ಬೆಂಗಳೂರು: ಮಹಾದಾಯಿ ನದಿಯ ನೀರು ಹಂಚಿಕೆಗೆ ಸಂಬಂಧಿಸಿದ ಅಂತರರಾಜ್ಯ ವಿವಾದವನ್ನು ನ್ಯಾಯಮಂಡಳಿಯ ಹೊರಗೆ ರಾಜಿ ಸಂಧಾನದ ಮೂಲಕ ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಭಾನುವಾರ ನಡೆದ ಸರ್ವಪಕ್ಷ ಸಭೆ ನಿರ್ಧರಿಸಿದೆ.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮಹಾದಾಯಿ ವಿವಾದ ಬಗೆಹರಿಸುವ ಪ್ರಕ್ರಿಯೆ ಈಗಾಗಲೇ ವಿಳಂಬ ಆಗಿದೆ. ಹಾಗಾಗಿ ನ್ಯಾಯಮಂಡಳಿ ಹೊರಗೆ ಈ ಸಮಸ್ಯೆ ಬಗೆಹರಿಸುವುದು ಸೂಕ್ತ. ಇದಕ್ಕೆ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಮುಖ್ಯಮಂತ್ರಿಗಳ ಸಭೆ ಕರೆದು ವಿವಾದ ಇತ್ಯರ್ಥಕ್ಕೆ ಪ್ರಯತ್ನಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ’ ಎಂದು ತಿಳಿಸಿದರು.
‘ಸೋಮವಾರ ಸಂಜೆ 4 ಗಂಟೆಗೆ ದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿ ಮಹಾದಾಯಿ ಜಲ ವಿವಾದದ ಬಗ್ಗೆ ಪ್ರಮುಖವಾಗಿ ಚರ್ಚಿಸುತ್ತೇವೆ. ರಾಜ್ಯದ ಬರ ಪರಿಸ್ಥಿತಿ, ಕಬ್ಬು, ದ್ರಾಕ್ಷಿ, ದಾಳಿಂಬೆ ಹಾಗೂ ರೇಷ್ಮೆ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆಯೂ ಮನವಿ ಸಲ್ಲಿಸುತ್ತೇವೆ. ನಿಯೋಗದಲ್ಲಿ ಸರ್ಕಾರದ ಪ್ರತಿನಿಧಿಗಳ ಜತೆ ಬಿಜೆಪಿ, ಜೆಡಿಎಸ್ ಮುಖಂಡರು, ರೈತ ಸಂಘದ ಇಬ್ಬರು ಪ್ರತಿನಿಧಿಗಳು, ಇಬ್ಬರು ಸ್ವಾಮೀಜಿಗಳು ಇರುತ್ತಾರೆ’ ಎಂದು ತಿಳಿಸಿದರು.
ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಿಗೆ 7.56 ಟಿ.ಎಂ.ಸಿ ಅಡಿ ಕುಡಿಯುವ ನೀರು ಪೂರೈಸಲಿರುವ ಈ ಮಹತ್ವದ ಯೋಜನೆ ಮೂರೂವರೆ ದಶಕಗಳಿಂದ ನನೆಗುದಿಗೆ ಬಿದ್ದಿದೆ. ಈ ಯೋಜನೆಗೆ ಎದುರಾಗಿರುವ ತೊಡಕುಗಳನ್ನು ರಾಜಿ ಸಂಧಾನದ ಮೂಲಕ ಹೇಗೆ ಬಗೆಹರಿಸಬಹುದು ಎಂಬ ಬಗ್ಗೆ ಸಭೆಯಲ್ಲಿ ಎರಡೂವರೆ ತಾಸು ಚರ್ಚೆ ನಡೆಯಿತು ಎಂದು ಸಭೆಯಲ್ಲಿ ಪಾಲ್ಗೊಂಡವರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಜಲವಿವಾದದ ಬಗ್ಗೆ ವಿವರಿಸಿದ ಕಾನೂನುತಜ್ಞ ಮೋಹನ ಕಾತರಕಿ, ‘ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಒಪ್ಪಿದರೆ, ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು’ ಎಂದು ಸಲಹೆ ನೀಡಿದರು.
ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಈ ಹಿಂದೆ, ಕೃಷ್ಣಾ ನದಿಯಿಂದ ಚೆನ್ನೈಗೆ ಕುಡಿಯುವ ನೀರು ಪೂರೈಸುವ ಕುರಿತು ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ನಡುವೆ ಬಿಕ್ಕಟ್ಟು ಎದುರಾಗಿತ್ತು.
ಆಗಿನ ಪ್ರಧಾನಿ ಇಂದಿರಾಗಾಂಧಿ ಅವರು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಂಧಾನದ ಮೂಲಕ ಬಿಕ್ಕಟ್ಟನ್ನು ಬಗೆಹರಿಸಿದ್ದರು. ಮಹಾದಾಯಿ ವಿವಾದ ಇತ್ಯರ್ಥಕ್ಕೂ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು.
ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಅನಂತ್ ಕುಮಾರ್, ವೆಂಕಯ್ಯ ನಾಯ್ಡು ಅವರು ನರೇಂದ್ರ ಮೋದಿ ಅವರ ಮನವೊಲಿಸಬೇಕು. ಪ್ರತಿಷ್ಠೆ ಬದಿಗಿಟ್ಟು ಸಮಸ್ಯೆ ಬಗೆಹರಿಸಲು ಎಲ್ಲರೂ ಶ್ರಮಿಸಬೇಕು’ ಎಂದು ಒತ್ತಾಯಿಸಿದರು.
ಸಂಪೂರ್ಣ ಸಹಕಾರ
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಮಾತನಾಡಿ, ‘ಮಹಾದಾಯಿ ಯೋಜನೆಗೆ ಗೋವಾ ಸರ್ಕಾರ ಅಡ್ಡಿಪಡಿಸುತ್ತಿರುವುದು ದುರದೃಷ್ಟಕರ. ರಾಜ್ಯ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ’ ಎಂದು ಭರವಸೆ ನೀಡಿದರು. ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ ಹಾಗೂ ಅನಂತ ಕುಮಾರ್ ಅವರೂ, ವಿವಾದ ಬಗೆಹರಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
******
ಗೋವಾ,ಮಹಾರಾಷ್ಟ್ರದ ಸಿ.ಎಂ.ಗಳಿಗೆ ಬಿಜೆಪಿ ಮನವರಿಕೆ ಮಾಡಲಿದೆ. ಪ್ರಧಾನಿ ಬಳಿಯೂ ಮನವಿ ಮಾಡುತ್ತೇವೆ. ಅಲ್ಲಿನ ವಿರೋಧ ಪಕ್ಷಗಳನ್ನು ಕಾಂಗ್ರೆಸ್ ಮನವೊಲಿಸಬೇಕು
-ಬಿ.ಎಸ್.ಯಡಿಯೂರಪ್ಪ, ಸಂಸದ