ಮಂಗಳೂರು, ಜೂ.23: ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜು ಆವರಣದಲ್ಲಿ ನಿರ್ಮಿಸಲ್ಪಟ್ಟಿರುವ 2ನೆ ಹಂತದ ವ್ಯವಹಾರ ಆಡಳಿತ ಕಟ್ಟಡವನ್ನು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ, ಮಾಜಿ ಕೇಂದ್ರ ಸಚಿವ, ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಸೋಮವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, 147 ವರ್ಷಗಳ ಇತಿಹಾಸವಿರುವ ಹಳೆಯ ಸರಕಾರಿ ಕಾಲೇಜಿನಲ್ಲಿ ಇಂದು ಪದವಿ, ಸ್ನಾತಕೋತ್ತರ ಶಿಕ್ಷಣ ಲಭಿಸುತ್ತಿದ್ದರೂ ವಿಶ್ವದ ಗಮನಸೆಳೆಯುವ ನಿಟ್ಟಿನಲ್ಲಿ ಇಲ್ಲಿ ವ್ಯವಹಾರ ಅಧ್ಯಯನ ಕೇಂದ್ರ ಸ್ಥಾಪಿಸಲು ಪ್ರಸ್ತಾಪ ಸಲ್ಲಿಸಬೇಕು ಎಂದು ಮಂಗಳೂರು ವಿ.ವಿ.ಕುಲಪತಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ, ವಿವಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಕಾಲದ ನೆನಪುಗಳನ್ನು ಮೆಲುಕು ಹಾಕಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಕೆ.ಸುಂದರ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಹಾಗೂ ಹಳೆ ವಿದ್ಯಾರ್ಥಿ ಐವನ್ ಡಿಸೋಜ, ಮಂಗಳೂರು ವಿ.ವಿ. ಕುಲಪತಿ ಪ್ರೊ.ಕೆ.ಭೈರಪ್ಪ ಶುಭ ಹಾರೈಸಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಹಾಗೂ ಕಟ್ಟಡ ನಿರ್ಮಾಣದ ಗುತ್ತಿಗೆದಾರ ರೋಯ್ ಕ್ಯಾಸ್ಟಲಿನೊರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಸುನಂದಾ ಯು., ನಿಕಟಪೂರ್ವ ಪ್ರಾಂಶುಪಾಲ ಸತ್ಯನಾರಾಯಣ ಮಲ್ಲಿಪಟ್ಣ, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಡಿ.ಶ್ರೀನಿವಾಸ ನಾಯ್ಕಾ, ಶುಭೋದಯ ಕೂಡ್ಲು, ವಿಶ್ವನಾಥ ಆರ್. ಪುತ್ರನ್, ಆರ್.ರೋಹಿದಾಸ್, ಬಿ.ಪ್ರಕಾಶ್ ಪೈ ಉಪಸ್ಥಿತರಿದ್ದರು.
ಮುರಳೀಧರ ಕಾಮತ್ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಧರ್ಮಣ ನಾಕ್ ಸ್ವಾಗತಿಸಿದರು. ಎಂ.ಎಸ್.ಕೋಟ್ಯಾನ್ ನಿರೂಪಿಸಿದರು.

