ಕರ್ನಾಟಕ

ಮಕ್ಕಳ ಸಮಾನ ಪೋಷಣೆ ಹಕ್ಕು ಕಾನೂನು ಜಾರಿಗೆ ಆಗ್ರಹಿಸಿ ಧರಣಿ

Pinterest LinkedIn Tumblr

pvec21shrDad-2

ಮಕ್ಕಳ ಸಮಾನ ಪೋಷಣೆ ಹಕ್ಕನ್ನು ಕಡ್ಡಾಯಗೊಳಿಸುವಂತೆ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿ ‘ಕ್ರಿಸ್ಪ್‌’ ಸಂಸ್ಥೆಯ ಸದಸ್ಯರು ನಗರದ ಪುರಭವನದ ಎದುರು ಶನಿವಾರ ಧರಣಿ ನಡೆಸಿದರು ಪ್ರಜಾವಾಣಿ ಚಿತ್ರ

ಬೆಂಗಳೂರು: ತಂದೆ– ತಾಯಿ ಇಬ್ಬರಿಗೂ ಮಕ್ಕಳ ಸಮಾನ ಪೋಷಣೆ ಹಕ್ಕನ್ನು ಕಡ್ಡಾಯಗೊಳಿಸುವಂತೆ ಕಾನೂನಿಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿ ‘ವಿಶ್ವ ತಂದೆಯರ ದಿನ’ವಾದ ಶನಿವಾರ ‘ಕ್ರಿಸ್ಪ್’   (ಚಿಲ್ಡ್ರನ್ಸ್‌ ರೈಟ್ಸ್‌ ಇನಿಷಿಯೇಟಿವ್ ಫಾರ್‌ ಶೇರ್ಡ್‌ ಪೇರೆಂಟಿಂಗ್‌) ಸಂಸ್ಥೆಯ ಸದಸ್ಯರು ನಗರದ ಪುರಭವನದ ಎದುರು  ಧರಣಿ ನಡೆಸಿದರು.

ವಿಚ್ಛೇದನದ ನಂತರ ಮಕ್ಕಳ ಪೋಷಣೆಯಲ್ಲಿ ತಾಯಿಯಂತೆ, ತಂದೆಯ ಪಾತ್ರವೂ ಅತಿ ಮುಖ್ಯ. ಹಾಗಾಗಿ ಮಗುವಿನ ಪೋಷಣೆಯಲ್ಲಿ ಇಬ್ಬರಿಗೂ ಸಮಾನ ಹಕ್ಕು ಇರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದು ಧರಣಿನಿರತರು ಆಗ್ರಹಿಸಿದರು.

ನಂತರ ಮಾತನಾಡಿದ ‘ಕ್ರಿಸ್ಪ್‌’ ಸಂಸ್ಥೆಯ ಅಧ್ಯಕ್ಷ ಕುಮಾರ್‌ ವಿ. ಜಹಗೀರ್‌ದಾರ್‌, ‘ವಿಚ್ಛೇದನ ಗಂಡ– ಹೆಂಡತಿಗೆ ಮಾತ್ರವೇ ಹೊರತು, ಮಗುವಿಗಲ್ಲ. ಹಾಗಾಗಿ ಇಬ್ಬರೂ ಸಮಾನವಾಗಿ ಮಗುವಿನ ಪೋಷಣೆಯ ಜವಾಬ್ದಾರಿ  ಹೊರಬೇಕು’ ಎಂದರು.

‘ಮಕ್ಕಳ ಸಮಾನ ಪೋಷಣೆಗೆ  ಸಂಬಂಧಿಸಿದಂತೆ ಕಾನೂನಿಗೆ ತಿದ್ದುಪಡಿ ತರುವಂತೆ, ಕಾನೂನು ಆಯೋಗ ತನ್ನ ವರದಿಯಲ್ಲಿ ಶಿಫಾರಸು ಮಾಡಿದ್ದು, ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಅವರು ಹೇಳಿದರು.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಬೇರ್ಪಡಿಸಿ, ಮಕ್ಕಳ ಕಲ್ಯಾಣಕ್ಕಾಗಿ ಪ್ರತ್ಯೇಕ ಮಕ್ಕಳ ಕಲ್ಯಾಣ ಇಲಾಖೆ ಸ್ಥಾಪಿಸಬೇಕು. ಅಲ್ಲದೆ, ಮಕ್ಕಳ ಎರಡೂ ಕಡೆಯ ಅಜ್ಜ, ಅಜ್ಜಿಯರಿಗೆ ಮೊಮ್ಮಕ್ಕಳನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಬೇಕು. ಮಕ್ಕಳ ಸುಪರ್ದಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಎಟಿಎಂ’ಗಳಾದ ಗಂಡಂದಿರು!
‘ವಿಚ್ಛೇದನದ ನಂತರ ಮಗುವಿನ ಜಬಾಬ್ದಾರಿ ವಹಿಸಿಕೊಳ್ಳುವ ಪತ್ನಿಯರು, ವಿಚ್ಛೇದಿತ ಗಂಡನಿಂದ ಮಾಸಾಶನ ಪಡೆಯುವುದಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಹಣ ನೀಡುವ ಗಂಡ, ಮಗುವನ್ನು ಭೇಟಿಯಾಗಿ ಮಾತನಾಡಿಸಿದರೆ, ಅವರ ಮೇಲೆ ಹೆಂಡತಿಯರು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಾರೆ. ಗಂಡ ಪ್ರತಿ ತಿಂಗಳು ಹಣ ಕೊಡುವ ‘ಎಟಿಎಂ’ ಯಂತ್ರವಷ್ಟೆ ಆಗಿದ್ದಾನೆ. ಅವನಿಗೆ ತನ್ನ ಮಕ್ಕಳೊಂದಿಗೆ ಒಡನಾಟ ಹೊಂದುವ ಯಾವುದೇ ಅವಕಾಶ ಈಗಿನ ಕಾನೂನಿನಲ್ಲಿ ಇಲ್ಲ’ ಎಂದು ಜಹಗೀರ್‌ದಾರ್‌ ದೂರಿದರು.

Write A Comment