ಕರ್ನಾಟಕ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ “ಶಿಲ್ಪಾ” ಯೋಗ

Pinterest LinkedIn Tumblr

 shilpa yoga

ಬೆಂಗಳೂರು, ಜೂ.21: ವಾರಕ್ಕೆ ಕನಿಷ್ಠ ಮೂರು ದಿನ ತಲಾ 15 ನಿಮಿಷ ಯೋಗ ಮಾಡಿದರೆ ರೋಗದಿಂದ ದೂರವಾಗಬಹುದು ಎಂದು ಖ್ಯಾತ ಚಿತ್ರನಟಿ ಹಾಗೂ ಯೋಗ ಪಟು ಶಿಲ್ಪಾಶೆಟ್ಟಿ ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದಿನಕ್ಕೊಂದು ಆಸನ ಹಾಕುವುದರಿಂದ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಾಣಬಹುದು. ನನ್ನ ಈ ಲವಲವಿಕೆಗೆ ಯೋಗವೇ ಕಾರಣ ಎಂದು ಶಿಲ್ಪಾ ಇದೇ ಸಂದರ್ಭದಲ್ಲಿ ತಮ್ಮ ಸೌಂದರ್ಯದ ಗುಟ್ಟು ರಟ್ಟು ಮಾಡಿದರು. ಯೋಗ ಮಾಡುವುದರಿಂದ ದೇಹ, ಮನಸ್ಸು ಮತ್ತು ಆತ್ಮಗಳ ನಡುವೆ ಏಕಾತನತೆ ಮೂಡುತ್ತದೆ. ಇಂದಿನ ಯುವಜನತೆ ದೇಹ ಕಸರತ್ತಿಗಾಗಿ ಜಿಮ್‌ಗೆ ಅಲೆದಾಡುತ್ತಿದ್ದ ಸಂದರ್ಭದಲ್ಲೇ ನಾನು ನನ್ನ ಯೋಗ ಸಿಡಿ ಬಿಡುಗಡೆ ಮಾಡಿದೆ. ಅದಕ್ಕೆ ಉತ್ತಮ ಜನಬೆಂಬಲ ವ್ಯಕ್ತವಾಗಿದೆ ಎಂದರು.

ಯೋಗದಿಂದ ದೇಹ ಸದೃಢಗೊಳ್ಳುವುದೇ ಅಲ್ಲದೆ ಶಾಂತಿ, ನೆಮ್ಮದಿ ಏಕಾಗ್ರತೆ ಲಭಿಸಲಿದೆ ಹೀಗಾಗಿ ಪ್ರತಿಯೊಬ್ಬರು ಯೋಗ ಮಾಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಕರ್ನಾಟಕದ ಹುಡುಗಿ ಎನ್ನುವುದು ಹೆಮ್ಮೆ: ನಾನು ಬೆಂಗಳೂರಿಗೆ ಬಂದು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸ ತಂದಿದೆ. ನಾನು ಕರ್ನಾಟಕದ ಹುಡುಗಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ಶಿಲ್ಪಾಶೆಟ್ಟಿ ತಮ್ಮ ಕನ್ನಡ ಪ್ರೇಮ ಪ್ರದರ್ಶಿಸಿದರು. ಯೋಗದ ಎಲ್ಲಾ ಆಸನಗಳು ಮುಖ್ಯ ಆದರೆ, ಸೂರ್ಯ ನಮಸ್ಕಾರ ನನ್ನ ನೆಚ್ಚಿನ ಆಸನ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕನ್ನಡ ಚಿತ್ರದಲ್ಲಿ ನಟಿಸುವ ಆಸೆ ಇದೆ. ಆದರೆ, ಸಧ್ಯ ಸಂಸಾರ, ಮಗನ ಕಾಳಜಿ ವಹಿಸಿಕೊಂಡಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ. ಅದಷ್ಟು ಬೇಗ ಉತ್ತಮ ಅವಕಾಶ ಸಿಕ್ಕರೆ ಕನ್ನಡ ಚಿತ್ರಗಳಲ್ಲಿ ನಟಿಸುತ್ತೇನೆ ಎಂದು ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ವಾಸಗುರು ವಚನಾನಂದ ಸ್ವಾಮಿಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ರಾಮಲಿಂಗಾರೆಡ್ಡಿ, ಆರ್.ವಿ.ದೇಶಪಾಂಡೆ, ರೋಷನ್‌ಬೇಗ್, ಡಾ.ಶರಣ್‌ಪ್ರಕಾಶ್ ಪಾಟೀಲ್, ಶಾಸಕರಾದ ಬೈರತಿ ಬಸವರಾಜ್, ವಿ.ಎಸ್.ಉಗ್ರಪ್ಪ, ಹಿರಿಯ ಐಎಎಸ್ ಅಧಿಕಾರಿ ನಂದಕುಮಾರ್, ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜ್ ಮತ್ತಿತರರು ವೇದಿಕೆಯಲ್ಲಿ ಹಾಜರಿದ್ದರು.

Write A Comment