ರಾಷ್ಟ್ರೀಯ

ಬಿಜೆಪಿಯ ‘ವಿಐಪಿ’ ಸಂಸ್ಕೃತಿ ಬಿಂಬಿಸುವ ಎರಡು ಪ್ರಕರಣಗಳು… ಮುಂದೆ ಓದಿ

Pinterest LinkedIn Tumblr

VIP-Culture-of-BJPನವದೆಹಲಿ/ಮುಂಬೈ, ಜು.2- ಭಾರತದಲ್ಲಿ ಅತ್ಯಂತ ಅನಿಷ್ಟ ಪದ್ಧತಿಯಾಗಿರುವ ‘ವಿಐಪಿ’ ಸಂಸ್ಕೃತಿಯ ಅಮಾನವೀಯ ಮತ್ತು ಅನಾಗರಿಕ ಮುಖಗಳ ಒಂದೆರಡು ಪ್ರಕರಣಗಳು ಈಗ ಎಲ್ಲರ ಗಮನ ಸೆಳೆದಿವೆ. ಈ ಪ್ರಕರಣಗಳ ಹೀರೋಗಳು ಒಬ್ಬರು ಕೇಂದ್ರ ಸಚಿವರು ಮತ್ತೊಬ್ಬರು ಮುಖ್ಯಮಂತ್ರಿ ಆಗಿರುವುದು ವಿಶೇಷ.

ಇಬ್ಬರೂ ಬಿಜೆಪಿಯ ಶಿಸ್ತಿನ ಸಿಪಾಯಿಗಳಾಗಿರುವುದು ಇನ್ನೂ ದೊಡ್ಡ ವಿಶೇಷ.

ಪ್ರಕರಣ ಒಂದು: ಈ ಘಟನೆ ನಡೆದದ್ದು ಜೂ.24ರಂದು ಸ್ಥಳ ಜಮ್ಮು-ಕಾಶ್ಮೀರ. ಪಾತ್ರಧಾರಿ ಕೇಂದ್ರ ಗೃಹಖಾತೆ ಸಹಾಯಕ ಸಚಿವ ಕಿರಣ್ ರಿಜಿಜು. ಸಚಿವರು ಜಮ್ಮು-ಕಾಶ್ಮೀರ ಭೇಟಿಗೆ ತೆರಳಿದ್ದರು. ಅವರು ಹಿಂದಿರುಗಿ ಬರುವಾಗ, ಅವರಿಗಾಗಿ ಏರ್ ಇಂಡಿಯಾ ವಿಮಾನವು ನಿಲ್ದಾಣದಲ್ಲಿ ಒಂದು ಗಂಟೆಗೂ ಹೆಚಚು ಕಾಲ ಕಾಯಬೇಕಾಯಿತು. ಪ್ರಯಾಣಿಕರೆಲ್ಲ ಸುಸ್ತಾಗಿ ಹೋಗಿದ್ದರು. ಕೊನೆಗೂ ಒಂದು ಗಂಟೆಗೂ ಹೆಚ್ಚು ಸಮಯ ಕಾಯಿಸಿ ಸಚಿವರು ವಂದಿಮಾಗಧರೊಡನೆ ಆಗಮಿಸಿದರು.

ಸಚಿವರೇನೋ ತಡವಾಗಿಯಾದರೂ ಬಂದರು. ಆದರೆ, ವಿಮಾನಸದಲ್ಲಿ ಸ್ಥಳಾವಕಾಶವಿಲ್ಲ. ಏನು ಮಾಡಬೇಕು, ಸಚಿವರ ರಾಜ ಮರ್ಯಾದೆಗೆ ಧಕ್ಕೆ ಬರಬಾರದಲ್ಲವೆ..? ಅದಕ್ಕೆ ಸಿಬ್ಬಂದಿ ಏನು ಮಾಡಿದರು ಗೊತ್ತೆ..? ವಿಮಾನದಲ್ಲಿ ದೆಹಲಿಗೆ ಹೊರಟು ಕೂತಿದ್ದ ಮೂವರು ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಕೆಳಗಿಳಿಸಲ್ಪಟ್ಟವರಲ್ಲಿ ಒಂದು ಪುಟ್ಟ ಮಗು, ಒಬ್ಬ ಮಹಿಳೆ, ಮತ್ತೊಬ್ಬ ವ್ಯಕ್ತಿ ಸೇರಿದ್ದರು. ಇದೆಲ್ಲ ತಮ್ಮ ಕಣ್ಣೆದುರೇ ನಡೆದರೂ ಸಚಿವರು ಮಾತ್ರ ಏನೂ ಆಗಿಯೇ ಇಲ್ಲವೇನೋ ಎಂಬಂತೆ, ಕೆಳಗಿಳಿದಿದ್ದ ಮಗುವಿನ ಕಡೆಗೂ ನೋಡದೆ, ತಮ್ಮ ಇಬ್ಬರು ಸಹಾಯಕರೊಂದಿಗೆ ದೆಹಲಿಯತ್ತ ಹಾರಿಯೇ ಬಿಟ್ಟರು. ಕೆಳಗಿಳಿದಿದ್ದ ಮಗು ಮಹಿಳೆ, ಮತ್ತೊಬ್ಬ ವ್ಯಕ್ತಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆನಂತರ ಇದು ಬೆಳಕಿಗೆ ಬಂದಾಗ ಸಚಿವರು ಕೊಟ್ಟ ಸಮಜಾಯಿಷಿ ಇಲ್ಲಿ ಅಪ್ರಸ್ತುತ.

ಪ್ರಕರಣ ಎರಡು:
ಸ್ಥಳ ಮುಂಬೈ ವಿಮಾನ ನಿಲ್ದಾಣ. ಪಾತ್ರಧಾರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್. ಸಂದರ್ಭ, ಅವರ ಅಮೆರಿಕ ಪ್ರವಾಸದ ವೇಳೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ಸಿಬ್ಬಂದಿಯೊಂದಿಗೆ ಅಮೆರಿಕಕ್ಕೆ ಅಧಿಕೃತ ಪ್ರವಾಸ ಕೈಗೊಂಡಿದ್ದರು. ಜೂ.29, ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಮುಂಬೈ-ನ್ಯೂಯಾರ್ಕ್ ವಿಮಾನ ಹೊರಟಿದೆ. ಆದರೆ, ಮುಖ್ಯಮಂತ್ರಿ ಯಾರಿಗೋ ಕಾಯುತ್ತಿದ್ದಾರೆ. ಬರೋಬ್ಬರಿ ಒಂದು ತಾಸು ವಿಮಾನದ ಸಿಬ್ಬಂದಿ, ಪ್ರಯಾಣಿಕರು ಕಾದು ಕಾದು ಬಸವಳಿದು ಹೋಗಿದ್ದರು. ಅಂತೂ 57 ನಿಮಿಷಗಳು ಕಳೆದ ಮೇಲೆ ಮುಖ್ಯಮಂತ್ರಿ ಫಡ್ನವೀಸರ ಪ್ರಿನ್ಸಿಪಾಲ್ ಸೆಕ್ರೆಟರಿ ನಿಧಾನವಾಗಿ ಆಗಮಿಸಿ ವಿಮಾನ ಏರಿದರು. ಎಲ್ಲರೂ ನಿಟ್ಟುಸಿರು ಬಿಟ್ಟರು. ಯಾರೂ ಮಾತನಾಡುವಂತಿಲ್ಲ. ಏಕೆಂದರೆ, ವಿಳಂಬ ಮಾಡುತ್ತಿರುವುದು ಮುಖ್ಯಮಂತ್ರಿ. ಅದರಲ್ಲೂ ಬಿಜೆಪಿ ಕಟ್ಟಾಳು.

ನಡೆದದ್ದಿಷ್ಟೇ, ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿ ವಿಮಾನ ನಿಲ್ದಾಣಕ್ಕೆ ಹೊರಡುವಾಗ ತಮ್ಮ ವೀಸಾವನ್ನು ಮನೆಯಲ್ಲೇ ಮರೆತು ಬಂದಿದ್ದರಂತೆ. ಅದನ್ನು ಮತ್ತೆ ತರಬೇಕಲ್ಲ, ಮುಖ್ಯ ಕಾರ್ಯದರ್ಶಿ ಬಿಟ್ಟು ಮುಖ್ಯಮಂತ್ರಿಗಳು ಹೋಗುವಂತಿಲ್ಲ. ಹಾಗಾಗಿ ಅಮೆರಿಕಕ್ಕೆ ಹೊರಟ ವಿಮಾನ, ಪ್ರಯಾಣಿಕರು, ಸಿಬ್ಬಂದಿ ಕಾಯದೆ ವಿಧಿಯಿಲ್ಲ. \
ಇವು ನಮ್ಮ ಜನನಾಯಕರ, ನೀತಿ ಹೇಳುವವರ ನಡೆ-ನುಡಿಗಳ ಕೆಲ ಸ್ಯಾಂಪಲ್‌ಗಳು.

Write A Comment