ಕರ್ನಾಟಕ

ಶಿವನ ಸಮುದ್ರದ ಬಳಿ ಬೃಹತ್ ಸೌರ ವಿದ್ಯುತ್ ಘಟಕ

Pinterest LinkedIn Tumblr

1234-sowra-vidyuthಬೆಂಗಳೂರು, ಜು.10- ಕೇಂದ್ರ ಸಾರ್ವಜನಿಕ ಕ್ಷೇತ್ರದ ಮಹಾರತ್ನ ಸಂಸ್ಥೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್)ನ ವಿದ್ಯುನ್ಮಾನ ವಿಭಾಗವು ಶಿವನಸಮುದ್ರಂ ಬಳಿಯ ಬೆಳಕವಾಡಿಯಲ್ಲಿ 10 ಮೆಗಾವ್ಯಾಟ್ ಸಾಮರ್ಥ್ಯದ ಮುಖ್ಯ ವಿದ್ಯುತ್ ಜಾಲದೊಂದಿಗೆ ಸಂಪರ್ಕಿಸಲಾಗಿರುವ ಸೌರ ವಿದ್ಯುತ್ ಸ್ಥಾವರವನ್ನು ಯಶಸ್ವಿ ಯಾಗಿ ಸ್ಥಾಪಿಸಿದೆ.

ಇದು ಕರ್ನಾಟಕ ದಲ್ಲಿ ಕೆಪಿಸಿಎಲ್‌ಗಾಗಿ ಸ್ಥಾಪಿಸಿರುವ ಅತ್ಯಂತ ಹೆಚ್ಚು ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವಾಗಿದೆ. ಶಿವನಸಮುದ್ರಂ ಬಳಿ ಬಿಎಚ್‌ಇಎಲ್, ಕೆಪಿಸಿಎಲ್‌ಗಾಗಿ ಸ್ಥಾಪಿಸಿರುವ ಎರಡನೆ ಸೌರ ವಿದ್ಯುತ್ ಸ್ಥಾವರ ಇದಾಗಿದೆ. ಈ ಮುನ್ನ ಸಂಸ್ಥೆಯು 5ಮೆ.ವ್ಯಾ. ಸಾಮರ್ಥ್ಯದ ಸ್ಥಾವರ ಸ್ಥಾಪಿಸಿ ಯಶಸ್ಸು ಸಾಧಿಸಿತ್ತು. ಬಿಎಚ್‌ಇಎಲ್ ರಾಯಚೂರು ಬಳಿ ಕೆಪಿಸಿಎಲ್‌ಗಾಗಿ 3ಮೆ.ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನೂ ಸ್ಥಾಪಿಸಿತ್ತು. ಕೆಪಿಸಿಎಲ್ ಜತೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಪ್ರಕಾರ, ಬಿಎಚ್‌ಇಎಲ್ 10 ಮೆ.ವ್ಯಾ.ಸೌರ ವಿದ್ಯುತ್ ಸ್ಥಾವರದ ವಿನ್ಯಾಸ, ತಯಾರಿಕೆ, ಸರಬರಾಜು, ಪರೀಕ್ಷೆ, ಸ್ಥಾಪನೆ ಮತ್ತು ಚಾಲನಾ ಕಾರ್ಯಗಳನ್ನು ನಿರ್ವಹಿಸಲಿದೆ.

ಸೌರ ವಿದ್ಯುತ್ ಸ್ಥಾವರವನ್ನು ವಿಶ್ವಾದ್ಯಂತ ಬಳಸಿ ಯಶಸ್ಸು ಸಾಧಿಸಲಾಗಿರುವ ಕ್ರಿಸ್ಟಲಿನ್ ಸಿಲಿಕಾನ್ ಫೋಟೋವೋಲ್ಟಾಯಿಕ್ ತಂತ್ರಜ್ಞಾನ ಆಧರಿಸಿ ಸ್ಥಾಪಿಸಲಾಗುತ್ತಿದೆ. ಬಿಎಚ್‌ಇಎಲ್ ಈ ಸೌರ ವಿದ್ಯುತ್ ಸ್ಥಾವರದ ಚಾಲನೆ ಮತ್ತು ಸಂರಕ್ಷಣೆಯನ್ನು ಮೂರು ವರ್ಷಗಳ ಅವಧಿಗೆ ನಿರ್ವಹಿಸುವುದು. ಈವರೆಗೆ ಬಿಎಚ್‌ಇಎಲ್ ರಾಷ್ಟ್ರದ ವಿವಿಧೆಡೆ ಒಟ್ಟು 70 ಮೆ.ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಸೌರ ವಿದ್ಯುತ್ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಸುದೀರ್ಘ ಅನುಭವ ಹೊಂದಿರುವ ಬಿಎಚ್‌ಇಎಲ್, ಪ್ರಸಕ್ತ ಮುಖ್ಯ ವಿದ್ಯುತ್ ಜಾಲದೊಂದಿಗೆ ಸಂಪರ್ಕಿಸಲಾಗುವ ಹಲವಾರು ಬೃಹತ್ ಸೌರ ವಿದ್ಯುತ್ ಯೋಜನೆಗಳನ್ನು ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸುತ್ತಿದೆ. ಈ ಪೈಕಿ ಎನ್‌ಟಿಪಿಸಿಗಾಗಿ ಆಂಧ್ರ ಪ್ರದೇಶದಲ್ಲಿ 50 ಮೆ.ವ್ಯಾ. ಸ್ಥಾವರ, ಒರಿಸ್ಸಾದಲ್ಲಿ ಜೆಡ್ಕಾಲ್ ಸಂಸ್ಥೆಗಾಗಿ 20 ಮೆ.ವ್ಯಾ. ಸ್ಥಾವರ, ತಮಿಳುನಾಡಿನಲ್ಲಿ ನೈವೇಲಿ ಲಿಗ್ನೈಟ್ ನಿಗಮಕ್ಕಾಗಿ 10 ಮೆ.ವ್ಯಾ. ಸ್ಥಾವರ ಪ್ರಮುಖವಾಗಿವೆ.

Write A Comment