ಕರ್ನಾಟಕ

292 ಕೋಟಿ ವೆಚ್ಚದಲ್ಲಿ ಲಾಲ್‌ಬಾಗ್ ಅಭಿವೃದ್ಧಿ; ಸಿದ್ದರಾಮಯ್ಯ

Pinterest LinkedIn Tumblr

CM-In-lalbhagh

ಬೆಂಗಳೂರು, ಜೂ.21- ಲಾಲ್‌ಬಾಗ್ ಅಭಿವೃದ್ಧಿಗೆ ಸುಮಾರು 292ಕೋಟಿ  ರೂ.ಗಳ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. 6ನೇ ಬಾರಿಗೆ ನಗರ ಪ್ರದಕ್ಷಿಣೆ ಹಮ್ಮಿಕೊಂಡಿರುವ ಸಿದ್ದರಾಮಯ್ಯ ಅವರು, ಇಂದು ಲಾಲ್‌ಬಾಗ್‌ಗೆ ಭೇಟಿ ನೀಡಿ ಸುಮಾರು 240 ಎಕರೆ ವಿಸ್ತೀರ್ಣದ

ಲಾಲ್‌ಬಾಗ್‌ಅನ್ನು 5 ಕಿ.ಮೀ. ಸುತ್ತಳತೆಯ ರಸ್ತೆಯಲ್ಲಿ ಸಂಚರಿಸುವ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಲಾಲ್‌ಬಾಗ್‌ನ ಗಾಜಿನಮನೆ, ಪ್ರಾಣಿಗಳ ಆಕಾರದ ಗಿಡಗಳ ಉದ್ಯಾನವನ, 200 ವರ್ಷಗಳ ಹಳೆಯ ಅತ್ತಿಮರ, ಕೆಂಪೇಗೌಡ ಗೋಪುರ, ರೋಜ್‌ಗಾರ್ಡ್‌ನ್, ಲಾಲ್‌ಬಾಗ್ ಕೆರೆ ಮತ್ತಿತರ ಪ್ರವಾಸಿ ತಾಣಗಳನ್ನು ಸಿಎಂ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಲಾಲ್‌ಬಾಗ್ ಕಾಲ್‌ನಡಿಗೆದಾರರ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಪ್ಲ್ಯಾಸ್ಟಿಕ್ ನಿಷೇಧಿಸಬೇಕು ಮತ್ತು ಉದ್ಯಾನದ ಒಳಗೆ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು. ಪ್ಲ್ಯಾಸ್ಟಿಕ್ ನಿಷೇಧಕ್ಕೆ ಸ್ಥಳದಲ್ಲೇ ಸೂಚನೆ ನೀಡಿದ ಮುಖ್ಯಮಂತ್ರಿ, ವಾಹನ ಸಂಚಾರದ ಕುರಿತು ಪರಿಶೀಲಿಸುವುದಾಗಿ ಹೇಳಿದರು. ಲಾಲ್‌ಬಾಗ್ ಒಳಗೆ 108 ಅಡಿ ಎತ್ತರದ ಗಡಿಯಾರ ಗೋಪುರ ನಿರ್ಮಾಣದ ಪ್ರಸ್ತಾವನೆಯನ್ನು ಕಾಲ್‌ನಡಿಗೆದಾರರ ಸಂಘದ ಪದಾಧಿಕಾರಿಗಳು ಮುಂದಿಟ್ಟರು.  ಸ್ಥಳದಲ್ಲಿದ್ದ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರು, ಬಂಡೆಯ ಮೇಲೆ ಗಡಿಯಾರದ ಗೋಪುರ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು. ಆದರೆ, ಅದಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಿರೋಧವಿದೆ. ಈ ಬಂಡೆ ವಿಧಾನಸೌಧದವರೆಗೂ  ಹಬ್ಬಿದ್ದು, ಎರಡೂವರೆ ಸಾವಿರ ವರ್ಷದ ಹಳೆಯದೆಂದು ಅಂದಾಜಿಸಲಾಗಿದೆ. ಇದರ ಮೇಲೆ ಯಾವುದೇ ನಿರ್ಮಾಣ ಕಾರ್ಯ ಮಾಡುವುದನ್ನು ಪ್ರಾಚ್ಯ ವಸ್ತು ಇಲಾಖೆ ವಿರೋಧಿಸಲಿದೆ ಎಂದು ಅಧಿಕಾರಿಗಳು ಹೇಳಿದರು.
ಲಾಲ್‌ಬಾಗ್ ಕೆರೆಯ ನಡುವೆ ಗೋಪುರ ನಿರ್ಮಾಣದ ಕುರಿತು ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು.

ಲಾಲ್‌ಬಾಗ್ ಪ್ರವೇಶ ದರ ಹೆಚ್ಚಳ:
ಯಾವುದೇ ಸರ್ಕಾರಗಳು ಈವರೆಗೂ ಲಾಲ್‌ಬಾಗ್ ನಿರ್ವಹಣೆಗೆ ಹಣ ನೀಡುತ್ತಿರಲಿಲ್ಲ. ಈ ವರ್ಷ ನಿಮ್ಮ ಸರ್ಕಾರ 5 ಕೋಟಿ ರೂ. ಹಣ ಸಹಾಯ ನೀಡಿದೆ. ಅದರಲ್ಲಿ ಸೂಮಾರು 80 ಲಕ್ಷ ನಿರ್ವಹಣೆಗೆ ಖರ್ಚಾಗಲಿದೆ ಎಂದು ಅಧಿಕಾರಿಗಳು ವಿವರಿಸಿದರು.
ಲಾಲ್‌ಬಾಗ್‌ನಿಂದ ಆದಾಯ ಬರುವುದಿಲ್ಲವೇ ಎಂದು ಸಿಎಂ ಪ್ರಶ್ನಿಸಿದಾಗ ಉತ್ತರಿಸಿದ ಅಧಿಕಾರಿಗಳು, ಎರಡೂವರೆ ಕೋಟಿ ರೂ.ನಷ್ಟು ಪ್ರವೇಶ ತೆರಿಗೆ, 80 ಲಕ್ಷ ರೂ.ನಷ್ಟು ವಾಹನ ನಿಲುಗಡೆ ತೆರಿಗೆ ವಸೂಲಿಯಾಗುತ್ತದೆ.  ಆದರೆ, ಇದು ನಿರ್ವಹಣೆಗೇ ಖರ್ಚಾಗುವುದರಿಂದ ಅಭಿವೃದ್ಧಿಕಾರ್ಯಗಳನ್ನು ಕೈಗೊಳ್ಳಲು ಹಣವಿಲ್ಲದಾಗಿದೆ ಎಂದು ವಿವರಿಸಿದರು. ಪ್ರವೇಶ ದರ ಹೆಚ್ಚಳಕ್ಕೆ ಅವಕಾಶ ನೀಡುವಂತೆ ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಸಲಹೆ ನೀಡಿದರು. ಈಗ 10ರೂ. ಪ್ರವೇಶ ದರ ಇದೆ. ಅದನ್ನು 20ರೂ.ಗೆ ಹೆಚ್ಚಿಸಬೇಕೆಂದು ಯಲ್ಲಪ್ಪರೆಡ್ಡಿ ನೀಡಿದ ಸಲಹೆಗೆ ಅಧಿಕಾರಿಗಳು ಬೆಂಬಲ ಸೂಚಿಸಿದರು.

20ರೂ. ದೊಡ್ಡಮೊತ್ತವಲ್ಲ. ಹೆಚ್ಚಿಸಬಹುದೆಂದು ಸಿಎಂ ಹೇಳುತ್ತಿದ್ದಂತೆ, ಬಿಬಿಎಂಪಿ ಚುನಾವಣೆ ಮುಗಿಯುವವರೆಗೂ ಈ ವಿಷಯ ಪ್ರಸ್ತಾಪವಾಗುವುದೇ ಬೇಡ. ಅನಂತರ ಬೇಕಾದರೆ ಪರಿಶೀಲನೆ ಮಾಡಿ ಎಂದು ಉಗ್ರಪ್ಪ ಮತ್ತು ರಾಮಲಿಂಗಾರೆಡ್ಡಿ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಯಲ್ಲಪ್ಪ ರೆಡ್ಡಿ ನೇತೃತ್ವದಲ್ಲಿ ತಯಾರಿಸಲಾಗಿರುವ 292 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ  ನೀಡಿದರು. ಹೊಸ ಪ್ರಸ್ತಾವನೆಗಳಲ್ಲಿ  1ಕೋಟಿ ರೂ. ವೆಚ್ಚದಲ್ಲಿ  ಆಂಥೋರಿಯಂ ಹೌಸ್ ನಿರ್ಮಾಣ, 2 ಕೋಟಿ ರೂ.ಗಳಲ್ಲಿ ಕೀಟ ಭಕ್ಷಕ ಗಿಡಗಳ ಮನೆ, ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಫೋಟೋಗ್ಯಾಲರಿ ನಿರ್ಮಾಣ, 2 ಕೋಟಿ ರೂ. ವೆಚ್ಚದಲ್ಲಿ  ಪ್ಲಾಂಟ್ ಕನ್ಸರ್‌ವೇಟರಿ, ಫರ್ನ್‌ಹೌಸ್ ನಿರ್ಮಾಣ, ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಸೀತಾಳೆ ಗೃಹ ಅಭಿವೃದ್ಧಿ, ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪ್ರವೇಶ ದ್ವಾರಗಳ ಸೌಂದರ್ಯ ಹೆಚ್ಚಿಸುವ ಉನ್ನತಿ ಕಾಮಗಾರಿ, ಒಂದೂವರೆ ಕೋಟಿ ರೂ.ವೆಚ್ಚದಲ್ಲಿ 4 ಕಾರಂಜಿಗಳ ನವೀಕರಣ, 75ಲಕ್ಷ ರೂ. ವೆಚ್ಚದಲ್ಲಿ ಗಾಜಿನ ಮನೆ ದುರಸ್ತಿ, ಲಾಲ್‌ಬಾಗ್ ಕೆರೆಗೆ ನಾಲ್ಕು ಏರೇಟರ‌ಸ್  ಗಳ  ಅಳವಡಿಸಲು ಒಂದು ಕೋಟಿ, ಸಿದ್ದಾಪುರ ದ್ವಾರದಿಂದ ಶೀತಲಗೃಹದವರೆಗೆ ಪ್ರದೇಶ ಅಭಿವೃದ್ಧಿಗೆ 2 ಕೋಟಿ, ಅಕ್ವೇರಿಯಂ ನವೀಕರಣಕ್ಕೆ 2 ಕೋಟಿ, ರಸ್ತೆಗಳ ದುರಸ್ತಿಗೆ 2 ಕೋಟಿ ಸೇರಿದಂತೆ  ಒಟ್ಟು 292 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ವಿಕ ಒಪ್ಪಿಗೆ ನೀಡಿದ್ದಾರೆ.

Write A Comment