ಕರ್ನಾಟಕ

ಅನುತ್ತೀರ್ಣನಾದವ ಉತ್ತೀರ್ಣ : ಬೆಂಗಳೂರು ವಿವಿಯಲ್ಲೊಂದು ಗೋಲ್‌ಮಾಲ್

Pinterest LinkedIn Tumblr

Bangalkore-Univers

ಬೆಂಗಳೂರು, ಜೂ.22- ದೇಶದಲ್ಲೇ ಅತ್ಯುತ್ತಮ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಂಗಳೂರು ವಿವಿ ನಕಲಿ ಅಂಕಪಟ್ಟಿ ತಯಾರಿಸುವ ಕಾರ್ಖಾನೆಯಾಗಿದೆಯೇ..? ಏಕೆಂದರೆ, ಇತ್ತೀಚೆಗೆ ವಿವಿಯಲ್ಲಿ ನಡೆಯುತ್ತಿರುವ ಒಂದಲ್ಲ ಒಂದು ಅವಾಂತರಗಳನ್ನು ಗಮನಿಸಿದರೆ ಇಂತಹ ಸಂದೇಹ ಎಂಥವರಿಗೂ ಬಂದೇ ಬರುತ್ತದೆ.

ವಿವಾದಗಳಿಂದಲೇ ಕುಖ್ಯಾತಿ ಗಳಿಸಿರುವ ಬೆಂಗಳೂರು ವಿವಿ ಒಳ್ಳೆಯ ಸುದ್ದಿಗಿಂತ ಹೆಚ್ಚಾಗಿ ಹಗರಣಗಳಿಂದಲೇ ಸದಾ ಸುದ್ದಿಯಲ್ಲಿರುತ್ತದೆ. ವಿವಿಗಳಲ್ಲಿರುವ ಉಪಕುಲಪತಿಗಳ ಒಳಜಗಳ, ಸಿಂಡಿಕೇಟ್ ಸದಸ್ಯರ ಒಳ ರಾಜಕೀಯ, ವಿದ್ಯಾರ್ಥಿಗಳ ನಡುವೆ ಸಮನ್ವಯದ ಕೊರತೆಯಿಂದ ಈ ವಿವಿ ಶೈಕ್ಷಣಿಕ ಚಟುವಟಿಕೆಗಳಿಗಿಂತ ಹಗರಣಗಳಿಂದಲೇ ದೇಶ-ವಿದೇಶಗಳಲ್ಲೂ ಹೆಸರುವಾಸಿಯಾಗಿದೆ. ಇದಕ್ಕೆ ಇತ್ತೀಚಿನ ತಾಜಾ ನಿದರ್ಶನವೆಂದರೆ, ಪದವಿಯಲ್ಲಿ ಅನುತ್ತೀರ್ಣನಾಗಿದ್ದ ವಿದ್ಯಾರ್ಥಿಯೊಬ್ಬ ಉತ್ತೀರ್ಣನಾಗಿರುವುದು.

ವಿದೇಶಿ ಹಾಗೂ ಹೊರರಾಜ್ಯದ ವಿದ್ಯಾರ್ಥಿಗಳ ಪೂರ್ವಾಪರ ತಿಳಿಯದೆ  ಪ್ರವೇಶ ನೀಡುವ ಈ ವಿಶ್ವವಿದ್ಯಾನಿಲಯಕ್ಕೆ ಮುಂದೊಂದು ದಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಬಂದ ಗತಿಯೇ ಬಂದರೂ ಅಚ್ಚರಿಯಿಲ್ಲ.  ಮೊದಲು ಅನುತ್ತೀರ್ಣ-ನಂತರ ಉತ್ತೀರ್ಣ:
ಅನಿವುಕ್ವು ಚಿಮ್ಡಿಕ್ವು ಎಲ್ಯು ಎಂಬ ವಿದೇಶಿ ವಿದ್ಯಾರ್ಥಿ ಪದವಿಯಲ್ಲಿ ಮೊದಲು ಅನುತ್ತೀರ್ಣನಾಗಿದ್ದ. ನಂತರ ವಿವಿಯಲ್ಲಿರುವ ಕೆಲವರು ತೋರಿದ ಕೃಪೆಯಿಂದಾಗಿ ಈಗ ಉತ್ತೀರ್ಣನಾಗಿದ್ದಾನೆ.  2014 ಮೇನಲ್ಲಿ ನಡೆದ ಬಿಎ ಎರಡನೆ ಸೆಮಿಸ್ಟರ್ ಪರೀಕ್ಷೆಯಲ್ಲಿ ಅನಿವುಕ್ವು ಚಿಮ್ಡಿಕ್ವು ಎಲ್ಯು  500 ಅಂಕಕ್ಕೆ 235 ಅಂಕ ಪಡೆದು ಅನುತ್ತೀರ್ಣನಾಗಿದ್ದ. ಹೆಚ್ಚುವರಿ ಇಂಗ್ಲಿಷ್‌ನಲ್ಲಿ 63, ಪತ್ರಿಕೋದ್ಯಮ ವಿಭಾಗದಲ್ಲಿ 48, ಐಚ್ಛಿಕ ಇಂಗ್ಲಿಷ್‌ನಲ್ಲಿ 50, ಮನಃಶಾಸ್ತ್ರದಲ್ಲಿ 44, ಭಾರತೀಯ ಸಂವಿಧಾನ ವಿಭಾಗದಲ್ಲಿ 50 ಹಾಗೂ ಸಾಮಾನ್ಯ ಇಂಗ್ಲಿಷ್‌ನಲ್ಲಿ 0 ಸುತ್ತಿದ್ದ.

ಈತನ ಪ್ರವೇಶ ಪತ್ರ ಸಂಖ್ಯೆ 13ಎನ್‌ಸಿಎ61037 ಆಗಿತ್ತು. ಹೀಗೆ ಬಿಎ ಎರಡನೆ ಸೆಮಿಸ್ಟರ್‌ನಲ್ಲಿ ಅನುತ್ತೀರ್ಣನಾಗಿದ್ದ ಈ ವಿದ್ಯಾರ್ಥಿ 2015 ಮಾರ್ಚ್ 30ರಂದು ಬೆಂಗಳೂರು ವಿವಿ ನೀಡಿರುವ ಅಂಕಪಟ್ಟಿ 500 ಅಂಕಕ್ಕೆ 300 ಅಂಕ ಪಡೆದು ಉತ್ತೀರ್ಣನಾಗಿರುವುದಕ್ಕೆ ಸಾಕ್ಷಿಯಾಗಿದೆ. ಸಾಮಾನ್ಯ ಇಂಗ್ಲಿಷ್‌ನಲ್ಲಿ ಸೊನ್ನೆ ಸುತ್ತಿದ್ದ ಈ ವಿದ್ಯಾರ್ಥಿ ಬಳಿಕ ಇದೇ ವಿಷಯದಲ್ಲಿ 67 ಅಂಕ ಪಡೆದಿರುವುದು ಸಾಬೀತಾಗಿದೆ. ಇದು ಹೇಗೆ ಸಾಧ್ಯ ಎಂದು ವಿಶ್ವವಿದ್ಯಾನಿಲಯದಲ್ಲಿರುವ ಪ್ರೊಫೆಸರ್‌ಗಳು, ಉಪಕುಲಸಚಿವರು ಮಾತನಾಡಿಕೊಳ್ಳುತ್ತಿದ್ದಾರೆ. ಹೀಗೆ ಬೆಂಗಳೂರು ವಿವಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಉತ್ತೀರ್ಣರಾಗುವುದು ಹೊಸದೇನಲ್ಲ ಎಂಬ ಮಾತು ವಿವಿ ಅಂಗಳದಲ್ಲೇ ಕೇಳಿಬರುತ್ತಿದೆ. ಹೊರರಾಜ್ಯ ಹಾಗೂ ವಿದೇಶಿ ವಿದ್ಯಾರ್ಥಿಗಳಿಂದ ಡಾಲರ್ ಮೊತ್ತದಲ್ಲಿ ಕಪ್ಪ ಕಾಣಿಕೆ ಪಡೆಯುವ ಪ್ರಮುಖರೊಬ್ಬರು ರಾತ್ರೋರಾತ್ರಿ ಅನುತ್ತೀರ್ಣರಾದವರನ್ನು ಉತ್ತೀರ್ಣರನ್ನಾಗಿ ಮಾಡುವ ಕೈ ಚಳಕ ಹೊಂದಿದ್ದಾರೆ.

ವಿವಿಯ ಈ ಎಲ್ಲ ಅವಾಂತರಗಳಿಗೆ ಮೌಲ್ಯಮಾಪನ ವಿಭಾಗದ ಪ್ರಮುಖರೊಬ್ಬರು ಮುಖ್ಯ ಕಾರಣ ಎಂದು ಹೆಸರು ಹೇಳಲಿಚ್ಛಿಸದ ಅನೇಕರು ಮಾಹಿತಿ ಹೊರಹಾಕುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಡಾಲರ್ ಲೆಕ್ಕದಲ್ಲಿ ಹಣ ಪಡೆಯುತ್ತಿರುವ  ಇವರು ಯಾರನ್ನು ಬೇಕಾದರೂ ಉತ್ತೀರ್ಣ ಇಲ್ಲವೇ ಅನುತ್ತೀರ್ಣ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ವಿವಿ ಗೋಡೆಗಳೇ ಸಾರಿ ಸಾರಿ ಹೇಳುತ್ತಿವೆ. ಇದಕ್ಕೆ ಇತ್ತೀಚಿನ ಇನ್ನೊಂದು ನಿದರ್ಶನವೆಂದರೆ, ಬಿಎಡ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನೀಡಿರುವ ಅನುಮತಿ. ವಿವಿ ವ್ಯಾಪ್ತಿಯ ಬಿಎಡ್ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ವಿವಿಯಲ್ಲಿರುವ ಕೆಲ ಪಟಾಲಂಗಳು ಇವರೊಂದಿಗೆ ಸೇರಿಕೊಂಡು  ಈ ಅವಾಂತರ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ತಕ್ಷಣವೇ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಇತ್ತ ಗಮನ ಹರಿಸದಿದ್ದರೆ ಬೆಂಗಳೂರು ವಿವಿಗೆ ಕರ್ನಾಟಕ ಮುಕ್ತ ವಿವಿಗೆ ಬಂದ  ಗತಿಯೇ ಬರುವ ದಿನಗಳು ದೂರವಿಲ್ಲ.
– ರವೀಂದ್ರ

Write A Comment