ಕರ್ನಾಟಕ

ಒಪ್ಪಂದದಂತೆ ಮೇಲ್ಮನೆ ಉಪ ಸಭಾಪತಿ ಸ್ಥಾನ ಬಿಟ್ಟುಕೊಡಿ : ಮರಿತಿಬ್ಬೇಗೌಡ ಆಗ್ರಹ

Pinterest LinkedIn Tumblr

Maritibbegoudaಬೆಳಗಾವಿ, ಜು.2- ಒಪ್ಪಂದದಂತೆ ಮೇಲ್ಮನೆ ಉಪ ಸಭಾಪತಿ ಸ್ಥಾನವನ್ನು ಬಿಟ್ಟುಕೊಡಬೇಕೆಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮುಖಂಡರಲ್ಲಿ ಆಗ್ರಹಿಸಿದ್ದಾರೆ. ಕಳೆದ ಜುಲೈ 2014ರಲ್ಲಿ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮರಿತಿಬ್ಬೇಗೌಡ ಹಾಗೂ ಹಾಲಿ ಉಪಸಭಾಪತಿಯಾಗಿರುವ ಪುಟ್ಟಣ್ಣ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಮರಿತಿಬ್ಬೇಗೌಡ ಅವರ ಪರ ಒಲವು ವ್ಯಕ್ತಪಡಿಸಿದ್ದರು. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು  ಪುಟ್ಟಣ್ಣ ಪರವಾಗಿ ನಿಂತಿದ್ದರು. ತೀವ್ರ ಪೈಪೋಟಿ ಏರ್ಪಟ್ಟ ಹಿನ್ನೆಲೆಯಲ್ಲಿ ತಲಾ ಒಂದೂವರೆ ವರ್ಷ ಅಧಿಕಾರ ಹಂಚಿಕೆ ಒಪ್ಪಂದವೇರ್ಪಟ್ಟು ಮೊದಲ ಬಾರಿ ಪುಟ್ಟಣ್ಣ ಉಪಸಭಾಪತಿಯಾಗುವುದು, ಎರಡನೆ ಬಾರಿ ಮರಿತಿಬ್ಬೇಗೌಡರು ಉಪಸಭಾಪತಿಯಾಗುವುದು ಎಂದು ತೀರ್ಮಾನಿಸಲಾಗಿತ್ತು.

ಈ ತೀರ್ಮಾನದಂತೆ ಪುಟ್ಟಣ್ಣ ಅವರಿಗೆ ನೀಡಿದ ಅವಧಿ ಮುಗಿಯುತ್ತ ಬಂದಿದ್ದು, ಉಪಸಭಾಪತಿ ಸ್ಥಾನಕ್ಕೆ ತಮ್ಮನ್ನು ನೇಮಿಸಬೇಕೆಂದು ಮರಿತಿಬ್ಬೇಗೌಡ ಪಕ್ಷದ ಮುಖಂಡರಲ್ಲಿ ತಮ್ಮ ಹಕ್ಕು ಮಂಡಿಸಿರುವುದು ತಿಳಿದುಬಂದಿದೆ.  ಇದಕ್ಕೆ ಜೆಡಿಎಸ್ ಮುಖಂಡರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು, ಇನ್ನಿತರ ಮುಖಂಡರು ಮರಿತಿಬ್ಬೇಗೌಡ ಅವರನ್ನು ಉಪಸಭಾಪತಿಯನ್ನಾಗಿ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಪುಟ್ಟಣ್ಣ ಅವರು ತಮ್ಮ ಸ್ಥಾನವನ್ನು ತೆರವು ಮಾಡಬೇಕಾಗಿದೆ.  ಈ ಬಾರಿಯ ಅಧಿವೇಶನದಲ್ಲಿ ಉಪಸಭಾಪತಿ ಆಯ್ಕೆ ನಡೆಯದಿದ್ದರೆ ಬೆಂಗಳೂರಿನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಮರಿತಿಬ್ಬೇಗೌಡರನ್ನು ಉಪಸಭಾಪತಿಯನ್ನಾಗಿ ಮಾಡುವ ಸಾಧ್ಯತೆಯಿದೆ ಎಂಬುದು ಜೆಡಿಎಸ್ ಮೂಲಗಳಿಂದ ತಿಳಿದುಬಂದಿದೆ.

Write A Comment