ರಾಷ್ಟ್ರೀಯ

ಐದು ವರ್ಷಗಳ ಹಿಂದೆ ಕಳೆದು ಹೋಗಿದ್ದ ತಂಗಿ ರಕ್ಷಾಬಂಧನದ ದಿನದಂದೇ ಸಿಕ್ಕಿದರೆ ಹೇಗಾಗಬೇಕು…! ಜೈಪುರದ ನಾಗೋರ್ ನಲ್ಲಿ ವರದಿ ಆದ ಘಟನೆ …ಮುಂದೆ ಓದಿ

Pinterest LinkedIn Tumblr

rak

ಜೈಪುರ, ಆ.29: ಐದು ವರ್ಷಗಳ ಹಿಂದೆ ಕಳೆದು ಹೋಗಿದ್ದ ತನ್ನ ಸಹೋದರಿ ಮಮತಾ ಮತ್ತೆ ತನಗೆ ಸಿಕ್ಕಾಳೆಂದು 10ರ ಹರೆಯದ ಆಕೆಯ ಸಹೋದರ ಮಹೇಶ್ ಕನಸಿನಲ್ಲೂ ಎಣಿಸಿರಲಿಲ್ಲ. ಆದರೆ, ಈ ಪವಿತ್ರ ರಕ್ಷಾಬಂಧನದ ಈ ದಿನದಂದು ಮಹೇಶನಿಗೆ ಅತ್ಯಾಶ್ಚರ್ಯದ ಉಡುಗೊರೆ ಎಂಬಂತೆ ಕಳೆದು ಹೋದ ತನ್ನ ಸಹೋದರಿ ಆತನಿಗೆ ಸಿಕ್ಕಿದ್ದಾಳೆ. ಆತನಿಗೆ ರಕ್ಷಾಬಂಧನ ಕಟ್ಟಿ ಸಂಭ್ರಮಿಸಿದ್ದಾಳೆ. ಅಂತೆಯೇ ಆತನ ಪಾಲಿಗೆ ಇಂದು ಸುದಿನವಾಗಿದೆ.

ಐದು ವರ್ಷಗಳ ಹಿಂದೆ ಬಾಲಕಿ ಮಮತಾಳನ್ನು ಯಾರೋ ಅಪಹರಿಸಿ ಬಲವಂತದಿಂದ ಆಕೆಯನ್ನು ಭಿಕ್ಷಾಟನೆಗೆ ಬಳಸಿಕೊಂಡಿದ್ದರು. ಈ ತಿಂಗಳ ಆದಿಯಲ್ಲಿ ಮಮತಾಳನ್ನು ಇತರ ಮೂರು ಮಕ್ಕಳೊಂದಿಗೆ ಪಾರುಗೊಳಿಸಲಾಗಿತ್ತು ಮತ್ತು ಅವರಿಗೆ ಅಜ್‌ಮೇರ್‌ನ ಬಾಲನಿಕೇತನದಲ್ಲಿ ಆಸರೆ ಕಲ್ಪಿಸಲಾಗಿತ್ತು. ಮನೆಯವರು ಕೊಟ್ಟ ಗುರುತು, ವಿವರ ಇತ್ಯಾದಿಗಳನ್ನು ಪರಾಮರ್ಶಿಸಿ ಶಿಶು ಕಲ್ಯಾಣ ಸಮಿತಿ ಸದಸ್ಯರು ಮಮತಾಳನ್ನು ಆಕೆಯ ಮನೆಯವರಿಗೆ ಹಸ್ತಾಂತರಿಸಿದರು.

ನಾಗೋರ್ ಜಿಲ್ಲೆಯ ನವನಗರದಲ್ಲಿ ನಡೆದಿದ್ದ ಜಾತ್ರೆಯ ಸಂದರ್ಭದಲ್ಲಿ , 2010ರ ಮಾರ್ಚ್ 30 ರಂದು ಮಮತಾ ಅಪಹರಣಕ್ಕೆ ಗುರಿಯಾಗಿದ್ದಳು.

ಮಮತಾಳ ತಂದೆ ವೃತ್ತಿಯಲ್ಲಿ ಚಮಗಾರ. ಈಗ ಆತ ಜೀವಂತವಿಲ್ಲ. ಮಮತಾ ಕಳೆದು ಹೋದ ಬಳಿಕ ಆಕೆಯ ಮನೆಯವರೆಲ್ಲ ಬಹಳವಾಗಿ ಆಕೆಯನ್ನು ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ. ಹಾಗಾಗಿ ಅವರು 2010ರ ಮಾರ್ಚ್ 30ರಂದು ಮಮತಾ ಕಳೆದುಹೋದಳೆಂದು ಪೊಲೀಸರಿಗೆ ದೂರು ನೀಡಿದರು.

ಆದರೆ, ಒಂದು ತಿಂಗಳ ಬಳಿಕ ಮಮತಾ ಬಲೂನು ಮಾರುವವನೊಬ್ಬನ ವಶದಲ್ಲಿ ಇರುವುದನ್ನು ಯಾರೋ ಕಂಡು ಮಾಹಿತಿ ನೀಡಿದರು. ಆದರೆ, ಆ ಬಲೂನು ಮಾರುವವನೇ ಅನಂತರ ನಾಪತ್ತೆಯಾದ. ಇದನ್ನು ಅನುಸರಿಸಿ 2010ರ ಏಪ್ರಿಲ್ 11 ರಂದು ಮಮತಾ ಅಪಹರಣವಾಗಿರುವ ಬಗ್ಗೆ ದೂರು ದಾಖಲಿಸಲಾಯಿತು.

ಆ ವರ್ಷ ಅಂದರೆ 2010ರ ಕೊನೆಯತನಕವೂ ಮಮತಾ ಎಲ್ಲೂ ಪತ್ತೆಯಾಗದಿದ್ದಾಗ ಪೊಲೀಸರು ಈ ಕೇಸನ್ನು ಬಹುತೇಕ ಮುಚ್ಚಿಬಿಟ್ಟರು. ಅದಾಗಿ ಈ ವರ್ಷ, 2015ರ ಆಗಸ್ಟ್ 2 ರಂದು ಈ ಜಿಲ್ಲೆಯಲ್ಲಿ ಶಂಕಾಸ್ಪದ ಚಟುವಟಿಕೆಯಲ್ಲಿ ನಿರತನಾಗಿದ್ದ ಒಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಈತನ ವಶದಲ್ಲಿ ಮಮತಾ ಸಹಿತ ಐದು ಮಕ್ಕಳಿದ್ದು ಅವರೆಲ್ಲರನ್ನೂ ಆತ ಭಿಕ್ಷಾಟನೆಗೆ ಇಳಿಸಿದ್ದುದು ಪತ್ತೆಯಾಯಿತು. ಪೊಲೀಸರು ಆತನಿಂದ ಈ ಎಲ್ಲ ಐದು ಮಕ್ಕಳನ್ನು ವಶಕ್ಕೆ ತೆಗೆದುಕೊಂಡು ಅವರನ್ನು ಬಾಲನಿಕೇತನಕ್ಕೆ ಸೇರಿಸಿದರು.

ಮಮತಾ ಎಂಬ ಹೆಸರಿನ ಹುಡುಗಿಯ ಸಹಿತ ಐವರು ಮಕ್ಕಳನ್ನು ಅವರ ಅಪಹರಣಕಾರನಿಂದ ಪಾರುಗೊಳಿಸಿ ಬಾಲನಿಕೇತನಕ್ಕೆ ಸೇರಿಸಲಾಗಿರುವ ವಿಷಯವನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಯಿತು. ಒಡನೆಯೇ ಮಮತಾಳ ಮನೆಯವರು ಪೊಲೀಸರನ್ನು ಸಂಪರ್ಕಿಸಿದರು. ಮಮತಾಳ ಮುಖ ಚಹರೆ, ಎತ್ತರ, ಗುರುತು, ವಿವರ ಇತ್ಯಾದಿಗಳನ್ನು ಮಮತಾಳ ಮನೆಯವರು ಕೊಟ್ಟರು. ಶಿಶು ಕಲ್ಯಾಣ ಸಮಿತಿಯ ಸದಸ್ಯರು ಈ ವಿವರಗಳನ್ನು ಪರಾಮರ್ಶಿಸಿ ಮಮತಾಳನ್ನು ಆಕೆಯ ಮನೆಯವರಿಗೆ ಒಪ್ಪಿಸಿದರು.

ಇಂದು ಪವಿತ್ರ ರಕ್ಷಾಬಂಧನದ ದಿನವಾಗಿದ್ದು, ಐದು ವರ್ಷಗಳ ಹಿಂದೆ ಕಳೆದು ಹೋಗಿ ಈಗ ಮತ್ತೆ ಮನೆಯವರನ್ನು ಸೇರಿಕೊಂಡಿರುವ ಮಮತಾ, ತನ್ನ ಪ್ರೀತಿಯ ಸಹೋದರ ಮಹೇಶನಿಗೆ ರಾಖಿ ಕಟ್ಟಿ ಸಂಭ್ರಮಿಸಿರುವುದು ಮನೆಯವರೆಲ್ಲರ ಕಣ್ಣಲ್ಲಿ ಆನಂದಾಶ್ರು ಹರಿಯುವಂತೆ ಮಾಡಿದೆ.

Write A Comment