ಕರ್ನಾಟಕ

ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ : ಕಿಮ್ಮನೆ ರತ್ನಾಕರ್

Pinterest LinkedIn Tumblr

Kimmane-Ratnaಬೆಂಗಳೂರು, ಜೂ.26- ಆಗಸ್ಟ್ ಮೊದಲ ವಾರದಲ್ಲಿ ಶಿಕ್ಷಕರ ವರ್ಗಾವಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಇಂದಿಲ್ಲಿ ತಿಳಿಸಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ  ಗುಣಾತ್ಮಕ ಶಿಕ್ಷಣ,

ಮೂಲಭೂತ ಸೌಕರ್ಯಗಳ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಹೊಸ ಕಾಯ್ದೆಯನ್ವಯ ಆಗಸ್ಟ್ ಮೊದಲ ವಾರ ಶಿಕ್ಷಕರ ವರ್ಗಾವಣೆಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಲಾಗಿದೆ ಎಂದರು. ಮೇನಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ, ಗ್ರಾಮ ಪಂಚಾಯ್ತಿ ಚುನಾವಣೆಯಿಂದ ವಿಳಂಬವಾಗಿದೆ. ಈಗ ಮತ್ತೆ ಬಿಬಿಎಂಪಿ ಚುನಾವಣೆ ಎದುರಾಗಿದೆ ಎಂದರು.
ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಸುಮಾರು 20 ಸಾವಿರ ಶಿಕ್ಷಕರಿಗೆ ಅನುಕೂಲವಾಗಲಿದೆ. ಕೆಲವೊಂದು ನ್ಯೂನ್ಯತೆಗಳನ್ನು ಸರಿಪಡಿಸಲಾಗಿದೆ ಎಂದರು.

ಬಿಇಒಗಳು ಮೂರು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಕಾರ್ಯನಿರ್ವಹಿಸುವಂತಿಲ್ಲ. ಹಾಗೆಯೇ ಡಿಡಿಪಿಐ (ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು) ಎರಡು ವರ್ಷಕ್ಕಿಂತ ಹೆಚ್ಚು ಕಾಲ ಒಂದು ಕಡೆ ಕಾರ್ಯನಿರ್ವಹಿಸುವಂತಿಲ್ಲ. ಅಲ್ಲದೆ, ಸ್ವಂತ ತಾಲೂಕು ಹಾಗೂ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ ಎಂದು ಹೇಳಿದರು. ಪ್ರತಿ ಮಾಧ್ಯಮಿಕ ಶಾಲೆಗೆ ಒಬ್ಬ ಮುಖ್ಯ ಶಿಕ್ಷಕರಿರಬೇಕು, 60 ವಿದ್ಯಾರ್ಥಿಗಳಿಗೊಮ್ಮೆ ಮುಖ್ಯ ಶಿಕ್ಷಕರಿರಬೇಕು ಎಂದ ಅವರು ಪ್ರತಿಯೊಬ್ಬ  ಪ್ರಾಥಮಿಕ ಶಿಕ್ಷಕರಿಗೂ ಬಡ್ತಿ ಸಿಗಬೇಕು. ಇದು ತಮ್ಮ ಅಪೇಕ್ಷೆ ಎಂದರು. ಜ್ಯೋತಿ ಸಂಜೀವಿನಿ ಯೋಜನೆ ವಿಳಂಬದ ಬಗ್ಗೆಯೂ ಬೆಳಗಾವಿ ಅಧಿವೇಶನದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಆದೇಶ ಹೊರಡಿಸಲಾಗುವುದು ಎಂದರು.

ವೇತನ ತಾರತಮ್ಯ ನಿವಾರಣೆ ಮಾಡಲು ಮುಖ್ಯಮಂತ್ರಿ ಪೂರಕವಾಗಿದ್ದಾರೆ ಎಂದ ಅವರು, 1967ರಿಂದ ಈ ವರೆಗೆ ಬೋಧಕೇತರ ಸಿಬ್ಬಂದಿ ನೇಮಕವಾಗಿಲ್ಲ, ಇದು ದೊಡ್ಡ ದುರಂತ ಎಂದು ವಿಷಾದಿಸಿದ ಅವರು, ಶಾಲಾ ಶಿಕ್ಷಕರು ಯೋಜನೆಗಳು ಮಾತ್ರ ಹೆಚ್ಚಳವಾಗುತ್ತ ಬಂದಿವೆ. ಈ ಕೊರತೆ  ನಿವಾರಿಸಲಾಗುವುದು. ದೈಹಿಕ ಶಿಕ್ಷಕರ ಸಮಸ್ಯೆ ಕೂಡ ಬಗೆಹರಿಸಲಾಗುವುದು. ಹಾಗೆಯೇ ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ನೇಮಕವಾಗಿರುವ 5300 ಶಿಕ್ಷಕರ ಸಮಸ್ಯೆಗಳಿಗೆ ಪರ್ಯಾಯ ಮಾರ್ಗ ಹುಡುಕಲಾಗುವುದು ಎಂದರು.  ಪ್ರಾಥಮಿಕ ಶಾಲಾ ಶಿಕ್ಷಕರು ಪರೀಕ್ಷೆಗೆ ಹೆದರಬಾರದು. ಈ ಬಗ್ಗೆ ಚಿಂತನೆಯಷ್ಟೆ. ಸರ್ಕಾರದ ಮುಂದೆ ಈ ಬಗ್ಗೆ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪೂರ್ವ ಪ್ರಾಥಮಿಕ ಶಿಕ್ಷಣ ಅನುಷ್ಠಾನಗೊಳಿಸುವ ಬಗ್ಗೆ ಶಿಕ್ಷಣ ತಜ್ಞರಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್ ಗುರಿಕಾರ್ ಮಾತನಾಡಿ, ಶಿಕ್ಷಕರಿಗೆ ಪರೀಕ್ಷೆ ತೆಗೆದುಕೊಳ್ಳುವುದರಿಂದ ಸರ್ಕಾರಿ ಶಾಲೆಗಳನ್ನು   ದುರ್ಬಲಗೊಳಿಸಿದಂತಾಗುತ್ತದೆ ಎಂದರು. ಜ್ಯೋತಿ ಸಂಜೀವಿನಿ ಯೋಜನೆ ಶೇ.70ರಷ್ಟು ತಾಲೂಕುಗಳಲ್ಲಿ ಅನುಷ್ಠಾನವಾಗಿಲ್ಲ. ವೇತನ ತಾರತಮ್ಯ, ವರ್ಗಾವಣೆ ನ್ಯೂನ್ಯತೆ ಸರಿಪಡಿಸಬೇಕು.  ಮಕ್ಕಳಿಗೆ ಹಾಲಿನೊಂದಿಗೆ ಮೊಟ್ಟೆಯನ್ನೂ ನೀಡಬೇಕು ಹಾಗೂ ಬೋಧಕೇತರ ಸಿಬ್ಬಂದಿ ನೇಮಕ ಮಾಡಬೇಕು ಎಂಬ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಸಚಿವರಿಗೆ ನೀಡಲಾಯಿತು.ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ , ಪಠ್ಯಪುಸ್ತಕ ಪರಿವೀಕ್ಷಣಾ ಸಮಿತಿ ಅಧ್ಯಕ್ಷ ಡಾ.ಬರಗೂರು ರಾಮಚಂದ್ರಪ್ಪ,  ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ಅಧ್ಯಕ್ಷ ರಾಮ್‌ಪಾಲ್‌ಸಿಂಗ್ , ಪ್ರಧಾನ ಕಾರ್ಯದರ್ಶಿ ಕಮಲಾಪಕರ್ ತ್ರಿಪಾಠಿ, ಪದವೀಧರ ವೇದಿಕೆ ಅಧ್ಯಕ್ಷ ರಾಮೋಜಿಗೌಡ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ರಮಾದೇವಿ, ಸಂಘಟನಾ ಕಾರ್ಯದರ್ಶಿ ಭಾರತಿ, ಪ್ರಧಾನ ಕಾರ್ಯದರ್ಶಿ ಎಂ.ವಿ.ನಾರಾಯಣಸ್ವಾಮಿ ಮುಂತಾದವರು ಈ ಸಂದರ್ಭದಲ್ಲಿದ್ದರು.

Write A Comment