ಭದ್ರಾವತಿ: ಈ ಮಹಿಳೆಯ ಬಳಿ ಇದ್ದುದು ಒಂದಲ್ಲ, ಎರಡಲ್ಲ ಬರೋಬ್ಬರಿ 10 ಮೊಬೈಲ್ ಗಳು ! ಅದೂ ಒಂದಕ್ಕಿಂತ ಒಂದು ದುಬಾರಿ ಸೆಟ್ ಗಳು. ಸ್ಯಾಮ್ಸಂಗ್ ನೋಟ್-2, ಸ್ಯಾಮ್ಸಂಗ್ ಎಸ್-5 ಸೇರಿದಂತೆ ಹಲವು ಮೊಬೈಲ್ ಈಕೆಯ ಬಳಿ ಇದ್ದವು.
ಅಂದ ಹಾಗೇ ಈಕೆಯೇನು ಆ ಮೊಬೈಲ್ ಅಂಗಡಿ ಹೊಂದಿಲ್ಲ, ಅಲ್ಲದೇ, ತನಗಾಗಿ ಕೂಡಾ ಬಳಸುತ್ತಿರಲಿಲ್ಲ. ಬದಲಿಗೆ ಅವೆಲ್ಲಾ ಕಳವು ಮಾಡಿದವು. ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಮೊಬೈಲ್ ಕಳವು ಮಾಡುವುದು ಈಕೆಯ ಚಾಳಿ.
ಭದ್ರಾವತಿಯ ಲಕ್ಷ್ಮಿ ಎಂಬಾಕೆ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದಾಗ ಗಸ್ತಿನಲ್ಲಿದ್ದ ಗ್ರಾಮಾಂತರ ಪೊಲೀಸರು ಅನುಮಾನದ ಮೇರೆಗೆ ಬಂಧಿಸಿ ವಿಚಾರಣೆ ನಡೆಸಿದ ವೇಳೆ ಈಕೆ ಮೊಬೈಲ್ ಕಳವು ಮಾಡಿರುವುದು ಗೊತ್ತಾಗಿದೆ. ಆಕೆಯಿಂದ ಸ್ಯಾಮ್ಸಂಗ್ ಸೇರಿದಂತೆ ವಿವಿಧ ಕಂಪನಿಯ 1.20 ಲಕ್ಷ ಮೌಲ್ಯದ 10 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.