ಕನಕಪುರ,ಆ.4- ರಾಷ್ಟ್ರೀಯ ಹಬ್ಬಗಳು ಕೇವಲ ಶಾಲಾ ಮಕ್ಕಳ ಕಾರ್ಯಕ್ರಮವಾಗಬಾರದು. ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಈ ಹಬ್ಬಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಗೈರು ಹಾಜರಾದ ಅಧಿಕಾರಿಗಳನ್ನು ಅಮಾನತುಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದರು. ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಜರುಗಿದ 69ನೇ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕು ಕೇಂದ್ರದಲ್ಲಿ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಖಾಸಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಳ್ಳುವಂತೆ ಖಾಸಗಿ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ
ನೋಟೀಸ್ ಜಾರಿ ಮಾಡುವಂತೆ ಸೂಚಿಸಿದರು. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುವ ಗಣ್ಯರಿಗೆ ಸೂಕ್ತವಾದ ಆಸನಗಳ ವ್ಯವಸ್ಥೆ, ಶಾಲಾ ಮಕ್ಕಳಿಗೆ ಕಾರ್ಯಕ್ರಮಕ್ಕೆ ಮುನ್ನ ತಿಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಏರ್ಪಡಿಸುವಂತೆ ತಹಶೀಲ್ದಾರ್ ಹನುಮಂತರಾಯಪ್ಪನವರಿಗೆ ಸೂಚಿಸಿದರು. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ರವಿ, ನಗರಸಭಾ ಅಧ್ಯಕ್ಷ ರಾಮಚಂದ್ರು, ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಂ.ಡಿ.ವಿಜಯದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ದಿಲೀಪ್, ತಾ.ಪಂ ಅಧ್ಯಕ್ಷ ಹೊಸಕೋಟೆ ಪುರುಷೋತ್ತಮ್ ಸಭೈಯಲ್ಲಿ ಹಾಜರಿದ್ದು ಸಲಹೆಗಳನ್ನು ನೀಡಿದರು. ಶ್ರದ್ಧಾಂಜಲಿ: ಪೂರ್ವಭಾವಿ ಸಭೆಗೂ ಮುನ್ನ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂರವರಿಗೆ ಒಂದು ನಿಮಿಷ ಮೌನ ಆಚರಿಸುವುದರ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ತಾಲ್ಲೂಕಿನ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.