ಕರ್ನಾಟಕ

ಪದವಿ ವಿದ್ಯಾರ್ಥಿನಿ ರತ್ನಮ್ಮ ಅತ್ಯಾಚಾರ-ಕೊಲೆ ಪ್ರಕರಣ: ವಿಕೃತ ಕಾಮಿ ರಂಗರಾಜು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರು

Pinterest LinkedIn Tumblr

rape-murder

ತುಮಕೂರು, ಜು.3: ಪೊಲೀಸರಿಗೆ ತೀವ್ರ ಸವಾಲಾಗಿದ್ದ ಹಾಗೂ ಗಂಭೀರವಾಗಿ ಪರಿಗಣಿಸಲಾಗಿದ್ದ ಪ್ರತಿಭಾನ್ವಿತ ಪದವಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣವನ್ನು ಭೇದಿಸಿರುವ ವಿಶೇಷ ತಂಡ, ವಿಕೃತ ಕಾಮಿ ಕಾಮುಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ವಲಯದ ಐಜಿಪಿ ಅರುಣ್ ಚಕ್ರವರ್ತಿ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಪ್ರಕರಣ ಭೇದಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಲಕ್ಷ್ಮಣ್, ಡಿವೈಎಸ್‌ಪಿ ವಿಜಯ್‌ಕುಮಾರ್ ಮತ್ತು ಸಿಬ್ಬಂದಿ ಅವರನ್ನೊಳಗೊಂಡ ವಿಶೇಷ ತಂಡದ ಜತೆಗೆ ಒಟ್ಟು ಏಳು ತಂಡ ರಚನೆ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಗುಳಿಗೇನಹಳ್ಳಿಯ ರಂಗರಾಜು ಅಲಿಯಾಸ್ ರಂಗನಾಥ ಎಂಬಾತನೇ ಬಂಧಿತ ವಿಕೃತ ಕಾಮಿ ಆರೋಪಿ. ಈ ಪ್ರಕರಣ ಭೇದಿಸಿ ಆರೋಪಿ ಕಾಮುಕನನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಏಳು ಪೊಲೀಸ್ ತಂಡಕ್ಕೆ 2.50 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

ಘಟನೆ ವಿವರ: ಜವನಹಳ್ಳಿಯ ನಿವಾಸಿಯಾದ ರತ್ನಮ್ಮ (20) ಆಗತಾನೆ ಪದವಿ ವ್ಯಾಸಂಗ ಮುಗಿಸಿ ಶೇ.80ರಷ್ಟು ಅಂಕ ಪಡೆದಿದ್ದ ಪ್ರತಿಭಾನ್ವಿತೆಯಾದ ಈಕೆ, ಮತ್ತಷ್ಟು ಅಂಕ ಬರುವ ನಿರೀಕ್ಷೆಯಲ್ಲಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಕಂಪ್ಯೂಟರ್ ತರಬೇತಿಗೆ ಹೋಗುತ್ತಿದ್ದರು. ಜೂ.25ರಂದು ಎಂದಿನಂತೆ ಬಡವನಹಳ್ಳಿಯ ಗೋಕುಲ ಕಂಪ್ಯೂಟರ್ ಕ್ಲಾಸ್‌ಗೆ ತೆರಳಿ ತರಬೇತಿ ಮುಗಿಸಿಕೊಂಡು ಸಂಜೆ 3.30ಕ್ಕೆ ಮಾರುತಿ ಕೃಪಾ ಬಸ್‌ನಲ್ಲಿ ಬಂದು ಗುಳಿಗೇನಹಳ್ಳಿ ಗೇಟ್‌ನಲ್ಲಿ ಇಳಿದು ಜವನಹಳ್ಳಿಗೆ ನಡೆದು ಹೋಗುತ್ತಿದ್ದರು.

ಈ ನಡುವೆ ಗುಳಿಗೇನಹಳ್ಳಿಯ ನಿವಾಸಿಯಾದ ಕಾಮುಕ ರಂಗರಾಜು ಅಂದು ಬೆಳಗ್ಗೆ ಜಮೀನಿಗೆ ಹಸುವನ್ನು ಕರೆದೊಯ್ದು ಅಲ್ಲೇ ಕಟ್ಟಿ ಹಾಕಿ ಸಂಜೆ ಈಕೆ ಬರುವ ದಾರಿಯನ್ನೇ ಕಾದು ಮಾಗೋಡುಹಳ್ಳದ ಬ್ರಿಡ್ಜ್ ಬಳಿ ಆಕೆಯನ್ನು ಬಲವಂತವಾಗಿ ಸುಮಾರು 10 ಮೀಟರ್‌ನಷ್ಟು ಎಳೆದೊಯ್ದು ಕಿರುಚದಂತೆ ಆಕೆ ಧರಿಸಿದ್ದ ವೇಲ್‌ಅನ್ನು ಬಾಯಿಗೆ ತುರುಕಿ ಕುತ್ತಿಗೆ ಹಿಸುಕಿ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದು ಆಕೆಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರವೆಸಗಿ ಕೊಲೆ ಮಾಡಿ ಮನೆಗೆ ಹಿಂದಿರುಗಿದ್ದನು.

ಮನೆಗೆ ತೆರಳಿದ ಮಗನನ್ನು ತಂದೆ ವಿಚಾರಿಸಲಾಗಿ ಆತ ನಡೆದ ಘಟನೆಯನ್ನು ತಿಳಿಸಿದ್ದಾನೆ. ಇದರಿಂದ ಕೋಪಗೊಂಡ ಆತನ ತಂದೆ ಹೊಡೆದಿದ್ದಲ್ಲದೆ, ಈ ವಿಷಯವನ್ನು ಹೊರಗಡೆ ಬಾಯಿ ಬಿಡದಂತೆ ಹೇಳಿದ್ದರು ಎನ್ನಲಾಗಿದೆ.

ಇತ್ತ ಮಗಳು ಐದು ಗಂಟೆಯಾದರೂ ಮನೆಗೆ ಬಾರದಿರುವುದರಿಂದ ಗಾಬರಿಗೊಂಡ ಪೋಷಕರು ಗುಳಿಗೇನಹಳ್ಳಿ ಗೇಟ್ ಬಳಿ ಬಂದು ವಿಚಾರಿಸಿದಾಗ ಅಲ್ಲಿದ್ದವರು ನಿಮ್ಮ ಮಗಳು 4 ಗಂಟೆಯಲ್ಲಿ ಹೋಗುತ್ತಿದ್ದುದನ್ನು ನೋಡಿದ್ದಾಗಿ ತಿಳಿಸಿದ್ದಾರೆ.

ಇದರಿಂದ ಮತ್ತಷ್ಟು ಗಾಬರಿಯಾದ ಪೋಷಕರು ನೆರೆಹೊರೆಯವರೊಂದಿಗೆ ಹುಡುಕಾಡಿದಾಗ ಹಳ್ಳದ ಬಳಿ ವಿವಸ್ತ್ರಗೊಂಡು ಮೃತಪಟ್ಟಿದ್ದ ರತ್ನಮ್ಮನ ಶವ ಕಂಡುಬಂದಿದೆ. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ಪೋಷಕರಿಗೆ ಹಸ್ತಾಂತರಿಸಿ ಆರೋಪಿ ಪತ್ತೆಗೆ ತನಿಖೆ ಕೈಗೊಂಡಿದ್ದರು.

ಈ ಪ್ರಕರಣವನ್ನು ಸವಾಲಾಗಿ ಹಾಗೂ ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರು ಕೂಡ ಆರೋಪಿ ಪತ್ತೆಗೆ ವಿಳಂಬ ಮಾಡದೆ ಕಾರ್ಯಾಚರಣೆ ಚುರುಕುಗೊಳಿಸಬೇಕೆಂದು ಖಡಕ್ ಆದೇಶ ನೀಡಿದ್ದರು. ಆರೋಪಿಗಳ ಪತ್ತೆಗಾಗಿ ಶಿರಾ ಠಾಣೆ ಇನ್ಸ್‌ಪೆಕ್ಟರ್ ರಾಮಕೃಷ್ಣ, ಗ್ರಾಮಾಂತರ ವೃತ್ತ ನಿರೀಕ್ಷಕ ರಾಮಕೃಷ್ಣಯ್ಯ,ತುಮಕೂರು ಗ್ರಾಮಾಂತರ ಡಿವೈಎಸ್‌ಪಿ ವಿಜಯ್‌ಕುಮಾರ್, ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ, ಕುಣಿಗಲ್ ವೃತ್ತ ನಿರೀಕ್ಷಕ ಧರ್ಮೇಂದ್ರ, ತಿಲಕ್‌ಪಾರ್ಕ್ ವೃತ್ತ ನಿರೀಕ್ಷಕ ಬಾಳೇಗೌಡ, ಸಬ್‌ಇನ್ಸ್‌ಪೆಕ್ಟರ್‌ಗಳಾದ ರಾಧಾಕೃಷ್ಣ, ಅಂಜನ್‌ಕುಮಾರ್, ಗುರುಪ್ರಸಾದ್, ಚಂದ್ರಶೇಖರ್, ಕೊಟ್ರೇಶ್, ನಾಗರಾಜು ಅವರನ್ನೊಳಗೊಂಡ 30 ನುರಿತ ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಅಲ್ಲದೆ, ಕೇಂದ್ರ ವಲಯ ಐಜಿಪಿ ಅರುಣ್ ಚಕ್ರವರ್ತಿ ಸಹ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಆರೋಪಿ ಪತ್ತೆಗೆ ಏಳು ತಂಡ ರಚಿಸಿ ತೀವ್ರ ಕಾರ್ಯಾಚರಣೆ ಕೈಗೊಂಡಾಗ ಅತ್ಯಾಚಾರವೆಸಗಿದ ಕಾಮುಕ ಗುಳಿಗೇನಹಳ್ಳಿಯಲ್ಲೇ ಇರುವನೆಂಬ ಮಾಹಿತಿ ಸಂಗ್ರಹಿಸಿ ಆತನನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಪ್ರಕರಣದ ತನಿಖೆಯನ್ನು ಸವಾಲಾಗಿ ಸ್ವೀಕರಿಸಿದ್ದ ತಂಡಗಳ ನುರಿತ ಪೊಲೀಸ್ ಅಧಿಕಾರಿಗಳು ಹೊಲಕ್ಕೆ ಹೋಗುವವರು, ಜಮೀನಿನಲ್ಲಿ ಕೆಲಸ ಮಾಡುವವರು, ಜಮೀನೊಂದರಲ್ಲಿ ಬೋರ್‌ವೆಲ್ ತೆಗೆಯುತ್ತಿದ್ದ 9 ಜನ ಕೆಲಸಗಾರರನ್ನು ,ಸುತ್ತಮುತ್ತಲ ಗ್ರಾಮದವರು ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಲಾಯಿತು. ಇವರು ನೀಡಿದ ಹೇಳಿಕೆ ಮೇಲೆ ಅಂದು ಬರ್ಮೊಡಾ ನಿಕ್ಕರ್ ಧರಿಸಿ ಒಬ್ಬ ಹುಡುಗ ಸೇತುವೆ ಹತ್ತಿರ ಕುಳಿತುಕೊಂಡಿದ್ದ ಮಾಹಿತಿ ನೀಡಿದ್ದನ್ನು ಆಧರಿಸಿ ವಿಶೇಷ ತಂಡದ ಪೊಲೀಸರು ಗುಳಿಗೇನಹಳ್ಳಿ ಮತ್ತು ಜವನಹಳ್ಳಿ ಗ್ರಾಮದ ಸುತ್ತಮುತ್ತಲ ಗ್ರಾಮಗಳಲ್ಲಿ ಅಂತಹ ಚಹರೆಯುಳ್ಳ ಹುಡುಗನಿಗಾಗಿ ಮಫ್ತಿಯಲ್ಲಿ ಹುಡುಕಾಟ ನಡೆಸಿ ಆರೋಪಿಯನ್ನು ಬಲೆಗೆ ಬೀಳಿಸಿಕೊಂಡಿದೆ. ಆರೋಪಿ ಕಳೆದ ಒಂದೂವರೆ ವರ್ಷದ ಹಿಂದೆ ತೋಟದ ಜಮೀನಿನಲ್ಲಿ 9 ವರ್ಷದ ಶಾಲಾ ವಿದ್ಯಾರ್ಥಿನಿಯನ್ನು ಎಳೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿ ಈ ವಿಷಯ ತಿಳಿದ ವಿದ್ಯಾರ್ಥಿನಿ ತಾಯಿಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ 30 ಸಾವಿರ ರೂ. ನೀಡಿ ಅವರ ಬಾಯಿ ಮುಚ್ಚಿಸಿದ್ದರು. ಈತ ಎರಡು ಬಾರಿ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವುದು ತೀವ್ರ ವಿಚಾರಣೆಯಿಂದ ತಿಳಿದುಬಂದಿದೆ.

Write A Comment