ಕರ್ನಾಟಕ

ಮೈಸೂರು ಅರಮನೆ ಆವರಣದಲ್ಲಿ ವಿಶ್ವಯೋಗ ದಿನಾಚರಣೆ

Pinterest LinkedIn Tumblr

mysore-yoga-2 ಮೈಸೂರು, ಜೂ.21-ವಿಶ್ವಯೋಗ ದಿನಾಚರಣೆಯ ಅಂಗವಾಗಿ ಅರಮನೆ ಆವರಣ ಸೇರಿದಂತೆ ನಗರದ ಹಲವೆಡೆ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 7 ಗಂಟೆಗೆ ಅರಮನೆ ಆವರಣದಲ್ಲಿ ಆರಂಭವಾದ  ಈ ಯೋಗ ವರುಣ ಸಂಚಲನದ ನಡುವೆಯೂ ಶ್ವೇತವಸ್ತ್ರ ಧರಿಸಿದ ಯೋಗಪಟುಗಳು ನೀಡಿದ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಈ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್‌ಸಿಂಹ, ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಸಚಿವ ಎಸ್.ಎ.ರಾಮದಾಸ್ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು. ಪ್ರಾರ್ಥನಾ ಸಂಕಲ್ಪದೊಂದಿಗೆ ಆರಂಭವಾದ ಯೋಗ ಪ್ರದರ್ಶನದಲ್ಲಿ ಸೂರ್ಯ ನಮಸ್ಕಾರ, ಭುಜಂಗಾಸನ, ಪದ್ಮಾಸನ ಸೇರಿದಂತೆ 15ಕ್ಕೂ ಹೆಚ್ಚು ಆಸನಗಳನ್ನು ಪ್ರದರ್ಶನ ಮಾಡಲಾಯಿತು.

ಮಹಿಳೆಯರು, ಪುರುಷರು, ಯುವಕ-ಯುವತಿಯರು ಅಬಾಲವೃದ್ಧರೂ ಸೇರಿದಂತೆ  2000ಕ್ಕೂ ಹೆಚ್ಚು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜಮನೆತನದ ಪ್ರಮೋದಾದೇವಿ ಒಡೆಯರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ರಾಜಮನೆತನದವರು ತಮ್ಮ ಅರಮನೆಯ ನಿವಾಸದಲ್ಲೇ ಈ ಯೋಗ ಕಾರ್ಯಕ್ರಮವನ್ನು ವೀಕ್ಷಿಸಿದರು. ಮತ್ತೊಂದು ಕಾರ್ಯಕ್ರಮ ನಗರದಲ್ಲಿರುವ ಗಣಪತಿ ಸಚ್ಚಿದಾನಂದಗ್ರಾಮದ ನಾದ ಮಂಟಪದಲ್ಲಿ ನಡೆಯಿತು. ಈ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ವಹಿಸಿದ್ದರು.

ಶ್ರೀರಾಮಕೃಷ್ಣಾಶ್ರಮದ ಸ್ವಾಮೀಜಿ, ಶ್ರೀ ಮಹೇಶಾತ್ಮಾನಂದ ಅವರು ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಯೋಗ ಮತ್ತು ಅದರ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.
ಅಖಿಲ ಭಾರತ ವಕ್ಫ್ ಶ್ರವಣ ಸಂಸ್ಥೆಯ ಮಕ್ಕಳಿಂದ ನಡೆದ ವಿಶೇಷ ಯೋಗ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಗಿತ್ತು.
ಆಶ್ರಮದ ವೇದ ವಿದ್ಯಾರ್ಥಿಗಳು ನಡೆಸಿದ ಚಂದ್ರ ನಮಸ್ಕಾರ ಎಲ್ಲರ ಮನ ಸೆಳೆಯಿತು.
ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರದವರು ಯೋಗ ಮತ್ತು ಸಂಗೀತಯೋಗ ಎಂಬ ಕಥಾರೂಪಕವನ್ನು ನಡೆಸಿಕೊಟ್ಟರು.
ಭಾಗವಹಿಸಿದವರಿಗೆ ಮಧ್ಯಾಹ್ನ ಭೋಜನ ನೀಡಲಾಗಿತ್ತು. ನಂತರ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ನಾದಯೋಗ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿವಿ ವತಿಯಿಂದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬೆಳಕು ಫೌಂಡೇಷನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ವಿಶ್ವಯೋಗ ದಿನಾಚರಣೆ ಅಂಗವಾಗಿ ಯೋಗ ಪ್ರದರ್ಶನ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Write A Comment