ಕರ್ನಾಟಕ

ಸಾಲ ಮರುಪಾವತಿಸುವಂತೆ ಪತಿಗೆ ಬೈಗುಳ: ಪತ್ನಿ ಆತ್ಮಹತ್ಯೆಗೆ ಶರಣು

Pinterest LinkedIn Tumblr

sucuideಮೈಸೂರು: ಸಾಲ ಮರು ಪಾವತಿ ಮಾಡುವಂತೆ ಬ್ಯಾಂಕ್ ಅಧಿಕಾರಿಗಳು  ತನ್ನ ಪತಿಗೆ ಬೈದರು ಎಂಬ ಕಾರಣದಿಂದ ಮನನೊಂದ ಮಹಿಳೆಯೋರ್ವಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಯೋಗಮಣಿ ಎಂದು ಹೇಳಲಾಗಿದ್ದು, ಬ್ಯಾಂಕ್‍‌ವೊಂದರಲ್ಲಿ ತೆಗೆದುಕೊಂಡಿದ್ದ ಸಾಲವನ್ನು ಮರು ಪಾವತಿಸುವಂತೆ ತನ್ನ ಗಂಡನಿಗೆ ಅಧಿಕಾರಿಗಳು ಬೈದರು ಎಂಬ ಕಾರಣ ಹಿನ್ನೆಲೆಯಲ್ಲಿ ಮನನೊಂದು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?:
ಮೃತ ಮಹಿಳೆಯ ಗಂಡನಿಗೆ 20 ಗುಂಟೆ ಜಮೀನಿದ್ದು, ಆ ಜಮೀನಿನ ಆಧಾರದ ಮೇಲೆ 4 ವರ್ಷಗಳ ಹಿಂದೆ 3 ಲಕ್ಷ ಸಾಲ ತೆಗೆದುಕೊಂಡಿದ್ದರು. ಆದರೆ ಆ ಜಮೀನು ಮೃತಳ ಅತ್ತೆ ನಿಂಗಜ್ಜಮ್ಮ ಅವರ ಹೆಸರಿನಲ್ಲಿತ್ತು. ಈ ಹಿನ್ನೆಲೆಯಲ್ಲಿ ನಿಂಗಜ್ಜಮ್ಮನನ್ನು ಕಚೇರಿಗೆ ಕರೆಸಿಕೊಂಡಿದ್ದ ಬ್ಯಾಂಕ್ ಅಧಿಕಾರಿಗಳು, ಸಾಲವನ್ನು ಒಂದು ವಾರದ ಒಳಗೆ ಮರುಪಾವತಿಸುವಂತೆ ಸೂಚಿಸಿದ್ದರು. ಈ ವೇಳೆ ಮೃತ ಯೋಗಮಣಿ ಹಾಗೂ ಆಕೆಯ ಪತಿ ಬಸವರಾಜ್ ಕೂಡ ನಿಂಗಜ್ಜಮ್ಮನ ಜೊತೆ ಕಚೇರಿಗೆ ತೆರಳಿದ್ದರು. ಈ ವೇಳೆ ಪ್ರಸ್ತುತ ಜಮೀನಿನಲ್ಲಿ ತಂಬಾಕನ್ನು ಬೆಳೆಯುತ್ತಿದ್ದು, ಬೆಳೆ ಕೈ ಸೇರಿದ ಬಳಿಕ ಸಾಲ ಮರು ಪಾವತಿ ಮಾಡುವುದಾಗಿ ಬಸವರಾಜ್ ಅಧಿಕಾರಿಗಳಿಗೆ ತಿಳಿಸಿದರು. ಆದರೆ ಬಸವರಾಜ್ ಮಾತನ್ನು ಕೇಳದ ಅಧಿಕಾರಿಗಳು, ಬಸವರಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದ ಪತ್ನಿ ಯೋಗಮಣಿ, ಸೀಮೆಎಣ್ಣೆ ಸುರಿದುಕೊಂಡು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಕೆ.ಆರ್.ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Write A Comment