ನಡೆಸಿದರು.

ಈ ಬಗ್ಗೆ ಅಸಮಾಧಾನಗೊಂಡಿರುವ ಪರಮೇಶ್ವರ್ ಅವರಿಗೆ ರಾಜಕೀಯ ಬೆಳವಣಿಗೆ ಬಗ್ಗೆ ಸಿದ್ದರಾಮಯ್ಯ ಮಾಹಿತಿ ನೀಡಿ ಸಮಾಧಾನಪಡಿಸಿದರು ಎನ್ನಲಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ನಿಚ್ಚಳ ಗೆಲುವು ಸಾಧಿಸಿಲ್ಲ ಎನ್ನುವುದನ್ನು ದೇಶಕ್ಕೆ ತೋರಿಸಲು ಇದೊಂದು ಸುವರ್ಣ ಅವಕಾಶ. ಇದನ್ನು ಬಳಕೆ ಮಾಡಿಕೊಂಡು ಬಿಜೆಪಿಯ ಮೇಲೆ ನಿಯಂತ್ರಣ ಸಾಧಿಸಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಿಕ್ಕಮಗಳೂರಿನಲ್ಲಿದ್ದು, ಅಲ್ಲಿಂದಲೇ ಈ ಬೆಳವಣಿಗೆಗಳನ್ನು ನಿಯಂತ್ರಿಸುತ್ತಿದ್ದಾರೆ. ಕಾಂಗ್ರೆಸ್ ಜತೆ ಸೇರಿ ಅಧಿಕಾರ ಹಿಡಿಯಲು ತಂತ್ರಗಾರಿಕೆಯಲ್ಲಿ ನಿರತವಾಗಿದ್ದಾರೆ.

ಬಿಬಿಎಂಪಿ ಅಧಿಕಾರ ಹಿಡಿಯಲು ಯಾವುದೇ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಸುಮ್ಮನೆ ಊಹಾಪೋಹ ಬೇಡ.
ಸಿದ್ದರಾಮಯ್ಯ, ಮುಖ್ಯಮಂತ್ರಿ

ಮಾಜಿ ಪ್ರಧಾನಿ ದೇವೇಗೌಡರು ಯಾವುದೇ ಕಾರಣಕ್ಕೂ ಬಿಜೆಪಿ ಜತೆ ಕೈ ಜೋಡಿಸುವುದಿಲ್ಲ. ಈ ಬಗ್ಗೆ ನಮಗೆ ವಿಶ್ವಾಸವಿದೆ. ಕಾಂಗ್ರೆಸ್, ಜೆಡಿಎಸ್ ವರಿಷ್ಠರು ಮೈತ್ರಿಗೆ ಒಪ್ಪಿಗೆ ಸೂಚಿಸಿದ್ದಾರೆ.  ಝಮೀರ್ ಅಹ್ಮದ್ ಖಾನ್,

Write A Comment