ಕರ್ನಾಟಕ

3 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪೋಷಕರ ಪ್ರತಿಭಟನೆ

Pinterest LinkedIn Tumblr

blore_0

ಬೆಂಗಳೂರು, ಆ.4: ವಿಬ್ ಗಯಾರ್ ಶಾಲೆಯಲ್ಲಿ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕರಿನೆರಳು ಮಾಸುವ ಮುನ್ನವೆ ನಗರದ ಇಂದಿರಾನಗರದಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಹೀನಕೃತ್ಯ ನಡೆದಿದೆ.

ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಪೋಷಕರು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸೇರಿ ನೂರಾರು ಮಂದಿ ಕೃತ್ಯ ನಡೆದ ಖಾಸಗಿ ಶಾಲೆಯ ಮುಂಭಾಗ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಖಾಸಗಿ ಶಾಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರತಿಭಟನಾಕಾರರು ಪೊಲೀಸರ ವಿರುದ್ಧವೂ ಘೋಷಣೆಗಳನ್ನು ಕೂಗಿದರು.

ಕೃತ್ಯ ನಡೆಸಿದ ಆರೋಪಿಗೆ ನೇಣು ಶಿಕ್ಷೆ ವಿಧಿಸಬೇಕು. ಮುಂದೆ ಈ ರೀತಿಯ ಕೃತ್ಯಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಶಾಲೆಯ ಆಡಳಿತ ಮಂಡಲಿಯು ಮಕ್ಕಳಿಗೆ ಸೂಕ್ತರೀತಿಯ ರಕ್ಷಣಾ ಕ್ರಮಗಳನ್ನು ಕೈಗೊಂಡಿಲ್ಲದಿರುವುದು ಇಂತಹ ಕೃತ್ಯ ನಡೆಯಲು ಕಾರಣವಾಗಿದೆ ಎಂದು ದೂರಿದರು.

ಪೋಷಕರು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸುದ್ದಿ ತಿಳಿದ ತಕ್ಷಣ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಸ್ಥಳದಲ್ಲಿ ಬಿಗಿ ಬಂದೊಬಸ್ಥ್ ವ್ಯವಸ್ಥೆ ಕಲ್ಪಿಸಲಾಗಿದೆ.

ಇಂದಿರಾನಗರದ ಖಾಸಗಿ ಶಾಲೆಯೊಂದರಲ್ಲಿ ನರ್ಸರಿ ತರಗತಿಗೆ ಹೊಗುತ್ತಿದ್ದ ಮೂರು ವರ್ಷದ ಬಾಲಕಿಯ ಮೇಲೆ ನಿನ್ನೆ ಬೆಳಿಗ್ಗೆ ಶಾಲೆಯ ಆವರಣದಲ್ಲಿ ಸೆಕ್ಯುರಿಟಿ ಗಾರ್ಡ್ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ಮನೆಗೆ ಮಂಕಾಗಿ ಬಂದ ಬಾಲಕಿಯನ್ನು ವಿಚಾರಿಸಿದಾಗ ಅದು ಹೊಟ್ಟೆನೋವು ಎಂದು ಹೇಳತೊಡಗಿದೆ, ಅನುಮಾನಗೊಂಡ ತಂದೆ-ತಾಯಿ ನಿಧಾನವಾಗಿ ಬಾಯಿ ಬಿಡಿಸಿದಾಗ ಲೈಂಗಿಕ ದೌರ್ಜನ್ಯ ನಡೆದಿರುವುದು ಗೊತ್ತಾಗಿದೆ.

ತಕ್ಷಣವೇ ಪೊಲೀಸರಿಗೆ ದೂರು ನೀಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಧೃಡಪಟ್ಟ ಕೂಡಲೇ ಕಾರ್ಯಾಚರಣೆ ಕೈಗೊಂಡ ಇಂದಿರಾನಗರ ಪೊಲೀಸರು ಬಾಲಕಿಯ ನೀಡಿದ ಮಾಹಿತಿ ಆಧರಿಸಿ ಸೆಕ್ಯುರಿಟಿ ಗಾರ್ಡ್‌ನನ್ನು ಬಂಧಿಸಿದ್ದಾರೆ.

ಬಂಧಿತ ಕೊಲ್ಕತ್ತಾ ಮೂಲದ 25 ವರ್ಷದ ಸೆಕ್ಯುರಿಟಿ ಗಾರ್ಡ್ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ. ಆತನ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಡಿಸಿಪಿ ಸತೀಶ್ ಕುಮಾರ್ ತಿಳಿಸಿದ್ದಾರೆ.

Write A Comment