ಕರ್ನಾಟಕ

ದಾವೂದ್ ಬಲಗೈ ಭಂಟನಿಗೆ ಸುಷ್ಮಾ ಪತಿ ನೆರವು : ಬಿ.ಕೆ.ಹರಿಪ್ರಸಾದ್ ಆರೋಪ

Pinterest LinkedIn Tumblr

bk-hariprasadಬೆಂಗಳೂರು, ಜೂ.24-ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಭಂಟ  ರೂಪೇಶ್ ಶರ್ಮಾ ಹಲವಾರು ಕೊಲೆ ಪ್ರಕರಣಗಳ ಆರೋಪಿಯಾಗಿದ್ದು, ಆತನಿಗೆ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಪತಿ ಕೌಶಲ್ ಸ್ವರಾಜ್ ವಕೀಲರಾಗಿ ಕಾನೂನು ನೆರವು ನೀಡುತ್ತಿದ್ದಾರೆ ಎಂದು

ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಗಂಭೀರ ಆರೋಪ ಮಾಡಿದರು. ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಾಯಕರು ಸತ್ಯಹರಿಶ್ಚಂದ್ರನ ಮನೆ ಪಕ್ಕದಲಿರುವಂತೆ ಮಾತನಾಡುತ್ತಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರ ಇತಿಹಾಸಗಳೇ ಕರಾಳವಾಗಿವೆ ಎಂದು ಲೇವಡಿ ಮಾಡಿದರು. ಅಮಿತ್ ಷಾ ಗುಜರಾತ್ ಗೃಹ ಸಚಿವರಾಗಿದ್ದಾಗ ಶಾಬುದ್ದೀನ್ ಮತ್ತು ಪ್ರಜಾಪತಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಆ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆನೀಡಬೇಕಾಯಿತು.

ಸುಪ್ರೀಂಕೋರ್ಟ್ 2 ವರ್ಷ ಕಾಲ ಅಮಿತ್ ಷಾರನ್ನು ಗುಜರಾತ್‌ನಿಂದ ಗಡಿಪಾರು ಮಾಡಿತ್ತು. ಮಹಾರಾಷ್ಟ್ರದಲ್ಲಿ ತಲೆ ಮರೆಸಿಕೊಂಡಿದ್ದ ಅಮಿತ್ ಷಾ ಈಗ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ. ಇನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಬ್ಯಾಂಕ್ ಸಾಲ ದುರುಪಯೋಗ ಮಾಡಿಕೊಂಡ ಆರೋಪ ಸಿಬಿಐ ವರದಿಯಲ್ಲಿ ಸಾಬೀತಾಗಿದೆ. ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಹುಟ್ಟಿದ್ದು ಹರಿಯಾಣದಲ್ಲಿ ಚುನಾವಣೆಯಲ್ಲಿ ಗೆದ್ದಿದ್ದು ಮಧ್ಯಪ್ರದೇಶದಿಂದ, ಬಾಗೀನ ತೆಗೆದುಕೊಳ್ಳಲು ಕರ್ನಾಟಕದ ಬಳ್ಳಾರಿಗೆ ಬರುತ್ತಿದ್ದರು. ಗಡಿ ಲೂಟಿ ಮಾಡಿದ ಜನಾರ್ದನರೆಡ್ಡಿ ಮತ್ತು ಶ್ರೀರಾಮುಲು ತಲೆ ಮೇಲೆ ಕೈಯಿಟ್ಟು ಇವರು ನನ್ನ ಮಕ್ಕಳೆಂದು ಹೇಳುತ್ತಿದ್ದರು. ವಾಸ್ತವವಾಗಿ ಸುಷ್ಮಾ ಸ್ವರಾಜ್ ಬಳ್ಳಾರಿ ರೆಡ್ಡಿಗಳನ್ನು ಬೆಳೆಸಲಿಲ್ಲ. ಬದಲಾಗಿ ಅವರ ತಲೆ ಮೇಲೆ ಕೈಯಿಟ್ಟರು ಎಂದು ಲೇವಡಿ ಮಾಡಿದರು.  ಇನ್ನು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಚುನಾವಣೆಯಲ್ಲಿ ಭಾರೀ ಪ್ರಮಾಣದ ಹಣ ಖರ್ಚು ಮಾಡಲು ಲಲಿತ್ ಮೋದಿ ಅಂಥವರಿಂದ ವಸೂಲಿ ಮಾಡಿದ್ದಾರೆ. ಕರ್ನಾಟಕದಲ್ಲಿ ತೆಗೆದುಕೊಂಡರೆ ಬಿಜೆಪಿ ಆಡಳಿತದಲ್ಲಿದ್ದಾಗ  ಆರು ಮಂದಿ ಸಚಿವರು ಹಾಗೂ ಶಾಸಕರು ಜೈಲಿಗೆ ಹೋಗಿದ್ದರು. ಇನ್ನೂ ಆರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇಂತಹ ನಾಯಕರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಮೂದಲಿಸಿದರು.

ನರೇಂದ್ರ ಮೋದಿ ಈ ಹಿಂದೆ ಯುಪಿಎ ಪ್ರಧಾನಿಯಾಗಿದ್ದ ಮನ್‌ಮೋಹನ್‌ಸಿಂಗ್ ಅವರ ಮೌನವನ್ನು ಲೇವಡಿ ಮಾಡುತ್ತಿದ್ದರು. ಈಗ ಐಪಿಎಲ್ ಹಗರಣದ ಲಲಿತ್ ಮೋದಿಗೆ ನೆರವಾಗಿರುವ ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೇ ಕುರಿತು ಮೋದಿ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಹಗರಣವನ್ನು ಕೆದಕಿದರೆ ಮೋದಿಗೆ ಕಳಂಕ ಅಂಟಿಕೊಳ್ಳಲಿದೆ ಎಂಬ ಕಾರಣಕ್ಕಾಗಿ ಮೌನವಾಗಿದ್ದಾರೆ. ಕೇಂದ್ರದಲ್ಲಿ ಜನಪ್ರತಿನಿಧಿಗಳ ಸರ್ಕಾರ ಆಡಳಿತದಲ್ಲಿಲ್ಲ. ಖಾಕಿ ಚಡ್ಡಿ ಕರಿ ಟೋಪಿ ಹಾಕಿದ ಆರ್‌ಎಸ್‌ಎಸ್‌ನವರು ಆಡಳಿತ ನಡೆಸುತ್ತಿದ್ದಾರೆ. ಎಲ್ಲಾ ಯೋಜನೆಗಳು ಆರ್‌ಎಸ್‌ಎಸ್ ಕಚೇರಿ ನಾಗ್ಪುರದಲ್ಲಿ ಚರ್ಚಿಸಿ ಜಾರಿಗೆ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಯೋಗ ದಿನಾಚರಣೆಯಂದು ಆರ್‌ಎಸ್‌ಎಸ್ ಕಚೇರಿಗೆ ಹೋಗಿ ಶವಾಸಾನ ಮಾಡಿದರು. ಅದರ ಅರ್ಥ ನಾನು ಮಾತನಾಡುವ ಅಧಿಕಾರ ನನಗಿಲ್ಲ ಎಂದು ಪರೋಕ್ಷವಾಗಿ ತೋರಿಸಿಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.

ಕರ್ನಾಟಕದಲ್ಲಿ ಬಿಎಸ್‌ವೈ ಮತ್ತು ಎಚ್‌ಡಿಕೆ ಭ್ರಷ್ಟರ ಪಟ್ಟಿಯಲ್ಲಿದ್ದು, ಅಧಿಕಾರಕ್ಕಾಗಿ ಮತ್ತೆ ಒಂದಾಗುತ್ತಿದ್ದಾರೆ ಎಂದು ಕಿಡಿಕಾರಿದರು.  ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ನರೇಂದ್ರ ಮೋದಿ ದಿನಕ್ಕೆ ಸಾವಿರಾರು ಟ್ವೀಟ್‌ಗಳನ್ನು ಮಾಡುತ್ತಿರುತ್ತಾರೆ. ಅದರಲ್ಲಿ ಒಂದರಲ್ಲಾದರೂ ಐಪಿಎಲ್ ಹಗರಣದ ಆರೋಪಿಗಳ ಬಗ್ಗೆ ತಮ್ಮ ಅಭಿಪ್ರಾಯ ಹೇಳಲಿ ಎಂದು ಒತ್ತಾಯಿಸಿದರು. ಕಾಂಗ್ರೆಸ್ ಈ ಹಿಂದೆ ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮಕೈಗೊಂಡಿದೆ. ಸ್ವಚ್ಛ ಆಡಳಿತದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ  ನರೇಂದ್ರ ಮೋದಿ  ಭ್ರಷ್ಟರನ್ನು ರಕ್ಷಿಸುತ್ತಿದ್ದಾರೆ ಎಂದು ಟೀಕಿಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಹರ್ಷದ್ ಮಾತನಾಡಿ, ಮನ್ ಕೀ ಬಾತ್‌ನಲ್ಲಿ ಎಲ್ಲಾ ವಿಷಯಗಳ ಕುರಿತು ಚರ್ಚಿಸುವ ನರೇಂದ್ರ ಮೋದಿ ಐಪಿಎಲ್ ಹಗರಣದ ಬಗ್ಗೆಯೂ ಒಂದು ಗಂಟೆ ದೇಶವನ್ನು ಉದ್ದೇಶಿಸಿ ಮಾತನಾಡಲಿ ಎಂದು ಸವಾಲು ಹಾಕಿದರು.

Write A Comment