ಕರ್ನಾಟಕ

ಮ್ಯಾಗಿ ಜಾಗಕ್ಕೆ ಮೊಟ್ಟೆ ಆಮ್ಲೆಟ್ : ಮೊಟ್ಟೆಗೆ ಹೆಚ್ಚಿದ ಡಿಮ್ಯಾಂಡ್

Pinterest LinkedIn Tumblr

Egg-replace-maggi ಬೆಂಗಳೂರು, ಜೂ.24- ತಾಯಂದಿರ ಆಶಾಕಿರಣವಾಗಿದ್ದ ಎರಡು ನಿಮಿಷಗಳ ಮ್ಯಾಗಿ ಸ್ಥಾನವನ್ನು ಮೊಟ್ಟೆ ಆಕ್ರಮಿಸಿದೆ.  ಶಾಲೆಯಿಂದ ಇಲ್ಲವೆ ಆಟ ಮುಗಿಸಿ ಮನೆಗೆ ಬಂದ ಮಕ್ಕಳ ಹಸಿವು ತಣಿಸಲು ತಾಯಂದಿರು ಮೊರೆ ಹೋಗುತ್ತಿದ್ದುದು ಎರಡು ನಿಮಿಷಗಳ ಮ್ಯಾಗಿಗೆ.

ಇದೀಗ ಮ್ಯಾಗಿ ಬ್ಯಾನ್ ಆಗಿರುವುದರಿಂದ ತಾಯಂದಿರು ತಮ್ಮ ಮಕ್ಕಳ ದಿಢೀರ್ ಹಸಿವು ನೀಗಿಸಲು ಮ್ಯಾಗಿ ಬದಲಿಗೆ ಎರಡು ನಿಮಿಷಗಳ ಮೊಟ್ಟೆ ಆಮ್ಲೆಟ್‌ಗೆ ಮೊರೆ ಹೋಗಿದ್ದಾರೆ. ಮ್ಯಾಗಿ ಬ್ಯಾನ್ ಆದ ನಂತರದ ಬೆಳವಣಿಗೆಗಳನ್ನು ಗಮನಿಸಿದರೆ ಮೊಟ್ಟೆ ವ್ಯಾಪಾರದಲ್ಲಿ ಗಣನೀಯ ಏರಿಕೆಯಾಗಿರುವುದು ಅಂಕಿ-ಅಂಶಗಳಿಂದ ಸ್ಪಷ್ಟಪಟ್ಟಿದೆ. ಕೆಲವು ವಾರಗಳ ಹಿಂದೆ 3ರೂ. ಇದ್ದ ಮೊಟ್ಟೆ ಬೆಲೆ ದಿಢೀರ್ 5ರೂ.ಗಳಿಗೆ ಏರಿಕೆಯಾಗಿದೆ. ಆದರೂ ಮೊಟ್ಟೆ ಖರೀದಿ ಕಡಿಮೆಯಾಗಿಲ್ಲ.

ಪ್ರತಿನಿತ್ಯ ಮೊಟ್ಟೆ ಖರೀದಿ ಹೆಚ್ಚಳವಾಗುತ್ತಿದ್ದು, ತಾಯಂದಿರು ತಮ್ಮ ಮಕ್ಕಳ ಹಸಿವು ನೀಗಿಸಲು ಎರಡು ನಿಮಿಷಗಳ ಮೊಟ್ಟೆ ಆಮ್ಲೆಟ್‌ಗೆ ಮೊರೆ ಹೋಗಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಬೀಫ್ ನಿಷೇಧಿಸಿದ ನಂತರ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಚಿಕನ್ ರೇಟ್ ಕೂಡ ಹೆಚ್ಚಳಗೊಂಡಿತು. ಇದೀಗ ಮ್ಯಾಗಿ ಬ್ಯಾನ್ ಆದ ನಂತರ ಮೊಟ್ಟೆಗೆ ಬೇಡಿಕೆ ಹೆಚ್ಚಿರುವುದರಿಂದ ಅದರ ಬೆಲೆಯೂ ಏರಿಕೆಯಾಗಿದ್ದು, ಮೊಟ್ಟೆಯ ಹೋಲ್‌ಸೇಲ್ ದರವೇ 4ರೂ. 30 ಪೈಸೆಯಷ್ಟಿದೆ ಎನ್ನುತ್ತಾರೆ ಕರ್ನಾಟಕ ಕುಕ್ಕುಟ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಂ.ಸಿ.ಆರ್.ಶೆಟ್ಟಿ.    ಮ್ಯಾಗಿ ಸ್ಥಾನವನ್ನು ಮೊಟ್ಟೆ ಅಲಂಕರಿಸಿದೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಆದರೆ, ಇತ್ತೀಚೆಗೆ ಮೊಟ್ಟೆ ವ್ಯಾಪಾರದಲ್ಲಿ ಗಣನೀಯ ಏರಿಕೆ ಕಂಡುಬಂದಿರುವುದಂತೂ ಸತ್ಯ ಎನ್ನುತ್ತಾರೆ ರಾಷ್ಟ್ರೀಯ ಮೊಟ್ಟೆ ಅಭಿವೃದ್ಧಿ ಸಮಿತಿ ಹಾಗೂ ಅಖಿಲ ಭಾರತ ಪೌಲ್ಟ್ರಿ ಅಭಿವೃದ್ಧಿ ಸಮಿತಿ ಮುಖ್ಯಸ್ಥ ಕೆ.ಗಿರಿಧರ್.

ಮೊಟ್ಟೆ ದರ ಹೆಚ್ಚಳಕ್ಕೆ ಬೇಡಿಕೆ ಹೆಚ್ಚಿರುವುದು ಕಾರಣವಲ್ಲ. ಚಳಿಗಾಲದಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚಳವಾಗುತ್ತದೆ. ಅದೇ ರೀತಿ ನೆರೆಯ ಆಂಧ್ರ ಪ್ರದೇಶದಲ್ಲಿ ನೂರಾರು ಕೋಳಿಗಳು ರೋಗಕ್ಕೆ ತುತ್ತಾಗಿ ಬಲಿಯಾದ ಹಿನ್ನೆಲೆಯಲ್ಲಿ ಸರಬರಾಜಿನಲ್ಲಿ ಕುಂಠಿತಗೊಂಡಿರುವುದರಿಂದ ಮೊಟ್ಟೆ ದರ ಏರಿಕೆಯಾಗಿದೆ ಎನ್ನುತ್ತಾರೆ ಅವರು.  ತರಕಾರಿ ಬೆಲೆಯಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬಂದಿರುವುದು ಮೊಟ್ಟೆ ಬೇಡಿಕೆ ಹೆಚ್ಚಳಕ್ಕೆ ಮತ್ತೊಂದು ಪ್ರಮುಖ ಕಾರಣ ಎಂಬುದನ್ನು ಗಿರಿಧರ್ ವಿವರಿಸಿದ್ದಾರೆ. ಕ್ಯಾರೆಟ್, ಹುರುಳಿಕಾಯಿ ಬೆಲೆ ಕೆಜಿಗೆ 160ರೂ. ಇದ್ದರೆ, ಉಳಿದ ತರಕಾರಿಗಳ ಬೆಲೆ ಕೆಜಿಗೆ ಸಾಮಾನ್ಯವಾಗಿ 60ರೂ. ಇದೆ. ಇದಕ್ಕೆ ಹೋಲಿಸಿದರೆ ಅತ್ಯಂತ ಪೌಷ್ಟಿಕಾಂಶ ಹೊಂದಿರುವ ಮೊಟ್ಟೆ ಖರೀದಿಯತ್ತ ಗ್ರಾಹಕರು ವಾಲಿರುವುದು ಸ್ಪಷ್ಟಪಡುತ್ತದೆ.

ಹಾಲು ಉತ್ಪನ್ನ ಹೊರತುಪಡಿಸಿದರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಕೀರ್ತಿ ಮೊಟ್ಟೆಗೆ ಲಭಿಸುತ್ತದೆ. ಒಂದು ಅಂದಾಜಿನ ಪ್ರಕಾರ, ಪ್ರತಿನಿತ್ಯ ಬೆಂಗಳೂರಿನಲ್ಲಿ 50 ಲಕ್ಷ ಮೊಟ್ಟೆ ವ್ಯಾಪಾರವಾಗುತ್ತಿದೆಯಂತೆ. ಅದೇ ರೀತಿ ವಾರಕ್ಕೆ ಬಿಕರಿಯಾಗುತ್ತಿರುವುದು ಒಂದು ಕೋಟಿ ಕೆಜಿ ಕೋಳಿಮಾಂಸ. ರಾಜ್ಯದಲ್ಲಿ ಪ್ರತಿನಿತ್ಯ 1.2 ಕೋಟಿ ಕೋಳಿಮೊಟ್ಟೆ ವ್ಯಾಪಾರವಾಗುತ್ತಿದ್ದರೆ, ಇದರ ಅರ್ಧದಷ್ಟು ಮೊಟ್ಟೆ ಬಿಕರಿಯಾಗುತ್ತಿರುವುದು ಬೆಂಗಳೂರಿನಲ್ಲಿ. ಹೀಗಾಗಿ ತಾಯಂದಿರ ಎರಡು ನಿಮಿಷದ ಮ್ಯಾಗಿ ಸ್ಥಾನವನ್ನು ಮೊಟ್ಟೆ ಅಲಂಕರಿಸಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬೆಂಗಳೂರು ಹೊರತುಪಡಿಸಿದರೆ ಮೈಸೂರು ಮತ್ತು ಮಂಗಳೂರಿನಲ್ಲಿ  ಅತಿ ಹೆಚ್ಚು ಮೊಟ್ಟೆ ವ್ಯಾಪಾರವಾಗುತ್ತಿದೆ.

Write A Comment