ಪಟನಾ, ಆ.29: ಪರಿಸರ ಸಂರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರು ಶನಿವಾರ ಮರಕ್ಕೆ ರಾಖಿ ಕಟ್ಟುವ ವಿನೂತನ ವಿಧಾನ ಅನುಸರಿಸಿ, ಬಿಹಾರಿನಲ್ಲಿ ಹಸಿರು ಉಳಿಸುವಂತೆ ಜನತೆಯಲ್ಲಿ ಮನವಿ ಮಾಡಿದರು.
ಆರೋಗ್ಯಪೂರ್ಣ ಪರಿಸರಕ್ಕಾಗಿ ಹೆಚ್ಚು ಸಸಿಗಳನ್ನು ನೆಡಲು ಮತ್ತು ಅವುಗಳನ್ನು ರಕ್ಷಿಸಲು ಜನತೆ ಮುಂದೆ ಬರಬೇಕು’ ಎಂದು ಇಲ್ಲಿನ ಮರಕ್ಕೆ ರಾಖಿಕಟ್ಟಿದ ಬಳಿಕ ನಿತೀಶ್ಕುಮಾರ್ ಹೇಳಿದರು.
ಬಿಳಿಯ ಹತ್ತಿ ಬಟ್ಟೆಯ ಕುರ್ತಾ-ಪೈಜಾಮ ಧರಿಸಿದ್ದ ಮುಖ್ಯಮಂತ್ರಿ ‘ಪರಿಸರ ಸಂರಕ್ಷಣೆಗಾಗಿ ಮರಗಳಿಗೆ ರಾಖಿ ಕಟ್ಟುವಂತೆ ನಾನು ಜನರಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ಭೂಮಿ ಮತ್ತು ಮನುಷ್ಯರನ್ನು ರಕ್ಷಿಸಲು ಇದು ಹೊಸ ಆರಂಭ’ ಎಂದು ನುಡಿದರು.
ಗಿಡಗಳನ್ನು ನೆಡಲು ಮತ್ತು ರಾಜ್ಯದ ಹಸಿರು ಸಂರಕ್ಷಣೆ ಮಾಡಲು ಜನರಿಗೆ ಪ್ರೋತ್ಸಾಹ ಹಾಗೂ ನೆರವನ್ನು ರಾಜ್ಯ ಸರ್ಕಾರ ನೀಡಿದೆ ಎಂದು ನಿತೀಶ್ ಕುಮಾರ್ ಹೇಳಿದರು.
ಆಡಳಿತಾರೂಢ ಜನತಾ ದಳದ (ಸಂಯುಕ್ತ) ಹಲವಾರು ನಾಯಕರು, ಸರ್ಕಾರಿ ಅಧಿಕಾರಿಗಳು, ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕೆಲವು ವರ್ಷಗಳ ಹಿಂದೆ ನಿತೀಶ್ಕುಮಾರ್ ಅವರು ರಾಜ್ಯದ ಕಾಡು ಪ್ರದೇಶವನ್ನು ಹೆಚ್ಚಿಸುವ ಸಲುವಾಗಿ ‘ಹಸಿರು ಚಳವಳಿ’ ಹಮ್ಮಿಕೊಂಡಿದ್ದರು.
ಪಟನಾದಿಂದ 230 ಕಿಮೀ. ದೂರದ ಭಾಗಲ್ಪುರ ಜಿಲ್ಲೆಯ ಸಣ್ಣ ಗ್ರಾಮ ಧರ್ತಾರದಲ್ಲಿ ಗ್ರಾಮಸ್ಥರು ಮಾವು ಮತ್ತು ಲಿಚಿ ಸೇರಿದಂತೆ ಹಣ್ಣಿನ ಮರಗಳನ್ನು ನೆಡುವ ಮೂಲಕ ಎರಡು ವರ್ಷದ ಹಿಂದೆ ಸುದ್ದಿ ಮಾಡಿದ್ದುದರಿಂದ ಸ್ಪೂರ್ತಿ ಪಡೆದ ನಿತೀಶ್ ’ಹಸಿರು ಚಳವಳಿ’ಯನ್ನು ರೂಪಿಸಿದ್ದರು.
ಪ್ರತಿಯೊಂದು ಹೆಣ್ಣು ಮಗುವಿನ ಜನ್ಮದಿನ ಆಚರಣೆಗಾಗಿ ಧರ್ತಾರ ಗ್ರಾಮಸ್ಥರು ಹಣ್ಣುಗಳ ಗಿಡ ನೆಡುವ ಪರಂಪರೆ ಹುಟ್ಟು ಹಾಕಿದ್ದರು. ಪರಿಣಾಮವಾಗಿ ಈ ಗ್ರಾಮ ಹಚ್ಚ ಹಸಿರಿನ ಗ್ರಾಮವಾಗಿ ಪರಿವರ್ತನೆಗೊಂಡಿತ್ತು.
