ರಾಯಚೂರು: ನಮ್ಮನ್ನು ಕಿಡ್ನಾಪ್ ಮಾಡಿ ಯಾವ ತೊಂದರೆಯನ್ನೂ ಕೊಟ್ಟಿಲ್ಲ. ಪ್ರಾಧ್ಯಾಪಕರಾದ ನಮ್ಮನ್ನು ಗೌರವದಿಂದ ಕಂಡಿದ್ದಾರೆ. ಭಾರತಕ್ಕೆ ಮರಳಿದ ಮೇಲೆ ಮೆಸೇಜ್ ಮಾಡಿ(ನಿಮ್ಮ ಮಕ್ಕಳ ಮೇಷ್ಟ್ರು ಅಂದದ್ದಕ್ಕೆ ಬಿಟ್ರು) ಎಂದು ಹೇಳಿದ್ದರು. ನೀವೆಲ್ಲಾ ನಮಗೆ ಸಹಾಯ ಮಾಡಿದ್ದೀರಿ, ನಿಮಗೆಲ್ಲಾ ಧನ್ಯವಾದಗಳು…ಇದು ಲಿಬಿಯಾದಲ್ಲಿ ಐಸಿಸ್ ಉಗ್ರರಿಂದ ಅಪಹರಿಸಲ್ಪಟ್ಟು ಬಿಡುಗಡೆಯಾದ ನಂತರ ತಾಯ್ನಾಡಿಗೆ ಮರಳಿದ ರಾಯಚೂರಿನ ಪ್ರೊ.ಲಕ್ಷ್ಮೀಕಾಂತ್ ನುಡಿಗಳು.
ಮಂಗಳವಾರ ಬೆಳಗ್ಗೆ ಲಕ್ಷ್ಮೀಕಾಂತ್ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪತ್ನಿ ಸೇರಿದಂತೆ ಕುಟುಂಬಿಕರು ಅವರನ್ನು ಆದರದಿಂದ ಬರಮಾಡಿಕೊಂಡರು. ಅಷ್ಟೇ ಅಲ್ಲ ಇನ್ನೂ ಕೂಡಾ ಉಗ್ರರ ವಶದಲ್ಲಿರುವ ಆಂಧ್ರಪ್ರದೇಶದ ಬಲರಾಮ್ ಮತ್ತು ಗೋಷಿಕೃಷ್ಣ ಐಸಿಸ್ ಉಗ್ರರ ವಶದಲ್ಲಿದ್ದಾರೆ. ಬಲರಾಮ್ ಮತ್ತು ಗೋಷಿಕೃಷ್ಣ ಕುಟುಂಬದವರು ಪ್ರೊ.ಲಕ್ಷ್ಮೀಕಾಂತ್ ಜೊತೆ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದರು.
ತೆಲುಗು, ಕನ್ನಡ ಮಾತನಾಡದೇ ಇಂಗ್ಲೀಷ್ ನಲ್ಲಿ ಉತ್ತರಿಸಿದ ಲಕ್ಷ್ಮೀಕಾಂತ್;
ಹೈದರಾಬಾದ್ ನಲ್ಲಿ ಪ್ರೊ.ಲಕ್ಷ್ಮೀಕಾಂತ್ ಅವರನ್ನು ಮಾಧ್ಯಮದವರು ಸುತ್ತುವರಿದಾಗ ಕೆಲವರು ತೆಲುಗಿನಲ್ಲಿ ಉತ್ತರಿಸುವಂತೆ ಕೇಳಿಕೊಂಡರು. ಆದರೆ ತೆಲುಗು ಮಾಧ್ಯಮಗಳು ಕೆಟ್ಟದಾಗಿ ಬರೆದಿದ್ದರಿಂದ ಲಕ್ಷ್ಮೀಕಾಂತ್ ತೆಲುಗು, ಕನ್ನಡ ಭಾಷೆ ಬಿಟ್ಟು, ಇಂಗ್ಲೀಷ್ ಮತ್ತು ಅರೇಬಿಕ್ ಭಾಷೆಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಕೆಲವು ಪ್ರಶ್ನೆಗಳಿಗೆ ಲಕ್ಷ್ಮೀಕಾಂತ್ ಉತ್ತರ ನೀಡಲು ನಿರಾಕರಿಸಿದರು.
ನಾನು ಅರೇಬಿಕ್ ಭಾಷೆಯಲ್ಲಿ ಮಾತನಾಡಿರೋದಕ್ಕೆ ತಪ್ಪು ತಿಳಿಯಬಾರದು ಎಂದು ಲಕ್ಷ್ಮೀಕಾಂತ್ ಹೇಳಿದರು.ನೀವೆಲ್ಲಾ ನಮಗೆ ಸಹಾಯ ಮಾಡಿದ್ದೀರಿ ನಿಮಗೆಲ್ಲಾ ಧನ್ಯವಾದಗಳು ಎಂದರು.
ಭಾರತಕ್ಕೆ ಹೋದ್ಮೇಲೆ ಮೆಸೇಜ್ ಮಾಡ್ಲಿಕ್ಕೆ ಹೇಳಿದ್ರು:
8ರಿಂದ 10ವರ್ಷ ನಾನು ಕೆಲಸಕ್ಕಾಗಿ ಲಿಬಿಯಾಕ್ಕೆ ಹೋಗಿದ್ದೆ. ಉಳಿದ ಪ್ರಾಧ್ಯಾಪಕರ ಬಗ್ಗೆ ಚಿಂತಿಸಬೇಡಿ ಎಂದು ಐಸಿಸ್ ಬಂಡುಕೋರರು ತಿಳಿಸಿದ್ದರು. ಅಲ್ಲದೇ ಭಾರತಕ್ಕೆ ತಲುಪಿದ ಮೇಲೆ ಮೆಸೇಜ್ ಮಾಡಲು ಹೇಳಿದ್ದರು. ನಮ್ಮನ್ನು ಕರೆದುಕೊಂಡು ಹೋಗಿದ್ದ ಅವರೆಲ್ಲಾ ನಮಗೆ ಏನೂ ಮಾಡಿಲ್ಲ. ಗೌರವದಿಂದ ನೋಡಿಕೊಂಡಿದ್ದರು ಎಂದು ತಿಳಿಸಿದರು. ಹೈದರಬಾದ್ ನಿಂದ ಹೊರಟ ಲಕ್ಷ್ಮೀಕಾಂತ್ ರಾಯಚೂರಿಗೆ ತೆರಳಿದರು.
7.15ಕ್ಕೆ ಮತ್ತೊಬ್ಬ ಕನ್ನಡಿಗ ವಿಜಯ್ ಕುಮಾರ್ ವಾಪಸ್:
ಐಸಿಸ್ ಉಗ್ರರಿಂದ ಅಪಹರಿಸಲ್ಪಟ್ಟು ಬಿಡುಗಡೆಗೊಂಡಿದ್ದ ಮತ್ತೊಬ್ಬ ಕನ್ನಡಿಗ ಬೆಂಗಳೂರಿನ ವಿಜಯ್ ಕುಮಾರ್ ಅವರು 7.15ಕ್ಕೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
-ಉದಯವಾಣಿ