ಕರ್ನಾಟಕ

ಬಿಬಿಎಂಪಿ ಚುನಾವಣೆಗೆ ಇನ್ನೂ 2 ತಿಂಗಳ ಕಾಲಾವಕಾಶ ನೀಡಿದ ಸುಪ್ರೀಂಕೋರ್ಟ್

Pinterest LinkedIn Tumblr

BBMP-Election-15

ನವದೆಹಲಿ, ಜು.3: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯನ್ನು ಮುಂದೂಡಿರುವ ಸುಪ್ರೀಂಕೋರ್ಟ್ ಚುನಾವಣೆ ನಡೆಸಲು 2 ತಿಂಗಳ ಕಾಲಾವಕಾಶ ನೀಡಿದೆ.

ಪಾಲಿಕೆ ಚುನಾವಣಾ ದಿನಾಂಕ ನಿಗದಿಪಡಿಸಿದ್ದ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಅಧಿಸೂಚನೆಯನ್ನು ರದ್ದುಪಡಿಸುವಂತೆ ರಾಜ್ಯಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಚುನಾವಣೆಯನ್ನು ಮುಂದೂಡಿ ಮಹತ್ವದ ತೀರ್ಪು ನೀಡಿದೆ.

ಚುನಾವಣೆ ನಡೆಸಲು ಆಯೋಗಕ್ಕೆ 2 ತಿಂಗಳು (8ವಾರ) ಕಾಲಾವಕಾಶ ನೀಡಿದೆ. ವಾರ್ಡ್‌ಗಳ ಪುನರ್ ವಿಂಗಡಣೆ ಮಾಡದೇ ಈಗ ಪ್ರಕಟವಾಗಿರುವ ವಾರ್ಡ್ ಮೀಸಲಾತಿ ಅನ್ವಯ ಚುನಾವಣೆ ನಡೆಸುವಂತೆ ಸೂಚಿಸಿದೆ. ಹೊಸದಾಗಿ ಚುನಾವಣೆ ಸಂಬಂಧ ಹೊಸ ಅಧಿಸೂಚನೆಯನ್ನು ಪ್ರಕಟಿಸಿ ಆಯೋಗದ ಆದೇಶದಂತೆ ಚುನಾವಣೆ ನಡೆಯಲಿದೆ ಎಂದು ಸುಪ್ರೀಂ ಹೇಳಿದೆ. ಮುಖ್ಯ ನ್ಯಾ. ಎಚ್.ಎಲ್. ದತ್ತು ಅವರ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಅಕ್ಟೋಬರ್ 5ರೊಳಗೆ ಚುನಾವಣಾ ಪ್ರಕ್ರಿಯೆ ಮುಗಿಸುವಂತೆ ಚುನಾವಣಾ ಆಯೋಗಕ್ಕೆ ಪೀಠ ನಿರ್ದೇಶನ ನೀಡಿದೆ. ಆಯೋಗ ಈ ಮೊದಲು ಪ್ರಕಟಿಸಿದ್ದ ಅಧಿಸೂಚನೆ ಅನ್ವಯ ಈ ತಿಂಗಳ 28ಕ್ಕೆ ಪಾಲಿಕೆ ಚುನಾವಣೆ ನಡೆಯಬೇಕಿತ್ತು. ಆಗಸ್ಟ್ 3ರೊಳಗೆ ಚುನಾವಣಾ ಪ್ರಕ್ರಿಯೆ ಮುಗಿಸಬೇಕಿತ್ತು.

ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ರಾಜ್ಯಸರ್ಕಾರ ಮೂರು ತಿಂಗಳ ಕಾಲ ಚುನಾವಣೆ ಮುಂದೂಡುವಂತೆ ಮನವಿ ಮಾಡಿತ್ತು. ಆದರೆ ಈ ಮನವಿ ತಿರಸ್ಕರಿಸಿರುವ ಕೋರ್ಟ್ ಎರಡು ತಿಂಗಳ ಕಾಲಾವಕಾಶ ನೀಡಿದೆ.

Write A Comment