ಕರ್ನಾಟಕ

ರಾಹುಲ್‌ ಜತೆ ರಮ್ಯಾ ಓಡಿದ್ದು ಹೇಗೆ: ಕುಮಾರಸ್ವಾಮಿ

Pinterest LinkedIn Tumblr

kumarಮಂಡ್ಯ: ರೇಷ್ಮೆ ಪ್ರೋತ್ಸಾಹ ಧನ ಹಾಗೂ ಕಬ್ಬಿನ ಸಂಪೂರ್ಣ ಹಣವನ್ನು ಸರಕಾರವೇ ರೈತರಿಗೆ ಆ.31ರೊಳಗೆ ಪಾವತಿಸಬೇಕು. ಇಲ್ಲದಿದ್ದರೆ ಚಾಮರಾಜನಗರ ದಿಂದ ಬೆಂಗಳೂರುವರೆಗೆ ಉಗ್ರ ಹೋರಾಟ ರೂಪಿಸಲಾಗುವುದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬ ಗಳಿಗೆ ಸಾಂತ್ವನ ಹೇಳಲು ಜಿಲ್ಲೆಯಲ್ಲಿ ಸೋಮವಾರ ಪ್ರವಾಸ ಕೈಗೊಂಡಿದ್ದ ವೇಳೆ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ”ಸರಕಾರದ ನಿಲುವು ಆಧರಿಸಿ ಆ.31ರ ನಂತರ ಹೋರಾಟದ ರೂಪರೇಷೆ ತಯಾರಿಸಲಾಗುವುದು. ಈ ವಿಚಾರವಾಗಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ನಾಳೆಯೇ ಪತ್ರ ಬರೆಯ ಲಾಗುವುದು” ಎಂದು ತಿಳಿಸಿದರು.

”300-400ರೂ. ಇದ್ದ ರೇಷ್ಮೆ ಬೆಲೆ ತೀವ್ರ ಕುಸಿತ ಕಂಡಿದೆ. ಸರಕಾರದ ಘೋಷಣೆಯಂತೆ 30ರೂ. ಪ್ರೋತ್ಸಾಹ ಧನದ ಮೊತ್ತವೇ 27 ಕೋಟಿ ರೂ.ಗಳಾಗಿದೆ. ಅದನ್ನು ಕೂಡಲೇ ಪಾವತಿಸಬೇಕು. 30ರಿಂದ 60ರೂ.ಗೆ ಹೆಚ್ಚಿಸಿರುವ ಪ್ರೋತ್ಸಾಹಧನವನ್ನು ರೈತರು ರೇಷ್ಮೆಗೂಡು ಮಾರಿದ ದಿನದಂದೇ ಅವರ ಬ್ಯಾಂಕ್ ಖಾತೆಗೆ ಪಾವತಿಸಬೇಕು. ರೈತರ ಎಲ್ಲ ಸಾಲಗಳನ್ನು ಮನ್ನಾ ಮಾಡಬೇಕು. ಕಾರ್ಖಾನೆಗಳಲ್ಲಿ ಕಬ್ಬು ಅರೆಯುವಿಕೆಗೆ ಕ್ರಮ ವಹಿಸಬೇಕು” ಎಂದು ಒತ್ತಾಯಿಸಿದರು.

ಲೇವಾದೇವಿಗಾರರ ವಿಶ್ವಾಸ ಅಗತ್ಯ: ”ಖಾಸಗಿ ಲೇವಾದೇವಿಗಾರರ ಸಭೆ ಕರೆದು ರೈತರಿಗೆ ನೀಡಿರುವ ಸಾಲದ ಬಡ್ಡಿ ಮನ್ನಾ ಮಾಡಿ, ಅಸಲು ಪಾವತಿಗೆ 1 ವರ್ಷ ಕಾಲಾವಕಾಶ ನೀಡುವಂತೆ ಕೋರಬೇಕು. ರೈತರ ಹೆಸರಿನಲ್ಲಿ ಇನ್ಯಾರೋ ಲೂಟಿ ಹೊಡೆಯುವುದನ್ನು ತಪ್ಪಿಸಬೇಕು. ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು, ಖಾಸವಿ ಲೇವಾದೇವಿ ಮಾಡುವವರೊಂದಿಗೆ ದಬ್ಬಾಳಿಕೆ, ದುರಂಹಕಾರದ ಮಾತುಗಳು ಬೇಡ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನವೊಲಿಸಬೇಕು. ಇದರಿಂದ ರೈತರಿಗೇ ಅನುಕೂಲವಾಗಲಿದೆ”ಎಂದರು.

”ಮೈಸೂರು ಭಾಗದಲ್ಲಿ 52 ಸಾವಿರ ಮಂದಿ ನೋಂದಾಯಿತ ತಂಬಾಕು ಬೆಳೆಗಾರರಿದ್ದಾರೆ. ಅವರ ಬದುಕು ಬೀದಿಗೆ ಬಿದ್ದಿದೆ. ಮಂಡ್ಯ, ಮೈಸೂರು ಭಾಗದಲ್ಲಿ ಬೆಳೆದಿರುವ ಕಬ್ಬಿನಲ್ಲಿ ಶೇ.50ರಷ್ಟು ಬೆಳೆ ರೈತರ ಕೈಸೇರಿದರೆ ಹೆಚ್ಚು. ಇಂತಹ ಸಂದರ್ಭದಲ್ಲಿ ಸರಕಾರ ರೈತರ ನೆರವಿಗೆ ಧಾವಿಸಬೇಕು. ಕೇಂದ್ರ ಮತ್ತು ರಾಜ್ಯ ಕೃಷಿ ಸಚಿವರು ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಲೋಪಗಳನ್ನು ಹುಡುಕುತ್ತಿದ್ದಾರೆ. ಕೃಷಿ ಸಂಕಷ್ಟದಿಂದಷ್ಟೇ ಅವರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂಬುದು ಅವರ ಭಾವನೆ. ಇದು ಸರಿಯಲ್ಲ. ಮುಖ್ಯಮಂತ್ರಿ ಹಾಗೂ ಅಧಿಕಾರದಲ್ಲಿರುವವರಿಗೆ ತಾಯಿ ಹೃದಯವಿರಬೇಕು. ಅದಿಲ್ಲದಿದ್ದರೆ ಎಷ್ಟೇ ರೈತರ ಆತ್ಮಹತ್ಯೆ ನಡೆದರೂ ನನಗೆ ಸಂಬಂಧವಿಲ್ಲವೆನ್ನುತ್ತಾರೆ. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಾಕ್ಷಿ” ಎಂದು ಟೀಕಿಸಿದರು.

ಹಣ ಲೂಟಿಗೆ ಹುನ್ನಾರ: ”ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಬೆಂಗಳೂರು ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ 1000 ಕೋಟಿ ರೂ. ಘೋಷಿಸಿರುವ ಮುಖ್ಯಮಂತ್ರಿ, ಮೊದಲ ಹಂತದಲ್ಲಿ ಲೋಕೋಪಯೋಗಿ ಇಲಾಖೆ ಕಾರ‌್ಯಕ್ರಮಗಳಿಗೆ 500 ಕೋಟಿ ರೂ. ಮೀಸಲಿರಿಸಿದ್ದಾರೆ. 20 ಕೋಟಿ ರೂ. ವೆಚ್ಚದ 30 ಕಾಮಗಾರಿಗಳಿಗೆ 70 ಕೋಟಿ ರೂ. ಲೆಕ್ಕ ತೋರಿಸಲಾಗಿದೆ. ಆ ಮೂಲಕ 50 ಕೋಟಿ ರೂ. ಹೊಡೆಯುವ ಹುನ್ನಾರ ನಡೆಸಲಾಗಿದೆ. ಅದೇ ಹಣವನ್ನು ರೈತರಿಗೆ ನೀಡಲಿ” ಎಂದರು.

ರೈತರಿಗಾಗಿ 5 ಸಾವಿರ ಕೋಟಿ ಸಾಲ ಮಾಡಿ: ”ಸಂಕಷ್ಟದಲ್ಲಿರುವ ರೈತರ ನೆರವಾಗಲು ಸಂಪನ್ಮೂಲ ಕ್ರೋಢಿಕರಿಸಲು ಸಾಧ್ಯವಾಗದಿದ್ದರೆ ರಾಜ್ಯ ಸರಕಾರ 5 ಸಾವಿರ ಕೋಟಿ ರೂ. ಸಾಲ ಮಾಡಲಿ. ಅದನ್ನು ತೀರಿಸಲು ಸರಕಾರದಿಂದ ಆಗದಿದ್ದರೆ ಅದರ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ”ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

”ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಜನರ ಮೇಲೆ 45 ಸಾವಿರ ಕೋಟಿ ರೂ. ಸಾಲ ಹೇರಿದೆ. ರೈತರಿಗಾಗಿ ಇನ್ನೂ 5 ಸಾವಿರ ಕೋಟಿ ಸಾಲ ಮಾಡಲಿ. ರೈತರ ಬದುಕಿನ ರಕ್ಷಣೆಗಾಗಿ ಅದೆಷ್ಟೇ ಆರ್ಥಿಕ ಹೊರೆಯಾದರೂ ಅದರ ಜವಾಬ್ದಾರಿಯನ್ನು ಸರಕಾರ ತೆಗೆದುಕೊಳ್ಳಬೇಕು”ಎಂದು ಹೇಳಿದರು.

ಸರಕಾರವೇ ಸತ್ತಿದೆ, ಅಂಬಿ ಬಗ್ಗೆ ಮಾತೇಕೆ?

ಮಂಡ್ಯ: ರೈತರ ಆತ್ಮಹತ್ಯೆ ಕುರಿತು ಡಾ.ವೀರೇಶ್ ಸಲ್ಲಿಸಿರುವ ವರದಿಯಲ್ಲೇ ಲೋಪವಿದ್ದುದರಿಂದ ಅದರ ಅನುಷ್ಠಾನಕ್ಕೆ ತಾವು ಮುಂದಾಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ವೀರೇಶ್ ಸಮಿತಿ ವರದಿ ಸಲ್ಲಿಸಿದ ನಂತರ ಎರಡು ವರ್ಷ ಎಸ್.ಎಂ.ಕೃಷ್ಣ ಅವರೇ ಮುಖ್ಯಮಂತ್ರಿಯಾಗಿದ್ದರು. ಬೇರೆಯವರ ಹೊಣೆಗಾರಿಕೆ ಬಗ್ಗೆ ಮಾತನಾಡುವ ಅವರು ತಾವೇ ಏಕೆ ವರದಿಯನ್ನು ಅನುಷ್ಠಾನ ಗೊಳಿಸಲಿಲ್ಲ” ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಕಾರ್ಯವೈಖರಿಗೆ ಪ್ರತಿಕ್ರಿಯಿಸಿದ ಅವರು, ”ಸರಕಾರವೇ ಸತ್ತು ಹೋಗಿದೆ. ಇನ್ನು ಸಚಿವ ಅಂಬರೀಷ್ ಅವರನ್ನು ಕಟ್ಟಿಕೊಂಡು ಏನು ಮಾಡುವುದು. ಬಹುತೇಕ ಸಚಿವರ ಕಾರ‌್ಯವೈಖರಿ ಅಂಬರೀಷ್ ಅವರಂತೆಯೇ ಇದೆ” ಎಂದು ಟೀಕಿಸಿದರು. ”ಮಂಡ್ಯಕ್ಕೆ ಕಾಲಿಗೆ ಬಟ್ಟೆ ಕಟ್ಟಿಕೊಂಡು ಬಂದ ನಟಿ ರಮ್ಯಾ ಅವರು, ರಾಹುಲ್‌ಗಾಂಧಿ ಅವರೊಂದಿಗೆ ಪೂನಾದಲ್ಲಿ ರಸ್ತೆಯಲ್ಲಿ ಓಡಿದ್ದೇಗೆ? ಬೆಂಗಳೂರಿನಲ್ಲಿ ಎಸ್.ಎಂ.ಕೃಷ್ಣ ಅವರ ಮನೆಗೆ ಭೇಟಿ ನೀಡಿದಾಗಲೂ ಕಾಲಿನಲ್ಲಿ ಬ್ಯಾಂಡೇಜ್ ಪಟ್ಟಿ ಇರಲಿಲ್ಲ” ಎಂದು ಕಟಕಿಯಾಡಿದರು.

ಕಣ್ಣೀರಿಟ್ಟ ಕುಮಾರಸ್ವಾಮಿ

ಮೃತ ರೈತರ ಕುಟುಂಬದವರಿಗೆ ಸಾಂತ್ವನ ಹೇಳಲು ಜಿಲ್ಲೆಯಲ್ಲಿ ಸೋಮವಾರ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತ್ರಸ್ತರೊಂದಿಗೆ ತಾವೂ ಕಣ್ಣೀರಿಟ್ಟರು.

ಮಳವಳ್ಳಿ ತಾಲೂಕು ಕರ‌್ಲಕಟ್ಟೆಯ ರೈತ ಉಮೇಶ್ ಮನೆಗೆ ಕುಮಾರಸ್ವಾಮಿ ಭೇಟಿ ನೀಡುತ್ತಿದ್ದಂತೆ ಮೃತರ ಪತ್ನಿ ಹಾಗೂ ತಾಯಿ ರೋದಿಸಿತೊಡಗಿದರು. ಅವರ ನೋವಿನ ಮಾತುಗಳನ್ನು ಕೇಳುತ್ತಿದ್ದಂತೆ ಕುಮಾರಸ್ವಾಮಿ ಅವರ ಕಣ್ಣಾಲಿಗಳು ತುಂಬಿದವು. ಕಣ್ಣುಗಳಿಂದ ಜಾರಿದ ನೀರ ಹನಿಗಳನ್ನು ಒರೆಸಿಕೊಳ್ಳುತ್ತಲೇ ರೈತನ ಕುಟುಂಬದವರನ್ನು ಸಂತೈಸುವ ಪ್ರಯತ್ನ ಮಾಡಿದರು. ರೈತನ ಪುಟ್ಟ ಹೆಣ್ಣು ಮಕ್ಕಳ ಸ್ಥಿತಿ ಕಂಡು ಮರುಗಿದರು.

”ನಮ್ ಬದ್ಕಿಗೆ ಆಧಾರವಾಗಿದ್ದ ನಮ್ಮೆಜಮಾನ್ರು ನಮ್ಗೆ ಮೋಸ ಮಾಡಿ ಹೋಗ್ಬಿಟ್ರು. ಈ ಮಕ್ಳು ಅನಾಥವಾಗಿವೆ. ನಮ್ಗೆ ಇನ್ಯಾರು ದಿಕ್ಕು..?”ಎಂದು ರೈತ ಉಮೇಶ್ ಅವರ ಪತ್ನಿ ಗೋಳಾಡಿದರು. ಅವರ ಕುಟುಂಬದವರ ರೋದನ, ಗೋಳಾಟ ಕಂಡು ಮರುಗಿದ ಕುಮಾರಸ್ವಾಮಿ ತಾವೂ ಕಣ್ಣೀರಿಟ್ಟರು. ಜತೆಗೆ ವೈಯಕ್ತಿಕವಾಗಿ 50 ಸಾವಿರ ರೂ. ಪರಿಹಾರ ನೀಡಿ ಸಾಂತ್ವನ ಹೇಳಿದರು.

Write A Comment