ಕರ್ನಾಟಕ

ರೈತ ಬಾಂಧವರಿಗೆ ಇಂದು ಕರಾಳ ದಿನ: ಏಳು ಮಂದಿ ಆತ್ಮಹತ್ಯೆಗೆ ಶರಣು

Pinterest LinkedIn Tumblr

raithaಮಂಡ್ಯ: ರಾಜ್ಯಾದ್ಯಂತ ಇಂದು ಮತ್ತೆ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದ್ದು ಇಂದು ಮಂಡ್ಯ ಮತ್ತು ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗುತ್ತಿದ್ದು, ಇಂದು ರೈತರ ಕರಾಳ ದಿನವಾಗಿ ಕಂಡು ಬಂದಿದೆ.

ಹೌದು, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಧನಗೂರು ಗ್ರಾಮದ ರೈತ ಪುಟ್ಟಸ್ವಾಮಿ(40) ಆತ್ಮಹತ್ಯೆಗೆ ಶರಣಾದ್ದು, ಈತ ತನ್ನ 30 ಗುಂಟೆ ಜಮೀನಿನಲ್ಲಿ ಕಬ್ಬುನ್ನು ಬೆಳೆದಿದ್ದ. ಇದಕ್ಕಾಗಿ 4 ಲಕ್ಷ ಸಾಲವನ್ನು ಮಾಡಿಕೊಂಡಿದ್ದ. ಆದರೆ ಕಬ್ಬಿಗೆ ಸೂಕ್ತ ಬೆಲೆ ಸಿಗದ ಕಾರಣ ಮನನೊಂದು ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 26 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೈಸೂರಿನಲ್ಲಿಯೂ ಕೂಡ ರೈತರ ಆತ್ಮಹತ್ಯೆ ಮುಂದುವರಿದಿದ್ದು, ಜಗದೀಶ್(22) ಎಂಬ ರೈತ ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ 2 ಎಕರೆ ಜಮೀನಿದ್ದು, ಇವರ ತಂದೆ ಕೃಷಿಗಾಗಿ ಸಾಕಷ್ಟು ಕೈ ಸಾಲ ಮಾಡಿಕೊಂಡಿದ್ದರು. ಆದರೆ ತಂದೆ ಮಾಡಿದ ಸಾಲವನ್ನು ಮರುಪಾವತಿಸುವಂತೆ ಸಾಲಗಾರರು ಇವರನ್ನು ಪೀಡಿಸುತ್ತಿದ್ದರು. ಕಾರಣ ಮನನೊಂದು ನೇಣು ಬಿಗಿದುಕೊಳ್ಳುವ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಂಬಂಧ ಪಿರಿಯಾಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯಲ್ಲಿ ಮತ್ತೊಂದು ಇಂತಹುದೇ ಪ್ರಕರಣ ದಾಖಲಾಗಿದ್ದು, ತಾಲೂಕಿನ ಎನ್.ಹೊಸಹಳ್ಳಿ ಗ್ರಾಮದ ರೈತನೋರ್ವ ತನ್ನ ಜಮೀನಿನಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ಮೃತ ರೈತನನ್ನು ಮಂಜುನಾಥ್ ಎಂದು ಹೇಳಲಾಗಿದ್ದು, ಈತ ಶುಂಠಿ ಹಾಗೂ ಜೋಳದ ಬೆಳೆಯನ್ನು ಬೆಳೆದಿದ್ದ. ಇದಕ್ಕಾಗಿ 4 ಲಕ್ಷ ಸಾಲ ಮಾಡಿಕೊಂಡಿದ್ದ. ಆದರೆ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪಿರಿಯಾಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ಜಿಲ್ಲೆಯ ನೆರೆ ಜಿಲ್ಲೆ ಚಾಮರಾಜನಗರ ಜಿಲ್ಲೆಯಲ್ಲಿಯೂ ಕೂಡ ರೈತರ ಆತ್ಮಹತ್ಯೆ ಮುಂದುವರಿದಿದ್ದು, ತಾಲೂಕಿನ ಇರಸವಾಡಿ ಗ್ರಾಮದ ಮರಿಸ್ವಾಮಿ(52) ಎಂಬ ರೈತ ನೇಣಿಗೆ ಶರಣಾಗಿದ್ದಾನೆ. ಈತ ಶುಂಠಿ ಬೆಳೆಯನ್ನು ಬೆಳೆದಿದ್ದ. ಬೆಳೆಗಾಗಿ ಮಹಿಳಾ ಸ್ವ ಸಹಾಯ ಸಂಘದಲ್ಲಿ 50 ಸಾವಿರ ಸೇರಿದಂತೆ ಇನ್ನಿತರೆಡೆ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಅಲ್ಲದೆ ತಮ್ಮ ಕೊಳವೆ ಬಾವಿಯಲ್ಲಿಯೂ ಕೂಡ ನೀರು ಬತ್ತಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಬೆಳೆ ನಷ್ಟ ಅನುಭವಿಸಿದ ಈತ, ಇಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ. ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದಲ್ಲಿಯೂ ಕೂಡ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿದ್ದು, ಈರಪ್ಪ ಕಡಕೋಳ್(52) ಎಂಬ ರೈತ ನೇಣಿಗೆ ಶರಣಾಗುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಬೆಳೆಗಾಗಿ 8 ಲಕ್ಷ ಸಾಲ ಮಾಡಿಕೊಂಡಿದ್ದ. ಆದರೆ ಸಾಲ ತೀರಿಸಲಾಗದೆ ನೇಣಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ. ಈ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.

ರಾಮನಗರ ಜಿಲ್ಲೆಯಲ್ಲಿಯೂ ಕೂಡ ರೈತರ ಆತ್ಮಹತ್ಯೆ ಸರಣಿ ಇನ್ನೂ ಮುಂದುವರಿದಿದ್ದು, ಕನಕಪುರ ತಾಲೂಕಿನ ರಮೇಶ್ ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ರೇಷ್ಮೆ ಬೆಳೆಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಆದರೆ ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 8 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಇನ್ನು ವಿಜಯಪುರ ಜಿಲ್ಲೆಯಲ್ಲಿಯೂ ಕೂಡ ಓರ್ವ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಖಾಳಗಿ ಗ್ರಾಮದ ರೈತ ಮಹಾದೇವಗೌಡ(45) ಎಂಬ ರೈತನೇ ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯಾಗಿದ್ದಾನೆ.

ಗ್ರಾಮಸ್ಥರ ಹೇಳಿಕೆ ಪ್ರಕಾರ, ಈತ ಕಳೆದ ಮೂರು ದಿನಗಳ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗಿದ್ದು, ಮೃತ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈತ 6 ಲಕ್ಷ ಸಾಲ ಮಾಡಿಕೊಂಡಿದ್ದ. ಆದರೆ ಸಾಲ ತೀರಿಸಲಾಗದೆ ತಮ್ಮ ಕಬ್ಬಿನ ತೋಟದಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Write A Comment