ಕರ್ನಾಟಕ

ಶಿವಮೊಗ್ಗದಲ್ಲಿ ಭಾರೀ ಮಳೆ : ಜಲಾಶಯಗಳು ಭರ್ತಿ

Pinterest LinkedIn Tumblr

TB-Dam-

ಶಿವಮೊಗ್ಗ, ಜೂ.21-ಅಬ್ಬರಿಸುತ್ತಿರುವ ಭಾರೀ ಮಳೆಗೆ ಜಿಲ್ಲೆಯ ಬಹುತೇಕ ಜಲಾಶಯಗಳು ಭರ್ತಿಯಾಗುತ್ತಿವೆ.  ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹೊಸ ದಾಖಲೆ ಸೃಷ್ಟಿಸಿದೆ. ಹುಲಿಕಲ್‌ನಲ್ಲಿ 153ಮಿ.ಮೀ., ಮಾಸ್ತಿಯಲ್ಲಿ 154 ಮಿ.ಮೀ ಹಾಗೂ ಎಡೂರಿನಲ್ಲಿ 170 ಮಿ.ಮೀ,

ಮಾಣಿಯಲ್ಲಿ 162 ಮಿ.ಮೀ, ಆಗುಂಬೆ 125 ಮಿ.ಮೀಟರ್‌ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತುಂಗಾ ಜಲಾಶಯ ಭರ್ತಿಯಾಗಿದ್ದು, ಎಲ್ಲಾ ಏಳು ಕ್ರಸ್ಟ್ ಗೇಟ್‌ಗಳನ್ನು ತೆರೆದು ಹೆಚ್ಚುವರಿ ನೀರನ್ನು ಹೊರಹಾಕಲಾಗುತ್ತಿದೆ. ಇನ್ನು ಭದ್ರಾ ಜಲಾಶಯದ ಗರಿಷ್ಠ 186 ಅಡಿಯಲ್ಲಿ 139 ಅಡಿ ನೀರು ತುಂಬಿದ್ದು, ಒಳಹರಿವು ಹೆಚ್ಚಾಗಿದ್ದು, ಇನ್ನು ನಾಲ್ಕೈದು ದಿನ ಮಳೆ ಮುಂದುವರೆದರೆ ಜಲಾಶಯ ಭರ್ತಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಲಿಂಗನಮಕ್ಕಿ ಮತ್ತು ಮಾಣಿ ಜಲಾಶಯವೂ ಬಹುತೇಕ  ಭರ್ತಿ ಹಂತಕ್ಕೆ ಮುಟ್ಟಿವೆ. ಒಟ್ಟಿನಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ.

ಮಳೆಗೆ ಮಲೆನಾಡು ಜಿತ್ : ಕತ್ತಲಲ್ಲಿ ಮುಳುಗಿದ ಗ್ರಾಮಗಳು
ಸಕಲೇಶಪುರ, ಜೂ.21- ಕಳೆದ ಕೆಲವು ದಿನಗಳಿಂದ ಎಡಬಿಡದೆ ಸುರಿದ ಬಿರುಗಾಳಿ ಸಹಿತ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನೂರಾರು ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಬಹುತೇಕ ಗ್ರಾಮಗಳು ವಿದ್ಯುತ್, ರಸ್ತೆ, ದೂರವಾಣಿ ಹಾಗೂ ಮೊಬೈಲ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಮುಳುಗುವಂತಾಗಿವೆ. ಇದರಿಂದ ಗ್ರಾಮೀಣ ಭಾಗದ ಜನರು ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ವರುಣನ ಆರ್ಭಟಕ್ಕೆ ತತ್ತರಗೊಂಡಿರುವ ರೈತರು ಹಾಗೂ ಕೂಲಿ ಕಾರ್ಮಿಕರು ತೋಟ, ಗದ್ದೆಗಳಿಗೆ ತೆರಳದೆ ಕೃಷಿ ಚಟುವಟಿಕೆ ಸ್ತಬ್ಧವಾಗಿದೆ. ಮರಗಳು ಬುಡಮೇಲಾಗಿ ಉರುಳಿರುವುದರಿಂದ ಬಹುತೇಕ ತೋಟಗಳು ನಲುಗಿದ್ದರೆ, ಕಾಫಿ, ಅಡಿಕೆ, ಮೆಣಸು ಬೆಳೆಗಳು ನಾಶವಾಗಿವೆ.

ವಿದ್ಯುತ್ ತಂತಿಗಳು ತುಂಡಾಗಿ ಶೇ.90ಕ್ಕೂ ಹೆಚ್ಚು ಗ್ರಾಮಗಳು ವಿದ್ಯುತ್ ಸಂಪರ್ಕ ಕಡಿದುಕೊಂಡಿವೆ. ಹಲವೆಡೆ ರಸ್ತೆಗೆ ಅಡ್ಡಲಾಗಿ ಮರಗಳು ಉರುಳಿ, ಇದುವರೆಗೂ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಹೇಮಾವತಿ ನದಿಪಾತ್ರದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ನೀರಿನ ಹರಿವು ಹೆಚ್ಚಳವಾಗಿದೆ. ಉಳಿದಂತೆ ಪಶ್ಚಿಮಘಟ್ಟದ ದಟ್ಟ ಕಾಡು-ಮೇಡುಗಳಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆ ಹೊಳೆ, ಹೊಂಗಡಹಳ್ಳ ಹೊಳೆ, ಕೀರಿಹೊಳೆ, ಕೆಂಪುಹೊಳೆ, ಅಡ್ಡಹೊಳೆ, ಜಪಾವತಿ ಹೊಳೆ ಸೇರಿದಂತೆ ಬಹುತೇಕ ಹಳ್ಳಕೊಳ್ಳಗಳು ರಭಸದಿಂದ ಹರಿಯುತ್ತಿವೆ. ಈ ಭಾಗದ ಎಲ್ಲ ಝರಿ-ಜಲಪಾತಗಳು ಉಕ್ಕಿ ಧುಮುಕುತ್ತ ಮತ್ತೆ ಜೀವಕಳೆ ಪಡೆದಿವೆ.

Write A Comment