ಕರ್ನಾಟಕ

ಅಪಾಯದ ಅಂಚಿನಲ್ಲಿ ಐತಿಹಾಸಿಕ ಮೇಲುಕೋಟೆ ಚೆಲುವನಾರಾಯಣ ದೇಗುಲ !

Pinterest LinkedIn Tumblr

Melukote-Chaluvanarayana-Te

ಮೇಲುಕೋಟೆ, ಜೂ.30- ಐತಿಹಾಸಿಕ ಸ್ಮಾರಕವೆನಿಸಿರುವ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯ ಕೇಂದ್ರ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಅವೈಜ್ಞಾನಿಕವಾಗಿ ಮಾಡಿದ ಕಾಮಗಾರಿಯಿಂದ ಭವ್ಯ ಕಟ್ಟಡದ ನೈಋತ್ಯ ಮೂಲೆ ಕುಸಿಯತೊಡಗಿದೆ.  ಈಗಾಗಲೇ ಎರಡು ಅಂಕಣಗಳ

ಕಂಬಗಳ ಕಲ್ಲಿನ ತೊಲೆಗಳು ಒಂದೆರಡು ಇಂಚು ಸರಿದು ಮುಂದಿನ ಭಾರೀ ಅನಾಹುತದ ಮುನ್ಸೂಚನೆ ನೀಡುತ್ತಿದೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಮತ್ತು ದೇಗುಲದ ಸುತ್ತ ವಿದ್ಯುತ್ ಕಂಬ ಅಳವಡಿಸಲು ಮಾಡಿದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆಯ ನೀರು ದೇವಾಲಯದ ತಳಪಾಯ ಸೇರಿ ನೈಋತ್ಯ ಮೂಲೆ ನಿಧಾನವಾಗಿ ಕುಸಿಯುತ್ತಿದೆ. ಈಗಾಗಲೇ ಕಲ್ಲುಗಳನ್ನು ಭದ್ರಪಡಿಸಿರುವ ಸ್ಥಳಗಳಲ್ಲಿ ಸಂದುಗಳ ಪ್ರಮಾಣ ಹೆಚ್ಚತೊಡಗಿದ್ದು, ಭಕ್ತರಲ್ಲಿ ಆತಂಕ ಮೂಡಿಸಿದೆ.

ಹೇಗಿತ್ತು ವ್ಯವಸ್ಥೆ: ಚೆಲುವನಾರಾಯಣನ ದೇಗುಲದ ಮೇಲೆ ಬಿದ್ದ ಮಳೆ ನೀರು ಯಾವುದೇ ಕಾರಣಕ್ಕೂ ತಳಪಾಯ ಸೇರದೆ ಸರಾಗವಾಗಿ ಹರಿದು ಕೊಳ ಮತ್ತು ಒಕ್ಕರಣೆಯಲ್ಲಿ ಸಂಗ್ರಹವಾಗುವ ಮಾದರಿಯಲ್ಲಿ ವೈಜ್ಞಾನಿಕವಾಗಿ ಮಳೆ ನೀರು ಹರಿದು ಹೋಗಲು ಪೂರ್ವಿಕರು ವ್ಯವಸ್ಥೆ ಮಾಡಿದ್ದರು. ದೇವಾಲಯದ ಮೇಲಿನಿಂದ ಮತ್ತು ರಸ್ತೆಯಿಂದ ಬರುವ ಮಳೆ ನೀರು ಮತ್ತು ಆಗ್ನೇಯ ದಿಕ್ಕಿನಲ್ಲಿರುವ ಅಡಿಗೆ ಮನೆಯಲ್ಲಿ ಬಳಸಿದ ನೀರು ಕಲ್ಲಿನ ಚರಂಡಿ ಮೂಲಕ ನೈಋತ್ಯ ಮೂಲೆಯಲ್ಲಿ ನಿರ್ಮಿಸಿದ ಎರಡು-ಮೂರು ಅಡಿ ವ್ಯಾಸದ ಗುಂಡಿಯ ಮುಖಾಂತರ ಹರಿದು ನಿಂಗಯ್ಯನ ಕೊಳ ಸೇರುವ ವ್ಯವಸ್ಥೆ ಮಾಡಲಾಗಿತ್ತು.

ಅದೇ ರೀತಿ ದೇವಾಲಯದ ಹಿಂಭಾಗ ಬಿದ್ದ ಮಳೆ ನೀರು ಹಾಸುಕಲ್ಲುಗಳ ಮೂಲಕ ಹರಿದು ನೈಋತ್ಯ ಮೂಲೆಗೆ ಬಂದು ಇದೇ ಗುಡಿಯ ಮೂಲಕ ನಿಂಗಯ್ಯನಕಟ್ಟೆ ಸೇರುವ ವ್ಯವಸ್ಥೆ ಇತ್ತು. ಉತ್ತರ ಮತ್ತು ಮುಂಭಾಗ ಬಿದ್ದ ಮಳೆ ನೀರು ಸಹ ಈಶಾನ್ಯದಲ್ಲಿ ನಿರ್ಮಿಸಿರುವ ಆಕರ್ಷಕ ಕೊಳದ ಒಕ್ಕರಣೆಯಲ್ಲಿ ಸಂಗ್ರಹವಾಗುವಂತೆ ಮಾಡಿ ದೇವಾಲಯದ ಅಡಿಪಾಯಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿತ್ತು.

ಅವೈಜ್ಞಾನಿಕ ಕಾಮಗಾರಿ:

ಇತ್ತೀಚೆಗೆ ಕೇಂದ್ರ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ದಕ್ಷಿಣ ಭಾಗದ ಕಲ್ಲಿನ ಚರಂಡಿಯನ್ನು ತೆಗೆದು ಮಣ್ಣು ಮುಚ್ಚಿಸಿ, ಅಡುಗೆ ಮನೆಯ ನೀರು ಸಹ ಅಲ್ಲೇ ಗುಂಡಿಯಲ್ಲಿ ಇಂಗುವಂತೆ ಅವೈಜ್ಞಾನಿಕ ಕಾಮಗಾರಿ ಮಾಡಿದ್ದಾರೆ. ಇದಿಷ್ಟೇ ಸಾಲದೆಂಬಂತೆ ದೇವಾಲಯದ ಸುತ್ತ ಅಡಿಪಾಯದ ಪಕ್ಕ ಇದ್ದ ಹಾಸುಗಲ್ಲುಗಳನ್ನು ಕಿತ್ತು ಕಬ್ಬಿಣದ ಇಲ್ಲದೆ ಹಾಳಾಗಿ ಕಂಬಗಳು ಮಾತ್ರ ಅಸಹ್ಯಕರವಾಗಿ ಕಾಣುತ್ತಿವೆ. ಜತೆಗೆ ದೇಗುಲಕ್ಕೂ ಮಾರಕವಾಗಿದೆ. ಇವೆರಡೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ನೀರು ಸರಾಗವಾಗಿ ದೇಗುಲದ ತಳಪಾಯ ಸೇರುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಚೆಲುವನಾರಾಯಣಸ್ವಾಮಿ ದೇವಾಲಯದ ಹೊರಭಾಗ ಸುಂದರ ಕೈಸಾಲೆಯೊಂದಿಗೆ ಆಕರ್ಷಕವಾಗಿ ನಿರ್ಮಾಣಗೊಂಡಿದ್ದು, ಸುತ್ತಲಿನ ಕಲ್ಲಿನ ತೊಲೆಗಳು ಮತ್ತು ಚಾವಣಿಗೆ ಕಲ್ಲಿನ ಕಂಬಗಳು ಆಧಾರವಾಗಿವೆ. ಕಲ್ಲಿನ ತೊಲೆಗಳನ್ನು ಸ್ವಲ್ಪವೂ ಸಂದು ಕಾಣದಂತೆ ಅಚ್ಚುಕಟ್ಟಾಗಿ ಜೋಡಿಸಲಾಗಿದೆ. ಆದರೆ, ಈಗಿನ ಅಧಿಕಾರಿಗಳು ಮಾಡಿದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ತಳಪಾಯ  ಮತ್ತು ಕಲ್ಲಿನ ತೊಲೆಗಳನ್ನು ಜೋಡಿಸಿದಲ್ಲಿ ಸುಂದಿನ ಪ್ರಮಾಣ ಹೆಚ್ಚುತ್ತಿದೆ. ಎರಡು-ಮೂರು ಕಡೆ ಕಲ್ಲು ಬಿರುಕು ಬಿಟ್ಟಿದೆ. ನೈಋತ್ಯ ಭಾಗದ ಕೈಸಾಲೆಯ ಮೂಲೆ ಕಂಬವೊಂದರಲ್ಲಿ ಸಂದಿನ ಅಂತರ ಎರಡು ಇಂಚಿಗೂ ಹೆಚ್ಚಾಗಿದೆ. ಮೂಲೆಯ ಎರಡು ಅಂಕಣಗಳಲ್ಲಿ ಈ ವ್ಯತ್ಯಾಸ ಕಂಡುಬರುತ್ತಿದ್ದು, ದೇಗುಲದ ಹಿಂಬಾಗ ಹಾಸುಕಲ್ಲುಗಳನ್ನು ತೆಗೆದಿರುವ ಪರಿಣಾಮ ಮಳೆ ಬಂದಾಗ ಕೊಚ್ಚೆಗುಂಡಿ ನಿರ್ಮಾಣವಾಗುತ್ತಿದೆ. ಪೂರ್ವಿಕರು ನಿರ್ಮಿಸಿದ್ದ ಕಲ್ಲಿನ ಚರಡಿಯನ್ನು ಮೊದಲಿದ್ದಂತೆ ನಿರ್ಮಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ದೇಗುಲದ ಹಿಂಭಾಗ ಹಾಸುಗಲ್ಲು ಅಥವಾ ಟೈಲ್ಸ್ ಅಳವಡಿಸಿ ಕೊಚ್ಚೆ ಗುಂಡಿ ನಿರ್ಮಾಣವಾಗದೆ ನೀರು ಹರಿದು ಹೋಗಿ ನಿಂಗಯ್ಯನ ಕೊಳ ಸೇರುವಂತೆ ಮಾಡಬೇಕು.

ದೇಗುಲದ ಉತ್ತರ ದಿಕ್ಕು ಮತ್ತು ಮುಂಭಾಗ ಬಿದ್ದ ನೀರು ಹರಿದು ಹೋಗುವ ವ್ಯವಸ್ತೆ ಸರಿಪಡಿಸಬೇಕಾದ ಅಗತ್ಯವಿದೆ. ಇನ್ನು ಅಡಿಪಾಯದ ಪಕ್ಕವೇ ಪ್ರವಾಸಿಗರ ವಾಹನಗಳು ದೇವಾಲಯದ ಸುತ್ತ ನಿಲ್ಲುತ್ತಿರುವುದನ್ನು ನಿಷೇಧಿಸುವ ಅಗತ್ಯವಿದೆ. ಈ ಎಲ್ಲ ಕ್ರಮಗಳಿಂದ ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸಬಹುದು. ಜಿಲ್ಲಾಡಳಿತ ಮತ್ತು ಕೇಂದ್ರ ಪ್ರಾಚ್ಯವಸ್ತು ಇಲಾಖೆ ಈ ನಿಟ್ಟಿನಲ್ಲಿ ತಕ್ಷಣ ಮುಂದಾಗಿ ಚೆಲುವನಾರಾಯಣನ ದೇಗುಲ ರಕ್ಷಣೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕಟ್ಟಡ ಕೇಂದ್ರ ಪ್ರಾಚ್ಯವಸ್ತು ಇಲಾಖೆಗೆ ಸೇರಿದೆ. ಈ ವಿಚಾರವನ್ನು ನಾನು ಗಮನಿಸಿಲ್ಲ. ಸ್ಥಳ ಪರಿಶೀಲಿಸಿ ತಕ್ಷಣ ಕ್ರಮ ಜರುಗಿಸುತ್ತೇನೆ  ಎಂದು ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನಸ್ವಾಮಿ ಹೇಳಿದ್ದಾರೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಮತ್ತು ದೇಗುಲದ ಸುತ್ತ ವಿದ್ಯುತ್ ದೀಪದ ಕಂಬ ಅಳವಡಿಸಿ ಗುತ್ತಿಗೆದಾರನ ಅವೈಜ್ಞಾನಿಕ ಕ್ರಮದಿಂದ ದೇಗುಲದ ಈಶಾನ್ಯ ಮೂಲೆ ಕುಸಿಯುತ್ತಿದೆ. ಮಳೆ ನೀರು ತಳಪಾಯ ಸೇರುತ್ತಿದೆ. ಮಳೆ ನೀರು ಹರಿದು ಹೋಗಲು ಮೊದಲಿದ್ದಂತೆ ವ್ಯವಸ್ಥೆ ಮಾಡದಿದ್ದರೆ ಅಪಾಯ ನಿಶ್ಚಿತ ಎಂದು ದೇಗುಲದ ಬಂಡೀಕಾರ ನರಸಿಂಹೇಗೌಡ ಹೇಳುತ್ತಾರೆ.

Write A Comment