ಕರಾವಳಿ

ಪಣಂಬೂರು ಬೀಚಿನಲ್ಲಿ 21 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಕೊನೆಗೂ ಪೋಲೀಸರ ಬಲೆಗೆ

Pinterest LinkedIn Tumblr

gold pana

ಬೆಂಗಳೂರು: ಮಂಗಳೂರು ಬಳಿಯ ಪಣಂಬೂರು ಕಡಲ ತೀರದ ವಾಹನ ನಿಲುಗಡೆ ಪ್ರದೇಶದಲ್ಲಿ ಕಾರಿನ ಗಾಜು ಒಡೆದು ₨.21 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ವೇಣುಗೋಪಾಲ ಅಲಿಯಾಸ್ ವೇಣು (26) ನಗರದ ಸುಂಕದಕಟ್ಟೆಯಲ್ಲಿ ಸಿಸಿಬಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

ಈ ಸಂಬಂಧ ನಗರದ ಗೃಹರಕ್ಷಕ ದಳದ ಸಿಬ್ಬಂದಿ ಲಕ್ಷ್ಮಿ ಅವರು ಪಣಂಬೂರು ಪೊಲೀಸರಿಗೆ ದೂರು ಕೊಟ್ಟಿದ್ದರು. ಕನಕಪುರ ತಾಲ್ಲೂಕು ಚಿಕ್ಕಮರಳವಾಡಿ ಗ್ರಾಮದ ಲಕ್ಷ್ಮಿ, ತಮ್ಮ ಕುಟುಂಬದ ಆರು ಸದಸ್ಯರ ಜತೆ ಜೂನ್ 6ರಂದು ಬೀಚ್‌ಗೆ ಹೋಗಿದ್ದರು. ಕಾರಿನಲ್ಲಿ ಒಡವೆ ಗಳನ್ನು ಬಿಚ್ಚಿಟ್ಟು ಮಧ್ಯಾಹ್ನ 1 ಗಂಟೆಗೆ ಅವರು ಬೀಚ್‌ಗೆ ಹೋಗಿದ್ದಾಗ ಆರೋಪಿ ಕೃತ್ಯ ಎಸಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮೂಲತಃ ಪಿರಿಯಾಪಟ್ಟಣದ ವೇಣು, ಆರು ತಿಂಗಳಿನಿಂದ ಸುಂಕದಕಟ್ಟೆಯಲ್ಲಿ ನೆಲೆಸಿದ್ದ. ಕೂಲಿ ಕೆಲಸಕ್ಕೆಂದು ಆ ದಿನ ಪಣಂಬೂರಿಗೆ ಹೋಗಿದ್ದ ಆತ, ಫಿರ್ಯಾದಿ ಕುಟುಂಬವು ಒಡವೆಗಳನ್ನು ಕಾರಿನಲ್ಲಿಟ್ಟು ಹೋಗಿದ್ದನ್ನು ಗಮನಿಸಿದ್ದ. ನಂತರ ಗಾಜು ಒಡೆದು ಆಭರಣ ಎಗರಿಸಿದ್ದ. ಸಂಜೆ 5 ಗಂಟೆಗೆ ಆ ಕುಟುಂಬ ಕಾರಿನ ಬಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಪಾರ್ಕಿಂಗ್ ಸ್ಥಳದ ದೃಶ್ಯಗಳು ದಾಖಲಾಗುವಂತೆ ಸಿ.ಸಿ ಟಿ.ವಿ ಕ್ಯಾಮೆರಾ ಹಾಕಲಾಗಿತ್ತಾದರೂ, ಅದಕ್ಕೆ ಅಡ್ಡಲಾಗಿ ಯಾರೋ ಹೋರ್ಡಿಂಗ್ ಹಾಕಿದ್ದರಿಂದ ಸ್ಥಳೀಯ ಪೊಲೀಸರಿಗೆ ಸುಳಿವು ಸಿಕ್ಕಿರಲಿಲ್ಲ.

ಕದ್ದ ಆಭರಣಗಳನ್ನು ನಗರಕ್ಕೆ ತಂದ ಆರೋಪಿ, ಸುಂಕದಕಟ್ಟೆಯಲ್ಲಿರುವ ಗೆಳತಿ ಮೂಲಕ ಅರ್ಧ ಕೆ.ಜಿಯಷ್ಟು ಒಡವೆಗಳನ್ನು ಮುತ್ತೂಟ್, ಮಣಪ್ಪುರಂ, ಕಾರ್ವಿ ಹಾಗೂ ಪಾಪ್ಯುಲರ್ ಫೈನಾನ್ಸ್‌ ಕಂಪೆನಿಗಳಲ್ಲಿ ಅಡವಿರಿಸಿದ್ದ. ನೆಕ್ಲೆಸ್‌ ಹಾಗೂ ಎರಡು ಬಳೆಗಳನ್ನು ಗೆಳತಿ ಧರಿಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದರು. ‘ಮೊದಲು ಸುಂಕದಕಟ್ಟೆಯ ಗಾರ್ಮೆಂಟ್ಸ್‌ನಲ್ಲಿ ಉದ್ಯೋಗಿಯಾಗಿದ್ದ ವೇಣು, ನಂತರ ಬಾರ್‌ನಲ್ಲಿ ಕೆಲಸಕ್ಕೆ ಸೇರಿದ್ದ. ಇತ್ತೀಚೆಗೆ ಅದನ್ನೂ ತೊರೆದು, ಗಾರೆ ಕೆಲಸ ಮಾಡುತ್ತಿದ್ದ.

ಈ ನಡುವೆ ವೇಣು ಮತ್ತು ಆತನ ಗೆಳತಿಯ ಜೀವನ ಶೈಲಿಯಲ್ಲಾದ ಬದಲಾವಣೆ ಸ್ಥಳೀಯರಲ್ಲಿ ಅನುಮಾನ ಮೂಡಿಸಿತ್ತು. ಸರಗಳ್ಳರ ಪತ್ತೆಗೆ ಸಿಸಿಬಿ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ತಿಳಿದಿದ್ದ ವ್ಯಕ್ತಿಯೊಬ್ಬರು, ಈ ಬಗ್ಗೆ ಸುಳಿವು ಕೊಟ್ಟರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂತು’ ಎಂದು ಸಿಸಿಬಿ ಡಿಸಿಪಿ ರಮೇಶ್ ತಿಳಿಸಿದರು.

‘ಅವು ಕದ್ದ ಒಡವೆಗಳು ಎಂದು ಗೊತ್ತಿರಲಿಲ್ಲ. ತುರ್ತು ಹಣದ ಅಗತ್ಯವಿದೆ ಎಂದು ಹೇಳಿದ ಕಾರಣಕ್ಕೆ ಅಡವಿರಿಸಲು ನೆರವಾದೆ’ ಎಂದು ಆರೋಪಿಯ ಗೆಳತಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಲಾಗಿದೆ. ಆರೋಪಿಯನ್ನು ಜುಲೈ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಖಲೆಗಳಿಲ್ಲದ ಒಡವೆ ಅಡವಿರಿಸಿಕೊಂಡಿದ್ದ ಫೈನಾನ್ಸ್‌ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಬಗ್ಗೆ ಕಮಿಷನರ್ ಜತೆ ಚರ್ಚಿಸಲಾಗುವುದು. -ತನಿಖಾಧಿಕಾರಿ

Write A Comment