ಕರ್ನಾಟಕ

ನಮ್ಮ ಬೆಂಬಲ ಬೇಕಾ 10 ಕೋಟಿ ಕೊಡಿ ! ಇದು ಬಿಬಿಎಂಪಿ ಗದ್ದುಗೆ ಹಿಡಿಯಲು ಹೊರಟಿರುವ ಬಿಜೆಪಿಗೆ ಮೂವರು ಪಕ್ಷೇತರ ಕಾರ್ಪೋರೇಟರ್‌ಗಳು ಇಟ್ಟಿರುವ ಬೇಡಿಕೆ

Pinterest LinkedIn Tumblr

bbmp

ಬೆಂಗಳೂರು, ಆ.29: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಅಧಿಕಾರದ ಗದ್ದುಗೆ ಏರಲು ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿರುವ ನಡುವೆಯೇ, ನಿಮಗೆ ನಾವು ಬೆಂಬಲ ನೀಡಬೇಕಿದ್ದರೆ ತಲಾ ಹತ್ತು ಕೋಟಿ ರೂಪಾಯಿ ನೀಡುವಂತೆ ಬಿಬಿಎಂಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಮೂವರು ಪಕ್ಷೇತರ ಕಾರ್ಪೋರೇಟರ್‌ಗಳು ಬೇಡಿಕೆ ಇಟ್ಟಿರುವುದಾಗಿ ಭಾರತೀಯ ಜನತಾ ಪಕ್ಷ ಆರೋಪಿಸಿದೆ.

ಬಿಬಿಎಂಪಿ ಫಲಿತಾಂಶ ಹೊರಬಿದ್ದ ನಂತರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಹೊಯ್ಸಳ ನಗರ ವಾರ್ಡ್ ಕಾರ್ಪೋರೇಟರ್ ಆನಂಕ್ ಕುಮಾರ್, ಕೊನೇನ ಅಗ್ರಹಾರ ವಾರ್ಡ್ ಕಾರ್ಪೋರೇಟರ್ ಚಂದ್ರಪ್ಪ ರೆಡ್ಡಿ ಹಾಗೂ ಸಗಾಯ್ ಪುರಂ ವಾರ್ಡ್ ಕಾರ್ಪೋರೇಟರ್ ಏಳುಮಲೈ ಬಿಜೆಪಿ ಮುಖಂಡ ಆರ್. ಅಶೋಕ್ ಅವರನ್ನು ಭೇಟಿಯಾಗಿ, ಬಿಬಿಎಂಪಿಯಲ್ಲಿ ನಿಮಗೆ ಬೆಂಬಲ ನೀಡಬೇಕಿದ್ದರೆ ನಮಗೆ ತಲಾ 10 ಕೋಟಿ ರೂಪಾಯಿ ಹಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಬೇಕೆಂದು ಬೇಡಿಕೆ ಇಟ್ಟಿರುವುದಾಗಿ ಬಿಜೆಪಿ ದೂರಿದೆ.

ಈ ಸಂದರ್ಭದಲ್ಲಿ ಆರ್. ಅಶೋಕ್, ನಿಮಗೆ ತಲಾ 10 ಕೋಟಿ ರೂಪಾಯಿ ಕೊಡಲು ಸಾಧ್ಯವಿಲ್ಲ. ಬೇಕಿದ್ದರೆ ಬಿಬಿಎಂಪಿಯಲ್ಲಿ ಸ್ಥಾನಮಾನ, ಸ್ಥಾಯಿ ಸಮಿತಿಯಲ್ಲಿ ಹುದ್ದೆ ನೀಡುವ ಎಂದು ಭರವಸೆ ನೀಡಿದ್ದರು. ಆದರೆ ತಮ್ಮ ಹಣದ ಬೇಡಿಕೆಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಏಳುಮಲೈ ಸೇರಿದಂತೆ ಆರು ಮಂದಿ ಪಕ್ಷೇತರ ಕಾರ್ಪೋರೇಟರ್‌ಗಳು ಕಾಂಗ್ರೆಸ್ ಪಕ್ಷದ ಬಾಗಿಲು ತಟ್ಟಿದ್ದಾರೆ.

ಇದೀಗ ಏಳುಮಲೈ ಸೇರಿದಂತೆ ಆರು ಮಂದಿ ಪಕ್ಷೇತರ ಕಾರ್ಪೋರೇಟರ್‌ಗಳನ್ನು ಕಾಂಗ್ರೆಸ್ ಶಾಸಕ ಭೈರತಿ ಮೂಲಕ ಕೇರಳದ ಅಲೆಪ್ಪಿಯ ರೆಸಾರ್ಟ್‌ವೊಂದರಲ್ಲಿ ಇರಿಸಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಸೆ.2ರೊಳಗೆ ಗೌಡರ ತೀರ್ಮಾನ

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕುರಿತಂತೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಸೆಪ್ಟೆಂಬರ್ 2ರೊಳಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಶಾಸಕ ಕೆ.ಗೋಪಾಲಯ್ಯ ತಿಳಿಸಿದ್ದಾರೆ. ಈಗ ಕೆಲವರಿಗೆ ಜೆಡಿಎಸ್‌ನ ಬೆಲೆ ಬಗ್ಗೆ ತಿಳಿಯುತ್ತಿದೆ ಎಂದು ಗೋಪಾಲಯ್ಯ ವ್ಯಂಗ್ಯವಾಡಿದ್ದಾರೆ.

Write A Comment