ಕರ್ನಾಟಕ

ಮುಂದುವರಿದ ರೈತರ ಆತ್ಮಹತ್ಯೆ ಸರಣಿ

Pinterest LinkedIn Tumblr

Former-suicide-continued

ರಾಮನಗರ/ಶಿರಾ, ಜೂ.30- ಇಂದು ಕೂಡ ರಾಜ್ಯದ ವಿವಿಧೆಡೆ ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.  ಸಾಲಬಾಧೆ ತಾಳಲಾರದೆ ರಾಮನಗರ, ಶಿರಾ ಮತ್ತು ಹಾವೇರಿಯಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಬನ್ನಿಕುಪ್ಪೆ ಗ್ರಾಮದ ಲೋಕೇಶ್ (30) ಎಂಬುವರು

ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಕೋಳಿಫಾರಂಗೆಂದು ಬ್ಯಾಂಕ್‌ನಿಂದ 9 ಲಕ್ಷ ರೂ. ಸಾಲ ಮಾಡಿದ್ದರು. ಚಿಕ್ಕಮ್ಮನ ಮನೆಗೆ ತೆರಳಿದ್ದ ಇವರು ಅಲ್ಲಿಯೇ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.  ಶಿರಾ ವರದಿ: ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರ ಕ್ಷೇತ್ರದಲ್ಲಿ ರೈತನೊಬ್ಬ ಸಾಲ ಹಿಂತಿರುಗಿಸುವಂತೆ ಬ್ಯಾಂಕ್‌ನಿಂದ ಬಂದ ನೋಟಿಸ್‌ಗೆ ಹೆದರಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪಟ್ಟನಾಯ್ಕನಹಳ್ಳಿ ವ್ಯಾಪ್ತಿಯ ಬಂಧನಕುಂಟೆ ಗ್ರಾಮದ ರಾಮಕೃಷ್ಣಯ್ಯ (37) ಆತ್ಮಹತ್ಯೆ ಮಾಡಿಕೊಂಡವರು. ರಾಮಕೃಷ್ಣಯ್ಯ ಕೆನರಾಬ್ಯಾಂಕ್‌ನಿಂದ ಸಾಲ ಪಡೆದಿದ್ದರಲ್ಲದೆ, ವಿವಿಧ ಸೊಸೈಟಿಗಳಲ್ಲಿ ಹಾಗೂ ಕೈ ಸಾಲವನ್ನೂ ಮಾಡಿದ್ದರೆನ್ನಲಾಗಿದೆ. ಇತ್ತೀಚೆಗೆ ಕೆನರಾ ಬ್ಯಾಂಕ್‌ನಿಂದ ಹಣ ಮರುಪಾವತಿಸುವಂತೆ ರಾಮಕೃಷ್ಣಯ್ಯನಿಗೆ ನೋಟಿಸ್ ಕಳುಹಿಸಲಾಗಿತ್ತು. ಸಾಲ ಹಿಂದಿರುಗಿಸಲು ಸಾಧ್ಯವಾಗದೆ ನಿನ್ನೆ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿದ್ದಾರೆ. ತಡರಾತ್ರಿಯಾದರ ರಾಮಕೃಷ್ಣಯ್ಯ ಮನೆಗೆ ಹಿಂದಿರುಗದ ಕಾರಣ ಈತನ ಪತ್ನಿ ಹುಡುಕಿಕೊಂಡು ಜಮೀನಿನ ಬಳಿ ಹೋಗಿದ್ದಾರೆ. ಈ ವೇಳೆ ರಾಮಕೃಷ್ಣಯ್ಯ ಒದ್ದಾಡುತ್ತಿದ್ದುದನ್ನು ಗಮನಿಸಿ ತಕ್ಷಣ ಸಹಾಯಕ್ಕಾಗಿ ಸ್ಥಳೀಯರನ್ನು ಕರೆದು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ರಾಮಕೃಷ್ಣಯ್ಯ ಸ್ಥಳಕ್ಕೆ ಭೇಟಿ ನೀಡಿದ್ದರು. ಪಟ್ಟನಾಯ್ಕನಹಳ್ಳಿ ಠಾಣೆ ಸಬ್‌ಇನ್ಸ್‌ಪೆಕ್ಟರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹಾವೇರಿ ವರದಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೇದೂರು ಗ್ರಾಮದ ಅಶೋಕ ಮಡಿವಾಳರ (45) ಎಂಬುವರು ಸಾಲಬಾಧೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಇವರು ಎರಡು ಎಕರೆ ಜಮೀನು ಹೊಂದಿದ್ದು, ಬ್ಯಾಂಕ್‌ನಲ್ಲಿ 4 ಲಕ್ಷ ರೂ. ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Write A Comment