ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ವಿಮಾನ ಅಪಹರಣಕ್ಕೆ ಉಗ್ರರ ಸಂಚು

Pinterest LinkedIn Tumblr

trಶ್ರೀನಗರ, ಆ.10- ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಿರುವ ಉಗ್ರರು ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ವಿಮಾನ ಅಪಹರಣ ಮಾಡಲು ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರ , ಜಮ್ಮು ಮತ್ತು ಲೇಹದಲ್ಲಿರುವ ವಿಮಾನ ನಿಲ್ದಾಣಗಳ ಮೇಲೆ ಉಗ್ರರ ಕೆಂಗಣ್ಣು ಬೀರಿದೆ.ಪ್ರಯಾಣಿಕರಿರುವ ವಿಮಾನವೊಂದನ್ನು ಅಪಹರಿಸಿ ಪೊಲೀಸ್ ವಶದಲ್ಲಿರುವ ಉಗ್ರರ ಬಿಡುಗಡೆಗೆ ಈ ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.

3 ವಿಮಾನ ನಿಲ್ದಾಣಗಳ ಮೇಲೆ ಯಾವುದೇ ಸಂದರ್ಭದಲ್ಲೂ ಉಗ್ರರು ದಾಳಿ ನಡೆಸುವ ಸಂಭವವಿದೆ. ನೆರೆಯ ರಾಷ್ಟ್ರ ಪಾಕಿಸ್ತಾನದಿಂದ ಆಗಮಿಸಿರುವ ಶಸ್ತ್ರ ಸಜ್ಜಿತ ಉಗ್ರರು ವಿಮಾನ ಅಪಹರಣ ಮಾಡಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಹೆಚ್ಚಳ ಮಾಡಬೇಕೆಂದು ಗುಪ್ತಚರ ಇಲಾಖೆ ಅಧಿಕಾರಿಗಳು ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಶ್ರೀನಗರ, ಲೇಹ್ ಮತ್ತು ಜಮ್ಮುವಿನ ವಿಮಾನ ನಿಲ್ದಾಣಗಳಿಗೆ ಎನ್‌ಎಸ್‌ಜಿ ಕಮಾಂಡೋ, ಅರೆಸೇನಾ ಪಡೆ, ಬಿಎಸ್‌ಎಫ್ ಸೇರಿದಂತೆ ವಿವಿಧ ಶ್ರೇಣಿಯ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ.ಒಂದು ತಿಂಗಳ ಅವಧಿಯಲ್ಲಿ ಭಾರತೀಯ ಭದ್ರತಾ ಪಡೆಗಳು 20 ಮಂದಿ ಉಗ್ರರನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಪಂಜಾಬ್‌ನ ದೀನ ನಗರ್ ಬಳಿ ಲಷ್ಕರ್-ಇ-ತೊಯ್ಬಾ ಉಗ್ರರು ವಿಮಾನ ಅಪಹರಣ ಮಾಡಲು ಪ್ರಯತ್ನ ನಡೆಸಿದ್ದರು.ಆದರೆ ಅವರ ಯೋಜನೆಗಳೆಲ್ಲವೂ ತಲೆ ಕೆಳಗಾಗಿದ್ದರಿಂದ ಕಂಡ ಕಂಡವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪಾಕ್‌ನಿಂದ ಆಗಮಿಸಿರುವ ಉಗ್ರರು ಭಾರತದೊಳಗೆ ಒಳ ನುಸುಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.ಅಲ್ಲದೆ ಕಣಿವೆ ರಾಜ್ಯದಲ್ಲಿ ಆಶ್ರಯ ಪಡೆದಿರುವ ಶಂಕಿತ ಉಗ್ರರು ಹೇಗಾದರೂ ಮಾಡಿ ದೊಡ್ಡ ಮಟ್ಟದ ದಾಳಿ ನಡೆಸಬೇಕೆಂಬ ಯೋಜನೆಯೊಂದನ್ನು ರೂಪಿಸಿಕೊಂಡಿದ್ದಾರೆ. ಉಗ್ರರು  ಪಂಜಾಬ್, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಗಡಿ ಮೂಲಕ ಭಾರತಕ್ಕೆ ಒಳ ನುಸುಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಎಲ್‌ಒಸಿ ಬಳಿ ಹೆಚ್ಚಿನ ಭದ್ರತೆ ಒದಗಿಸಬೇಕು. ಉಗ್ರರ ಯೋಜನೆಗಳೆಲ್ಲವೂ ಕೈಕೊಡುತ್ತವಾದ್ದರಿಂದ ಹತಾಶರಾಗಿರುವ ಅವರು ಸದ್ಯದಲ್ಲೇ ಭಾರೀ ಪ್ರಮಾಣದ ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ.

Write A Comment