ಬೆಂಗಳೂರು, ಆ.10- ಬಿಬಿಎಂಪಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಇಂದು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರರು, ಬಂಡಾಯ ಅಭ್ಯರ್ಥಿಗಳೂ ಸೇರಿದಂತೆ 600ಕ್ಕೂ ಹೆಚ್ಚು ನಾಮಪತ್ರಗಳು ಒಂದೇ ದಿನದಲ್ಲಿ ಸಲ್ಲಿಕೆಯಾಗಿ ನಾಮಪತ್ರಗಳ ಸುರಿಮಳೆಯಾಯಿತು.ಎಐಡಿಎಂಕೆ, ಡಿಎಂಕೆ, ಅಕ್ಬರುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಾರ್ಟಿ ಸೇರಿದಂತೆ ಹಲವು ಪಕ್ಷಗಳ ಅಭ್ಯರ್ಥಿಗಳು ಇಂದು ಬಿಬಿಎಂಪಿ ಚುನಾವಣಾ ಆಖಾಡಕ್ಕಿಳಿದರು.ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದಿಂದ ಟಿಕೆಟ್ ಪಡೆದ ಅಭ್ಯರ್ಥಿಗಳು ಇಂದು ತಮ್ಮ ಬೆಂಬಲಿಗರೊಂದಿಗೆ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರಗಳನ್ನು ಸಲ್ಲಿಸಿದರು.
ಟಿಕೆಟ್ ಪಡೆದ ಅಭ್ಯರ್ಥಿಗಳು ಉತ್ಸಾಹದಿಂದ ನಾಮಪತ್ರ ಸಲ್ಲಿಸಿ, ಪ್ರಚಾರದ ಕಣಕ್ಕಿಳಿದರೆ, ಟಿಕೆಟ್ ದೊರೆಯದ ಅಭ್ಯರ್ಥಿಗಳು ಹಲವೆಡೆ ಸ್ವತಂತ್ರವಾಗಿ ಕಣಕ್ಕಿಳಿದು ನಾಮಪತ್ರ ಸಲ್ಲಿಸಿದರು. ಅಕ್ಬರುದ್ದೀನ್ ಒವೈಸಿ ಕೊನೆಯ ಕ್ಷಣದಲ್ಲಿ ತನ್ನ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕಿಳಿಸುವ ನಿರ್ಧಾರ ಕೈಗೊಂಡು 40 ಕಡೆ ನಾಮಪತ್ರ ಸಲ್ಲಿಸಿದ್ದಾರೆ. ಕೊನೆಯ ಕ್ಷಣದ ವರೆಗೂ ಅಭ್ಯರ್ಥಿಗಳ ಆಯ್ಕೆಯ ಗೊಂದಲ ಮುಂದುವರೆದಿತ್ತು. ಯಾವುದೋ ಪಕ್ಷದಿಂದ ನಾಮಪತ್ರ ಸಲ್ಲಿಸಬೇಕಾದವರು ಟಿಕೆಟ್ ಕೈತಪ್ಪಿದ್ದರಿಂದ ಮತ್ಯಾವುದೋ ಪಕ್ಷದಿಂದ ನಾಮಪತ್ರ ಸಲ್ಲಿಸಬೇಕಾಯಿತು.ಟಿಕೆಟ್ ಸಿಗದ ಕೆಲವರು ಪಕ್ಷದಿಂದ ಬಂಡಾಯವಾಗಿ ಕಣಕ್ಕಿಳಿದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಅಂತಿಮ ಕ್ಷಣದಲ್ಲಿ ಪಕ್ಷಾಂತರ ಪರ್ವದ ಹೈಡ್ರಾಮವೇ ನಡೆಯಿತು.ಈ ಎರಡೂ ಪಕ್ಷಗಳಿಂದ ಟಿಕೆಟ್ ವಂಚಿತ ಹಲವು ಮುಖಂಡರು ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ಗಳು,ಜೆಡಿಎಸ್ ಪಕ್ಷ ಸೇರಿ ಚುನಾವಣಾ ಕಣಕ್ಕಿಳಿದು ಅಚ್ಚರಿ ಮೂಡಿಸಿದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಭಾಶ್‌ನಗರ ವಾರ್ಡ್‌ನಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಟಿ.ಮಲ್ಲೇಶ್, ದತ್ತಾತ್ರೇಯ ವಾರ್ಡ್‌ನಿಂದ ಪ್ರಭಲ ಆಕಾಂಕ್ಷಿಯಾಗಿದ್ದ ಮಾಜಿ ಮೇಯರ್ ರಾಮಚಂದ್ರಪ್ಪ ಅವರ ಅಪ್ತರಾದ ಗಿರೀಶ್, ಜೆಡಿಎಸ್‌ನಿಂದ ಸ್ಪರ್ಧೆಗಿಳಿದರು.ಚಾಮರಾಜಪೇಟೆ ವಾರ್ಡ್‌ನಿಂದ ಬಿ.ಟಿ.ಶ್ರೀನಿವಾಸ್‌ಮೂರ್ತಿ ಅವರ ಪತ್ನಿ ಶೈಲಜಾ ಶ್ರೀನಿವಾಸ್ ಅವರು ಜೆಡಿಎಸ್ ಟಿಕೆಟ್ ಪಡೆದು ನಾಮಪತ್ರ ಸಲ್ಲಿಸಿದರು.
ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ದೊರೆತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿ ಬಂಡಾಯದ ಬಾವುಟ ಹಾರಿಸಿರುವ ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನಾ ಶಿವಾಜಿನಗರ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ನೇತ್ರಾವತಿ ಕೃಷ್ಣೇಗೌಡ ಅವರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಮೇರಿ ಅವರನ್ನು ಕಣಕ್ಕಿಳಿಸಿದ್ದಾರೆ.ಮಾಜಿ ಮೇಯರ್‌ಗಳಿಗೆ ಟಿಕೆಟ್ ನೀಡುವುದಿಲ್ಲವೆಂಬ ನಿರ್ಧಾರವನ್ನು ಕೊನೇ ಕ್ಷಣದಲ್ಲಿ ಬದಲಿಸಿದ ಬಿಜೆಪಿ ಕಟ್ಟೆ ಸತ್ಯನಾರಾಯಣ ಅವರಿಗೆ ಬಸವನಗುಡಿ
ವಾರ್ಡ್‌ನಿಂದ ಸ್ಪರ್ಧಿಸಲು ಬಿ ಫಾರಂ ನೀಡಿತ್ತು. ಇಂದು ಅವರು ತಮ್ಮ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಮತ್ತೊಬ್ಬ ಮಾಜಿ ಮೇಯರ್ ಡಿ.ವೆಂಕಟೇಶಮೂರ್ತಿ ಅವರಿಗೆ ಟಿಕೆಟ್ ಕೈತಪ್ಪಿದ ಪರಿಣಾಮ ಅವರುತಮ್ಮ ನಾಯಕರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.ಮಾಜಿ ಮೇಯರ್ ಶಾರದಮ್ಮ ಅವರಿಗೂ ಈ ಬಾರಿ ಟಿಕೆಟ್ ಕೈತಪ್ಪಿದೆ.ಜೆಡಿಎಸ್ ಪಕ್ಷ ಕೊನೆಯ ಕ್ಷಣದ ವರೆಗೂ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಸಿತ್ತು. ರಾಷ್ಟ್ರೀಯ ಪಕ್ಷಗಳ ಟಿಕೆಟ್ ವಂಚಿತ ಅಭ್ಯರ್ಥಿಗಳಿಗೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಹಲವೆಡೆ ಅವಕಾಶ ಕಲ್ಪಿಸಲಾಗಿದೆ. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ತನ್ನೆಲ್ಲ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿ ಬಿ ಫಾರಂ ವಿತರಿಸಲಾಯಿತು. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಹಲವು ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.ಸರ್ವಜ್ಞನಗರ, ಜಯನಗರ, ಪುಲಿಕೇಶಿನಗರ ಮುಂತಾದ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದ್ದು, ಹಲವು ಟಿಕೆಟ್ ವಂಚಿತರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.ದಾಸರಹಳ್ಳಿ, ರಾಜರಾಜೇಶ್ವರಿನಗರ, ಯಶವಂತಪುರ, ಯಲಹಂಕ, ವಿಜಯನಗರ, ಗೋವಿಂದರಾಜನಗರ ಸೇರಿದಂತೆ ಎಲ್ಲಾ 28 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಇಂದು ನಾಮಪತ್ರ ಭರಾಟೆ ಜೋರಾಗಿತ್ತು.