ಬೆಂಗಳೂರು, ಆ.6: ದ್ವಿಚಕ್ರ ವಾಹನಗಳನ್ನು ಕದ್ದು ಬಳಸಿದ ನಂತರ ಅಡವಿಟ್ಟು ಮೋಜು ಮಾಡುತ್ತಿದ್ದ ಮೂವರು ಹಳೇ ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿ 6 ಲಕ್ಷ ರೂ. ಮೌಲ್ಯದ 15 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಆರ್ಪುರಂನ ಇಮ್ರಾನ್ಖಾನ್ (22), ಶಿವಾಜಿನಗರದ ನದೀಪ್ ಷರೀಫ್ (20) ಮತ್ತು ಕೆ.ಜಿ.ಹಳ್ಳಿಯ ಶಫೀ ಶೇಕ್ (20) ಬಂಧಿತ ಹಳೇ ಕಳ್ಳರು.ಮೂವರು ಆರೋಪಿಗಳು ಕಳೆದ 6 ತಿಂಗಳಿನಿಂದ ನಗರದಲ್ಲಿ ದ್ವಿಚಕ್ರವಾಹನಗಳನ್ನು ಕದ್ದು ತಮಗೆ ಬೇಕಾದಷ್ಟು ದಿನ ಬಳಸಿ ನಂತರ ಪರಿಚಯಸ್ಥರಿಗೆಲ್ಲ ಸ್ನೇಹಿತನ ವಾಹನ ಎಂದು ಹೇಳಿ ಅಡವಿಟ್ಟು ಮೋಜು ಮಾಡುತ್ತಿದ್ದರು ಎಂದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಲ್ಸನ್ಗಾರ್ಡನ್ ಮತ್ತು ಕಾಟನ್ಪೇಟೆ ಠಾಣೆ ವ್ಯಾಪ್ತಿಗಳಲ್ಲಿನ ಬೈಕ್ ಕಳವು ಪ್ರಕರಣದಲ್ಲಿ ಬಂಧಿತನಾಗಿದ್ದ ಇಮ್ರಾನ್ ಖಾನ್ ಮತ್ತು ಕೋಲಾರ ಜಿಲ್ಲೆ ವೇಮಗಲ್ ಠಾಣೆ ವ್ಯಾಪ್ತಿಯ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ನದೀಮ್ ಜೈಲಿನಲ್ಲಿ ಸ್ನೇಹಿತರಾಗಿ ಜಾಮೀನು ಮೇಲೆ ಬಿಡುಗಡೆಯಾಗಿ ಬಂದು ಶಫಿ ಜತೆ ಸೇರಿ ಚಾಳಿ ಮುಂದುವರೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇವರ ಬಂಧನದಿಂದ 8 ಪ್ರಕರಣಗಳು ಪತ್ತೆಯಾಗಿವೆ. ಹೊಸೂರು ರಸ್ತೆ ಜಾನ್ಸನ್ ಮಾರ್ಕೆಟ್ ಬಳಿ ವಾಹನ ತಪಾಸಣೆ ನಡೆಸುವಾಗ ಅನುಮಾನಾಸ್ಪದವಾಗಿ ಕಂಡ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರ ಮಾರ್ಗದರ್ಶನ, ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಡಾ.ಶೋಭಾರಾಣಿ ನೇತೃತ್ವದಲ್ಲಿ ಅಶೋಕ ನಗರ ಠಾಣೆ ಇನ್ಸ್ಪೆಕ್ಟರ್ ವಿಜಯ್ ಹಡಗಲಿ, ಎಸ್ಐ ಹಜರೇಶ್, ಎ.ಕೆಲ್ಲೇದಾರ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
