ಜೈಪುರ: ರಾಜಸ್ಥಾನದಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯಡಿ ನಡೆದಿರುವ 108 ಆಂಬುಲೆನ್ಸ್ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ, ಕೇರಳದ ವಯಲಾರ್ ರವಿ ಮಗ ರವಿ ಕೃಷ್ಣಾ ಮತ್ತು ಇನ್ನಿತರರ ವಿರುದ್ಧ ಸಿಬಿಐ ಶನಿವಾರ ಎಫ್ಐಆರ್ ದಾಖಲಿಸಿದೆ.
ಪ್ರಕರಣ ಸಂಬಂಧ ಎಂಟು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿರುವ ಸಿಬಿಐ, ಸಚಿನ್ ಪೈಲಟ್, ಕಾರ್ತಿ ಹಾಗೂ ರವಿಕೃಷ್ಣಾ ಅವರು ನಿರ್ದೇಶಕರಾಗಿದ್ದ ಝಿಕ್ವಿಝಾ ಹೆಲ್ತ್ ಕೇರ್ ಲಿ(ಝಡ್ ಎಚ್ ಸಿಎಲ್) ನ ಮುಂಬೈ ಹಾಗೂ ಜೈಪುರ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ.
ಎಫ್ಐಆರ್ ನಲ್ಲಿ ರಾಜಸ್ಥಾನದ ಮಾಜಿ ಆರೋಗ್ಯ ಸಚಿವ ದುರು ಮಿಯಾ, ಎನ್ ಆರ್ಎಚ್ ಎಂ ಮಾಜಿ ನಿರ್ದೇಶಕ ಶ್ವೇತಾ ಮಂಗಲ್, ಶಫಿ ಮಾಥರ್ ಹೆಸರು ಕೂಡಾ ದಾಖಲಾಗಿದೆ.
ರಾಜಸ್ಥಾನ್ ಸರ್ಕಾರ ಸಲಹೆ ಮತ್ತು ಕೇಂದ್ರ ಸರ್ಕಾರದ ನಿರ್ದೇಶನದಂತೆ ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಮುಂದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮೂರು ರಾಜ್ಯಗಳಲ್ಲಿ 108 ಆಂಬುಲೆನ್ಸ್ ಯೋಜನೆಗಾಗಿ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಟೆಂಡರ್ ಹಂಚಿಕೆ ಸಂಬಂಧ 2.56 ಕೋಟಿ ಹಗರಣ ನಡೆದಿದೆ ಎನ್ನಲಾಗುತ್ತಿದೆ.