ಕರ್ನಾಟಕ

ಭಾರೀ ಮಳೆ : ಚಾರ್ಮುಡಿ ಘಾಟ್ ನಲ್ಲಿ ಕೆಲ ಗಂಟೆಗಳ ಕಾಲ ಸಂಚಾರ ಸ್ಥಗಿತ

Pinterest LinkedIn Tumblr

Charmadi-gha-t-rain

ಚಿಕ್ಕಮಗಳೂರು, ಜೂ.22-ಮೂಡಿಗೆರೆ ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚಾರ್ಮುಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಮರಗಳು ರಸ್ತೆಗೆ ಉರುಳಿಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ರಸ್ತೆಯಲ್ಲಿ ಮರಗಳು ಬಿದ್ದಿದ್ದರಿಂದ ರಾತ್ರಿ 2 ರಿಂದ ಬೆಳಗ್ಗೆ 8 ಗಂಟೆವರೆಗೆ ವಾಹನಗಳು ನಿಂತಲ್ಲೇ ನಿಂತಿದ್ದವು. ಕೊಟ್ಟಿಗೆಹಾಲದಿಂದ ಚಾರ್ಮುಡಿಘಾಟಿವರೆಗೆ ಅಲ್ಲಲ್ಲಿ ಗುಡ್ಡ ಕುಸಿದು ರಸ್ತೆಗೆ ಮಣ್ಣು, ಕಲ್ಲುಗಳು ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಚಾರ್ಮುಡಿ ಘಾಟ್‌ನಲ್ಲಿರುವ ಅಣ್ಣಪ್ಪಸ್ವಾಮಿ ದೇವಸ್ಥಾನದ ಬಳಿ ಭೂಕುಸಿತದಿಂದಾಗಿ ರಸ್ತೆ ಮೇಲೆ ಭಾರೀ ಗಾತ್ರದ ಕಲ್ಲುಬಂಡೆ, ಮಣ್ಣು ಉರುಳಿಬಿದ್ದು ಸಂಚಾರ ಅಸ್ಥವ್ಯಸ್ಥವಾಗಿತ್ತು. ಮಳೆಯೊಂದಿಗೆ ಮಂಜು ಮುಸುಕಿದ ವಾತಾವರಣ ಇರುವುದರಿಂದ ಚಾಲಕರು ವಾಹನ ಚಲಾಯಿಸಲು ಹರಸಾಹಸ ಪಡುವಂತಾಗಿದೆ. ಶಿರಾಡಿಘಾಟ್ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಎಲ್ಲಾ ವಾಹನಗಳು ಚಾರ್ಮುಡಿ ಘಾಟ್‌ನಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಮೂಡಿಗೆರೆ, ಶೃಂಗೇರಿ, ಕಳಸ ತಾಲೂಕುಗಳಲ್ಲಿ ಮಳೆ ಅಬ್ಬರಿಸುತ್ತಿರುವುದರಿಂದ ಜನಜೀವನ ಅಸ್ಥವ್ಯಸ್ಥಗೊಂಡಿದ್ದು, ಇಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಮೂಡಿಗೆರೆಯ ಮೊಳಕಲ್, ಬಾಳೂರು, ಗೋಣಿಬೀಡು ಹೋಬಳಿಗಳಲ್ಲಿ 150ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದ ವಿದ್ಯುತ್ ಸಂಪರ್ಕವಿಲ್ಲದೆ ರಾತ್ರಿ ವೇಳೆ ಕತ್ತಲೆಯಲ್ಲಿ ಜನರು ಕಾಲಕಳೆಯುವಂತಾಗಿದೆ.

ಮೂಡಿಗೆರೆ ಪಟ್ಟಣದಲ್ಲಿ ಮೂರ್ತಿ ಎಂಬುವವರಿಗೆ ಸೇರಿದ ಗ್ಯಾರೇಜ್ ಕುಸಿದು ಬಿದ್ದಿದೆ. ಬಕ್ಕಿ ಗ್ರಾಮದಲ್ಲಿ ಅಶೋಕ್ ಎಂಬುವವರ ಮನೆ ಮೇಲೆ ಮರ ಬಿದ್ದು ಗೋಡೆಗಳು ಕುಸಿದಿವೆ. ಗೌಡಹಳ್ಳಿಯ ರಾಮಚಂದ್ರಾಚಾರ್ ಅವರ ಮನೆ ಮೇಲಿನ ಚಾವಣಿ ಹಾರಿಹೋಗಿದೆ.
ಹೇಮಾವತಿ ನದಿ ಸೇರಿದಂತೆ ತಾಲೂಕಿನ ಎಲ್ಲಾ ನದಿಗಳ ಹರಿವಿನ ಮಟ್ಟ ಹೆಚ್ಚಾಗಿದ್ದು, ಉಣ್ಣೆಹಳ್ಳಿ ಗ್ರಾಮದಲ್ಲಿ ಹೇಮಾವತಿ ನದಿ ನೀರು ಗದ್ದೆಗಳಿಗೆ ನುಗ್ಗಿ ಅಪಾರ ಬೆಳೆ ನಷ್ಟವಾಗಿದೆ. ಕಳಸ ಹೋಬಳಿಯಲ್ಲಿ ನೂರಾರು ಮರಗಳು ಧರೆಗುರುಳಿವೆ. ಮರಗಳ ರೆಂಬೆ, ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು 3 ದಿನಗಳಿಂದ ವಿದ್ಯುತ್ ಸಂಚಾರ ಸ್ಥಗಿತಗೊಂಡಿದೆ.  ಚಿಕ್ಕಮಗಳೂರು ಸೇರಿದಂತೆ ತಾಲೂಕಿನಾದ್ಯಂತ ಸತತ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥಗೊಂಡಿದ್ದು, ಜನರು ಪರದಾಡುವಂತಾಗಿದೆ.

Write A Comment