ಕರ್ನಾಟಕ

ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರ ಸ್ಪರ್ಧೆ

Pinterest LinkedIn Tumblr

BBMP-Election-2015ಸುವರ್ಣ ವಿಧಾನಸೌಧ(ಬೆಳಗಾವಿ), ಜು.2-ಬೃಹತ್ ಬೆಂಗಳೂರು ಮಹಾನಗರ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ದುರಾಡಳಿತವನ್ನೇ ಪ್ರಮುಖ ಅಸ್ತ್ರವಾಗಿ ಬಳಸುವುದಲ್ಲದೆ, ಏಕಾಂಗಿಯಾಗಿ ಸ್ಪರ್ಧೆ ನಡೆಸಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಿದ್ಧತೆ ನಡೆಸಲಾಗಿದೆ. ಎಲ್ಲ 198 ವಾರ್ಡ್‌ಗಳಲ್ಲೂ ಸ್ಪರ್ಧೆ ಮಾಡಲು ನಿರ್ಧರಿಸಲಾಗಿದ್ದು, ರಾಷ್ಟ್ರೀಯ ಪಕ್ಷಗಳಿಗೆ ನೇರ ಪೈಪೋಟಿ ಒಡ್ಡಲು ಕಾರ್ಯತಂತ್ರ ರೂಪಿಸಲಾಗಿದೆ.

ಪ್ರತಿ ವಿಧಾನಸಭಾ ಕ್ಷೇತ್ರವಾರು ದೇವೇಗೌಡರ ನೇತೃತ್ವದಲ್ಲಿ ಪೂರ್ವ ಸಿದ್ಧತೆ ಸಭೆಗಳನ್ನು ಈಗಾಗಲೇ ಎರಡು ಸುತ್ತು ನಡೆಸಲಾಗಿದೆ. ಆ ಸಭೆಗಳಲ್ಲಿ ಬೆಂಗಳೂರಿನ ಶಾಸಕರಾದ ಜಮೀರ್ ಅಹಮದ್, ಅಖಂಡ ಶ್ರೀನಿವಾಸಮೂರ್ತಿ ಹಾಗೂ ಕೆ.ಗೋಪಾಲಯ್ಯ ಸೇರಿದಂತೆ ಎಲ್ಲ ಪದಾಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಪಾಲ್ಗೊಂಡು ಸಮಾಲೋಚನೆ ನಡೆಸಲಾಗಿದೆ. ಬಿಬಿಎಂಪಿ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೊಂದು ವಾರದಲ್ಲಿ ಪಟ್ಟಿ ಪ್ರಕಟಿಸಲಾಗುವುದು ಹೇಳಿದರು. ಕಿರು ಹೊತ್ತಿಗೆ: ಐದು ವರ್ಷಗಳ ಕಾಲ ಬಿಬಿಎಂಪಿ ಅಧಿಕಾರ ನಡೆಸಿದ ಬಿಜೆಪಿ ಹಾಗೂ ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ನ ದುರಾಡಳಿತಗಳ ಕಿರು ಹೊತ್ತಿಗೆ ತರಲಾಗುವುದು. ಎರಡೂ ಪಕ್ಷಗಳ ಆಡಳಿತಾವಧಿಯಲ್ಲಿ ಅಭಿವೃದ್ಧಿ ಹೆಸರಲ್ಲಿ ಆಗಿರುವ ದುರ್ಬಳಕೆ, ಬೆಂಗಳೂರಿನ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳು ಕಿರುಹೊತ್ತಿಗೆಯಲ್ಲಿ ಬಿಂಬಿತವಾಗಲಿವೆ.

ಇನ್ನೊಂದು ವಾರದಲ್ಲಿ ಈ ಕಿರು ಹೊತ್ತಿಗೆಗಳನ್ನು ಪ್ರಕಟಿಸಲಾಗುವುದು. ಅಲ್ಲದೆ, ನಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ ಕೈಗೊಂಡಿದ್ದ ಕಾರ್ಯಕ್ರಮಗಳು ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ಮುನ್ನೋಟವಿರುವ ವಿಷನ್ ಡಾಕ್ಯುಮೆಂಟ್ ಕೂಡ ಪ್ರಕಟಿಸಿ ಪ್ರತಿ ಮನೆಗೂ ತಲುಪಿಸಲು ಉದ್ದೇಶಿಸಲಾಗಿದೆ. ಬಿಬಿಎಂಪಿ ಚುನಾವಣೆ ರೋಡ್‌ಮ್ಯಾಪ್ ಸಿದ್ಧಪಡಿಸಿದ್ದು, ಅದರ ಪ್ರಕಾರ ಪ್ರಚಾರ ಕೈಗೊಳ್ಳಲಾಗುವುದು. ನಗರದ ನಾಗರಿಕರ ವಿಶ್ವಾಸ ಪಡೆದು ಚುನಾವಣೆ ಎದುರಿಸಿ ಹೆಚ್ಚಿನ ಸ್ಥಾನಗಳಲ್ಲಿ ಚುನಾಯಿತರಾಗಬೇಕು ಎಂಬ ಅಪೇಕ್ಷೆ ಇದೆ ಎಂದರು.

ಕುತಂತ್ರ ಬಿಟ್ಟಿಲ್ಲ:
ರಾಜ್ಯ ಹೈಕೋರ್ಟ್ ಸೇರಿದಂತೆ ನ್ಯಾಯಾಲಯಗಳಲ್ಲಿ ಸರ್ಕಾರಕ್ಕೆ ಮುಖಭಂಗವಾಗಿದ್ದರೂ ಚುನಾವಣೆ ಮುಂದೂಡುವ ಕುತಂತ್ರ ಮಾತ್ರ ಬಿಟ್ಟಿಲ್ಲ. ಕೊನೆ ಹಂತ್ರ ಅಸ್ತ್ರ ಬಳಕೆ ಮಾಡಿ ಬಿಬಿಎಂಪಿ ಚುನಾವಣೆ ಮುಂದೂಡಲು ಬೇರೆಯವರ ಮೂಲಕ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿದೆ. ಸುವರ್ಣ ಸೌಧದ ವಿಧಾನಸಭೆ ಕಾರಿಡಾರ್‌ನಲ್ಲಿ ಕಾಂಗ್ರೆಸ್ ಶಾಸಕರು ಚುನಾವಣೆ ನಡೆಯುವುದಿಲ್ಲ; ಮುಂದೂಡಲಾಗುತ್ತದೆ ಎಂದು ಆತ್ಮ ವಿಶ್ವಾಸದಿಂದ ಹೇಳಿಕೊಳ್ಳುತ್ತಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಬಿಬಿಎಂಪಿಯಲ್ಲಿ ಲೂಟಿಯಾಗಿದೆ ಎಂದು ಹೇಳಿಕೆ ನೀಡುತ್ತಾರೆ. ಸಾರ್ವಜನಿಕ ಹಣ ದೋಚಿದವರ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ. ಕಳೆದ ಎರಡು ವರ್ಷಗಳಿಂದ ಇವರದೇ ಸರ್ಕಾರ. ಇವರೇ ಜಿಲ್ಲಾ ಉಸ್ತುವಾರಿ ಸಚಿವರಲ್ಲವೇ? ಎಂದು ಪ್ರಶ್ನಿಸಿದರು. ಒಟ್ಟಾರೆ ಬಿಬಿಎಂಪಿ ಚುನಾವಣೆಯನ್ನು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೇ ಸ್ವತಂತ್ರವಾಗಿ ಎದುರಿಸಲಾಗುವುದು. ಬೆಂಗಳೂರಿನ ಜನರು ಕೈಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

Write A Comment