ಕರ್ನಾಟಕ

ವ್ಯಕ್ತಿಯ ನಾಪತ್ತೆ ಪ್ರಕರಣ; ಕೊಲೆಗೀಡಾದ ರಹಸ್ಯ6 ವರ್ಷಗಳ ನಂತರ ಬಯಲು !

Pinterest LinkedIn Tumblr

murder

ಬೆಂಗಳೂರು: ಆರು ವರ್ಷಗಳ ಹಿಂದೆ ಸ್ನೇಹಿತನನ್ನು ಕೊಲೆ ಮಾಡಿ, ಮೃತದೇಹವನ್ನು ಬಾಬುಸಾಪಾಳ್ಯದ ಚಿಕ್ಕನಂಜುಂಡರೆಡ್ಡಿ ಲೇಔಟ್‌ ನಿರ್ಜನ ಪ್ರದೇಶದಲ್ಲಿ ಹೂತು ಪರಾರಿಯಾಗಿದ್ದ ಮೋಹನ್‌ ಕುಮಾರ್ (29) ಎಂಬಾತನನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.

2009ರ ಆಗಸ್ಟ್‌ 26ರಂದು ತಲೆಗೆ ದೊಣ್ಣೆಯಿಂದ ಹೊಡೆದು ಸ್ನೇಹಿತ ಸೆಲ್ವಕುಮಾರ್ (30) ಅವರನ್ನು ಕೊಲೆ ಮಾಡಿದ್ದ‌ ಆರೋಪಿ, ಶವ ಹೂತು ತಾಯಿ‌ ಜತೆ ತಮಿಳುನಾಡಿನ ವಾಣಿಯಂಬಾಡಿ ಸೇರಿದ್ದ. ಮೃತರ ಪತ್ನಿ ನೀಡಿದ ನಾಪತ್ತೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

‘ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಮೃತದೇಹ ಹೂತಿದ್ದ ಸ್ಥಳವನ್ನು ಶುಕ್ರವಾರ ಮಧ್ಯಾಹ್ನ ಬೆಂಗಳೂರು ಉತ್ತರ ಜಿಲ್ಲಾ ಉಪ ವಿಭಾಗಾಧಿಕಾರಿ ಅವರ ಸಮ್ಮುಖದಲ್ಲಿ ಅಗೆಯಲಾಯಿತು. ಅಲ್ಲಿ ದೊರೆತ ಮೂಳೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಯಿತು’ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

₨ 3 ಸಾವಿರಕ್ಕೆ ಕೊಲೆ: ತಮಿಳುನಾಡು ಮೂಲದ ಸೆಲ್ವಕುಮಾರ್, ಪತ್ನಿ ಉಷಾ ಹಾಗೂ ಇಬ್ಬರು ಮಕ್ಕಳ ಜತೆ ಬಾಬುಸಾಪಾಳ್ಯದಲ್ಲಿನೆಲೆಸಿದ್ದರು. ಕೂಲಿ ಕೆಲಸ ಮಾಡುತ್ತಿದ್ದ ಅವರಿಗೆ, ಆರೋಪಿ ಮೋಹನ್ ಬಾಲ್ಯ ಸ್ನೇಹಿತನಾಗಿದ್ದ. 2009ರ ಆಗಸ್ಟ್ 26ರಂದು ಸ್ನೇಹಿತರೆಲ್ಲ ಜೂಜಾಟದಲ್ಲಿ ತೊಡಗಿದ್ದರು. ಆಗ ಹಣ ಸೋತ ಮೋಹನ್, ತನ್ನಿಂದ ಸಾಲದ ರೂಪದಲ್ಲಿ ಪಡೆದಿದ್ದ ₨ 3 ಸಾವಿರ ಹಿಂದಿರುಗಿಸುವಂತೆ ಸೆಲ್ವಕುಮಾರ್‌ಗೆ ಕೇಳಿದ್ದ. ಆದರೆ, ಆಟವಾಡುವಾಗ ಯಾವುದೇ ಕಾರಣಕ್ಕೂ ಹಣ ಕೊಡುವುದಿಲ್ಲ ಎಂದು ಸೆಲ್ವಕುಮಾರ್ ಹೇಳಿದ್ದರು. ಈ ವಿಚಾರವಾಗಿ ಪರಸ್ಪರರ ನಡುವೆ ಮಾತಿಗೆ ಮಾತು ಬೆಳೆದಿತ್ತು.

ಸ್ನೇಹಿತನ ವರ್ತನೆಯಿಂದ ಕೋಪಗೊಂಡಿದ್ದ ಆರೋಪಿ, ಮಾತನಾಡುವ ಸೋಗಿನಲ್ಲಿ ರಾತ್ರಿ ಚಿಕ್ಕನಂಜುಂಡರೆಡ್ಡಿ ಲೇಔಟ್‌ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ದೊಣ್ಣೆಯಿಂದ ತಲೆಗೆ ಹೊಡೆದು, ಮೃತದೇಹವನ್ನು ಹೂತು ಮನೆಗೆ ಹಿಂದಿರುಗಿ ಘಟನೆ ಬಗ್ಗೆ ತಾಯಿ ಬಳಿ ವಿವರಿಸಿದ್ದ ಆತ, ಮರುದಿನವೇ ಮನೆ ಖಾಲಿ ಮಾಡಿಕೊಂಡು ತಾಯಿ ಜತೆ ವಾಣಿಯಂಬಾಡಿ ಸೇರಿದ್ದ.

ಇತ್ತ ಮನೆಗೆ ಬಾರದ ಪತಿಗಾಗಿ ಉಷಾ, ಕುಟುಂಬ ಸದಸ್ಯರ ಜತೆ ಹುಡುಕಾಟ ಪ್ರಾರಂಭಿಸಿದ್ದರು. ಮೊಬೈಲ್ ಸ್ವಿಚ್ ಆಫ್‌ ಆಗಿದ್ದರಿಂದ, ಪತಿಗೆ ಏನೋ ಅನಾಹುತ ಆಗಿದೆ ಎಂದೇ ಭಾವಿಸಿದ್ದರು. ಆದರೆ, ನಾಲ್ಕೈದು ದಿನಗಳಲ್ಲಿ ಮೊಬೈಲ್ ಮತ್ತೆ ಚಾಲೂ ಆಗಿತ್ತು. ನಂತರ ಉಷಾ ಅವರು ಪತಿಗೆ ಪ್ರತಿ ಸಲ ಕರೆ ಮಾಡಿದಾಗಲೂ ಯಾವುದೋ ಮಹಿಳೆ ಮಾತನಾಡಿದ್ದಳು. ಹೀಗಾಗಿ ಪತಿ ಬೇರೊಂದು ಮಹಿಳೆ ಜತೆ ನಗರ ತೊರೆದಿರಬಹುದು ಎಂದು ಉಷಾ ಹುಡುಕಾಟ ನಿಲ್ಲಿಸಿದ್ದರು. ಆದರೆ, ಮೃತರ ಆಪ್ತ ಸ್ವಾಮಿನಾಥನ್‌ಗೆ ಸೆಲ್ವಕುಮಾರ್ ಕೊಲೆಯಾಗಿರುವ ವಿಷಯ ಇದೇ ಜೂನ್ 11ರಂದು ಗೊತ್ತಾಯಿತು.

ಬಾಯ್ಬಿಟ್ಟ ಸಂಬಂಧಿ: ಸ್ವಾಮಿನಾಥನ್ ಮತ್ತು ಮೋಹನ್‌ ಅವರ ಸಂಬಂಧಿಕರ ನಡುವೆ ಜೂ.11ರ ರಾತ್ರಿ ಗಲಾಟೆ ಆಗಿತ್ತು. ಆಗ ಸಂಬಂಧಿಯೊಬ್ಬ, ‘ನಮ್ಮ ತಂಟೆಗೆ ಬಂದರೆ, ಸ್ವಾಮಿನಾಥನ್‌ಗೆ ಬಂದ ಸ್ಥಿತಿ ನಿನಗೂ ಬರುತ್ತದೆ. ಹೆಣ ಸಹ ಸಿಗದ ಹಾಗೆ ಮಾಡುತ್ತೇವೆ’ ಎಂದು ಬೆದರಿಸಿದ್ದಾರೆ. ಈ ವಿಚಾರವನ್ನು ಸ್ವಾಮಿನಾಥನ್, ಇತ್ತೀಚೆಗೆ ನಗರಕ್ಕೆ ಬಂದ ಸೆಲ್ವಕುಮಾರ್ ಅಣ್ಣ ಏಳುಮಲೈಗೆ ತಿಳಿಸಿದ್ದಾರೆ. ನಂತರ ಪತಿ ಕಾಣೆಯಾಗಿರುವ ಬಗ್ಗೆ ಜೂನ್ 30ರಂದು ಹೆಣ್ಣೂರು ಠಾಣೆಗೆ ದೂರು ಕೊಟ್ಟ ಉಷಾ, ಮೋಹನ್‌ನ ಸಂಬಂಧಿಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಎಲ್ಲಾ ವಿವರ ಗೊತ್ತಾಗಿದೆ. ಅಲ್ಲಿಗೆ ತೆರಳಿದ ಒಂದು ತಂಡ, ಮೋಹನ್‌ನನ್ನು ಬಂಧಿಸಿ ನಗರಕ್ಕೆ ಕರೆತಂದಿದೆ.

ಪತ್ನಿಯ ಪ್ರತೀಕ್ಷೆ
‘ಚೀಟಿ ಹಣ ಕಟ್ಟಿ ಬರುತ್ತೇನೆಂದು ಹೇಳಿ 2 ಸಾವಿರ ನಗದು ಹಾಗೂ ಕಿವಿ ಓಲೆ ತೆಗೆದುಕೊಂಡು ಮನೆಯಿಂದ ಹೋದ ಗಂಡ ಮತ್ತೆ ವಾಪಸ್ ಬರಲಿಲ್ಲ. ಈ ಹಿಂದೆ ಬೇರೆ ಮಹಿಳೆ ಜತೆ ಹೋಗಿದ್ದ ಗಂಡನ ಚಿಕ್ಕಪ್ಪ, 10 ವರ್ಷಗಳ ನಂತರ ವಾಪಸ್ ಬಂದಿದ್ದರು. ಗಂಡನೂ ಬೇರೊಂದು ಮಹಿಳೆ ಜತೆ ಹೋಗಿರಬಹುದು ಎಂದು ಭಾವಿಸಿ, ಅವರು ಬಂದೇ ಬರುತ್ತಾರೆಂದು ಆರು ವರ್ಷಗಳಿಂದ ಕಾಯುತ್ತಿದ್ದೆ’ ಎಂದು ಉಷಾ ದುಃಖತಪ್ತರಾದರು.

Write A Comment