ಕರ್ನಾಟಕ

ಹುಬ್ಬಳ್ಳಿಯಲ್ಲಿ ಕುತೂಹಲ ಮೂಡಿಸಿದ ಯಡಿಯೂರಪ್ಪ-ಕುಮಾರಸ್ವಾಮಿ ಭೇಟಿ; ರಹಸ್ಯ ಮಾತುಕತೆ ನಡೆಸಿದ್ದೇನು ?

Pinterest LinkedIn Tumblr

yaddi-hdk

ಹುಬ್ಬಳ್ಳಿ, ಜೂ.23: ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಕಾಲದ ಬದ್ಧ ವೈರಿಗಳಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಇಂದು ಹುಬ್ಬಳ್ಳಿಯಲ್ಲಿ ಪರಸ್ಪರ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸುವ ಮೂಲಕ ಇಡೀ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ.

ಇದೇ ತಿಂಗಳ 29ರಂದು ಬೆಳಗಾವಿಯಲ್ಲಿ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಈ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಜೆಡಿಎಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ರೈತರನ್ನು ಮುಂದಿಟ್ಟುಕೊಂಡು ತೀವ್ರ ಕಸರತ್ತು ನಡೆಸಿರುವ ಮಧ್ಯೆಯೇ ಈ ನಾಯಕರ ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ.

ಜೂ.24ರಂದು ಧಾರವಾಡದ ತಡಕೋಡ ಗ್ರಾಮದಿಂದ ಬೆಳಗಾವಿಯ ಸುವರ್ಣಸೌಧಕ್ಕೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಪಾದಯಾತ್ರೆ ಹಮ್ಮಿಕೊಂಡಿದ್ದರೆ ಅತ್ತ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಳೆದ ಅಧಿವೇಶನದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಗುರುನಾಥನ ಮನೆಯಿಂದ ಬೆಳಗಾವಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಈ ಸಂದರ್ಭ ಇಬ್ಬರೂ ನಾಯಕರು ತಮ್ಮ ತಮ್ಮ ಉದ್ದೇಶಿತ ಪಾದಯಾತ್ರೆಗೆ ವೇದಿಕೆ ಸಜ್ಜುಗೊಳಿಸುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದರು. ಬಿ.ಎಸ್.ಯಡಿಯೂರಪ್ಪ ಅವರು ನರಗುಂದದಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಲು ನರಗುಂದಕ್ಕೆ ತೆರಳುವ ಮಾರ್ಗಮಧ್ಯೆ ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ತಂಗಿದ್ದರು. ಇದೇ ವೇಳೆ ತಮ್ಮ ಪಾದಯಾತ್ರೆ ಕುರಿತಂತೆ ಸುದ್ದಿಗೋಷ್ಠಿ ನಡೆಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಪ್ರವಾಸಿ ಮಂದಿರಕ್ಕೆ ಆಗಮಿಸಿದರು. ಈ ಸಂದರ್ಭ ಇಬ್ಬರೂ ನಾಯಕರ ಭೇಟಿ ಮತ್ತು ಸಮಾಗಮ ನಡೆದವು. ಈ ಭೇಟಿ ನಂತರ ಯಡಿಯೂರಪ್ಪ ಅವರು ನರಗುಂದಕ್ಕೆ ಪ್ರಯಾಣ ಬೆಳೆಸಿದರು.

Write A Comment