ಕರ್ನಾಟಕ

ಪ್ರತಿಯೊಬ್ಬರಿಗೂ ದಿನಕ್ಕೆ 85 ಲೀಟರ್ ಕುಡಿವ ನೀರು

Pinterest LinkedIn Tumblr

hkಬೆಳಗಾವಿ, ಜು.6- ಗ್ರಾಮಾಂತರ ಪ್ರದೇಶದಲ್ಲಿ ಪ್ರತಿಯೊಬ್ಬರಿಗೂ ದಿನಕ್ಕೆ 55 ಲೀಟರ್ ನೀರು ಕೊಡುವ ನೀತಿ ಜಾರಿಯಲ್ಲಿದೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದಿನಕ್ಕೆ 85 ಲೀಟರ್ ನೀರು ನೀಡುವ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ವಿಧಾನಸಭೆಯಲ್ಲಿ ನಡೆದ ಬೇಡಿಕೆಗಳ ಮೇಲಿನ ಸುದೀರ್ಘ ಚರ್ಚೆಯಲ್ಲಿ ಮಾತನಾಡಿದ ಅವರು, ಪಟ್ಟಣದ ಜನರಿಗೆ ದಿನಕ್ಕೆ 100 ಲೀ., ದೆಹಲಿಯಲ್ಲಿ 180 ಲೀಟರ್ ನೀರು ಕೊಡಲಾಗುತ್ತಿದೆ.  ಶೌಚಾಲಯವನ್ನು ಪ್ಲಶ್ ಮಾಡುವ ನೀರನ್ನು ಲೆಕ್ಕ ಹಾಕಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ದನ, ಎಮ್ಮೆ, ಕುರಿ, ನಾಯಿ, ಬೆಕ್ಕಿನಂತಹ ಪ್ರಾಣಿಗಳನ್ನು ಸೇರಿಸಿಕೊಂಡು ನಗರದವರಿಗಿಂತಲೂ ನೀರಿನ ಬೇಡಿಕೆ ಹೆಚ್ಚಿದೆ.

ಹಾಗಾಗಿ ನಮ್ಮ ಸರ್ಕಾರ 55 ಲೀಟರ್ ಪ್ರಮಾಣವನ್ನು 85 ಲೀಟರ್‌ಗೆ ಹೆಚ್ಚಿಸಲಾಗಿದೆ. ದೇಶದಲ್ಲೇ ನಮ್ಮ ರಾಜ್ಯ ಇಂತಹ ಕ್ರಾಂತಿಕಾರಕ ನಿರ್ಣಯ ಕೈಗೊಂಡಿದೆ ಎಂದು ಹೇಳಿದರು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರು, ಸಚಿವರು ಸದನಕ್ಕೆ ತಪ್ಪು ಮಾಹಿತಿ ಕೊಡಬಾರದು. 85 ಲೀಟರ್ ಎಲ್ಲಿ ಕೊಡುತ್ತಿದ್ದೀರಿ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ದಿನಕ್ಕೆ ವ್ಯಕ್ತಿಗೆ 40 ಲೀಟರ್ ಕೊಟ್ಟರೂ ಸಾಷ್ಟಾಂಗ ನಮಸ್ಕಾರ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಇದರಿಂದ ತಬ್ಬಿಬ್ಬಾದ ಸಚಿವ ಪಾಟೀಲ್, ಸರ್ಕಾರ ನೀತಿಯಲ್ಲಿ ಬದಲಾವಣೆ ಮಾಡಿರುವ ಬಗ್ಗೆ ಹೇಳಿದ್ದೇನೆ. ನಮ್ಮ ಸರ್ಕಾರದ ನಿರ್ಧಾರದ ನಂತರ ಕೇಂದ್ರ ಸರ್ಕಾರವೂ ಗ್ರಾಮೀಣ ಪ್ರದೇಶದ ಜನರಿಗೆ ನೀಡುವ ನೀರಿನ ಪ್ರಮಾಣವನ್ನು 55ರಿಂದ 70 ಲೀಟರ್‌ಗೆ ಹೆಚ್ಚಿಸಿದೆ ಎಂದು ಹೇಳಿದರು. ಗ್ರಾಮೀಣ ಭಾಗದಲ್ಲಿ ಫ್ಲೋರೈಡ್ ಮತ್ತಿತರ ಲವಣಾಂಶ ರಹಿತ ಶುದ್ಧ ಕುಡಿಯುವ ನೀರು ಪೂರೈಕೆಗೆ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

Write A Comment