ಬೆಂಗಳೂರು,ಅ.6: ನಂಜುಂಡಪ್ಪ ವರದಿ ಅನುಷ್ಠಾನ ನಿರ್ಲಕ್ಷ್ಯ, ಕಳಸಾ-ಬಂಡೂರಿ ಯೋಜನೆ ಜಾರಿಯಲ್ಲಿ ವಿಳಂಬ, ಗೋವಾ ಕನ್ನಡಿಗರ ರಕ್ಷಣೆ ಮಾಡುವಲ್ಲಿ ಸರ್ಕಾರದ ಉದಾಸೀನತೆ, ಹೈದರಾಬಾದ್-ಕರ್ನಾಟಕ ಅಭಿವೃದ್ಧಿಯಲ್ಲಿ ಅಲಕ್ಷ್ಯ ಧೋರಣೆ ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಇಂದು ಕೆಂಪೇಗೌಡ ಬಸ್ ನಿಲ್ದಾಣದ ಬಳಿ ತಮಟೆ ಚಳವಳಿ ನಡೆಸಿ ಪ್ರತಿಭಟನೆ ಮಾಡಿದರು.
ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಇದೇ 29ರಂದು ಬೆಳಗಾವಿಯ ಸುವರ್ಣಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.ನೆನೆಗುದಿಗೆ ಬಿದ್ದಿರುವ ಉತ್ತರ ಕರ್ನಾಟಕದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 26ರಂದು ಕರ್ನಾಟಕ
ರಾಜ್ಯ ಬಂದ್ ಮಾಡುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ವಾಟಾಳ್ ಹೇಳಿದರು.ಕಳಸಾ-ಬಂಡೂರಿ ಯೋಜನೆ, ಮೇಕೆದಾಟು ಯೋಜನೆ, ಗೋವಾ ಕನ್ನಡಿಗರ ರಕ್ಷಣೆ, 371ನೆ ವಿಧಿ ಪ್ರಕಾರ ಹೈದರಾಬಾದ್-ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಶಾಸನಸಭೆಯಲ್ಲಿ ಪರಿಣಾಮಕಾರಿಯಾಗಿ ಚರ್ಚೆ ನಡೆಯದಿರುವುದು, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಶಾಸಕರು ಈ ಬಗ್ಗೆ ದನಿ ಎತ್ತದಿರುವುದು ವಿಷಾದಕರ ಸಂಗತಿಯಾಗಿದೆ.ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಜನತೆ ಬೇಸತ್ತಿದ್ದಾರೆ. ಕಳಸಾ-ಬಂಡೂರಿ ಯೋಜನೆಗೆ ಇರುವ ತಡೆಯಾಜ್ಞೆಯನ್ನು ತೆರವುಗೊಳಿಸಿ ರಾಜ್ಯದ ಸಂಸದರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಗೋವಾ ಮುಖ್ಯಮಂತ್ರಿಯೊಂದಿಗೆ ಸಮಾಲೋಚನೆ ನಡೆಸಿ ಈ ಯೋಜನೆ ಜಾರಿಗೆ ಅನುಕೂಲ ಮಾಡಿಕೊಡಬೇಕು. ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆ ಬಗ್ಗೆ ಡಿಪಿಆರ್ ರೂಪಿಸಲು ಕೇವಲ 25 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ನಂತರ ಮುಂದುವರೆದ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ. ಸರ್ಕಾರ ತತ್‌ಕ್ಷಣ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಕೃಷ್ಣಕೊಳ್ಳದ ಯೋಜನೆಗಳಿಗೆ 10ಸಾವಿರ ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದರು. ಆದರೆ, ಅದು ಘೋಷಣೆಯಾಗಿಯೇ ಉಳಿದಿದೆ. ಕೃಷ್ಣಕೊಳ್ಳದ ಕಾಮಗಾರಿಗಳು ಆಮೆಗತಿಯಲ್ಲಿ ಸಾಗಿವೆ ಎಂದು ವಾಟಾಳ್ ಆರೋಪಿಸಿದರು.ನಂಜುಂಡಪ್ಪ ವರದಿ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ಈ ಭಾಗದ ಜನ ಬೇಸತ್ತಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳು ತಯಾರಾದವು. ಹಲವು ವರದಿಗಳನ್ನು ರೂಪಿಸಲಾಯಿತು. ಆದರೆ, ಸಮಪರ್ಕವಾಗಿ ಅನುಷ್ಠಾನಗೊಳ್ಳದ ಕಾರಣ ಆ ಭಾಗ ಅಭಿವೃದ್ಧಿಯಲ್ಲಿ ಹಿಂದೆ ಉಳಿಯಿತು.ಸರ್ಕಾರ ಸಮಾರೋಪಾದಿಯಲ್ಲಿ ಕ್ರಮ ಕೈಗೊಂಡು ಆ ಭಾಗದ ಜನರ ನೋವಿಗೆ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ವಾಟಾಳ್ ಹೇಳಿದರು.